ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸಕ್ತಿ, ಹಾಜರಾತಿ ಆಧಾರದ ಮೇಲೆ ಸಮಿತಿಗಳಿಗೆ ಸಂಸದರನ್ನು ನೇಮಿಸಲು ನಾಯ್ಡು ಸಲಹೆ

Last Updated 24 ಸೆಪ್ಟೆಂಬರ್ 2021, 4:10 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ತಿನ ಸ್ಥಾಯಿ ಸಮಿತಿಗಳ ವಾರ್ಷಿಕ ಪುನರ್‌ರಚನೆಯ ಸಂದರ್ಭದಲ್ಲಿ ಸಂಸದರ ಆಯ್ಕೆ ಪ್ರಕ್ರಿಯೆಗಳ ಕುರಿತು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ದು ಕೆಲ ಸಲಹೆಗಳನ್ನು ನೀಡಿದ್ದಾರೆ.

ಆಸಕ್ತಿ ಮತ್ತು ಹಾಜರಾತಿಯ ಆಧಾರದ ಮೇಲೆ ಸಂಸದರನ್ನು ಸಂಸತ್ತಿನ ಸ್ಥಾಯಿ ಸಮಿತಿಗಳಿಗೆ ನಾಮನಿರ್ದೇಶನ ಮಾಡುವಂತೆ ರಾಜಕೀಯ ಪಕ್ಷಗಳ ನಾಯಕರನ್ನು ನಾಯ್ಡು ಒತ್ತಾಯಿಸಿದ್ದಾರೆ.

ರಾಜ್ಯಸಭೆಯಲ್ಲಿರುವ 92 ಬಿಜೆಪಿ ಸಂಸದರ ಸರಾಸರಿ ಹಾಜರಾತಿಯು ಶೇ 56.56 ರಷ್ಟಿದ್ದು, 38 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್‌ನ ಹಾಜರಾತಿಯು ಶೇ 41.86 ರಷ್ಟಿದೆ. ಮೂರು ಸದಸ್ಯರನ್ನು ಹೊಂದಿರುವ ಎಎಪಿಯು ಅತ್ಯಧಿಕ ಹಾಜರಾತಿಯನ್ನು (ಶೇ 77.19) ಹೊಂದಿದೆ. ಮೂರು ಸದಸ್ಯರ ಅಕಾಲಿ ದಳವು ಶೇ 75.55ರಷ್ಟು ಹಾಜರಾತಿ ಹೊಂದಿದ್ದರೆ, ಐದು ಸದಸ್ಯರ ಜೆಡಿಯು ಕನಿಷ್ಠ ಹಾಜರಾತಿಯನ್ನು(ಶೇ 16.17) ದಾಖಲಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಮಿತಿಗಳ ರಚನೆ ಕುರಿತು ನಾಯ್ಡು ನೀಡಿರುವ ಸಲಹೆಗಳ ಬಗ್ಗೆ ತಿಳಿಸಲು ರಾಜ್ಯಸಭಾ ಪ್ರಧಾನ ಕಾರ್ಯದರ್ಶಿ ಡಾ. ಪಿ.ಪಿ.ಕೆ. ರಾಮಚಾರ್ಯಲು ವಿವಿಧ ಪಕ್ಷಗಳ ನಾಯಕರೊಂದಿಗೆ ಮಾತನಾಡಿದ್ದಾರೆ. ಆ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ನಾಯಕರು, 'ಕೋವಿಡ್ ನಿರ್ಬಂಧಗಳು ಹಾಗೂ ಚುನಾವಣೆಗಳು ಕೆಲವು ಸಂಸದರ ಕಡಿಮೆ ಹಾಜರಾತಿಗೆ ಕಾರಣ' ಎಂದು ತಿಳಿಸಿದ್ದಾರೆ. ಸಂಸತ್ತಿನ ಎಲ್ಲಾ ಸ್ಥಾಯಿ ಸಮಿತಿಗಳಲ್ಲಿ ಬಿಜೆಪಿಯು 4 ರಿಂದ 5 ಸಂಸದರನ್ನು ಹೊಂದಿದ್ದರೆ, 15 ಸಮಿತಿಗಳಲ್ಲಿ ತಲಾ ಇಬ್ಬರು ಸಂಸದರನ್ನು ಮತ್ತು ಎಂಟರಲ್ಲಿ ಒಬ್ಬರನ್ನು ಕಾಂಗ್ರೆಸ್‌ ಹೊಂದಿದೆ.

ಸಂಸತ್ತಿನಲ್ಲಿ 24 ಇಲಾಖೆಗಳಿಗೆ ಸಂಬಂಧಿಸಿದ ಸ್ಥಾಯಿ ಸಮಿತಿಗಳಿವೆ. 16 ಸಮಿತಿಗಳು ಲೋಕಸಭೆಯ ಅಡಿಯಲ್ಲಿ ಮತ್ತು 8 ರಾಜ್ಯಸಭೆಯ ಅಡಿಯಲ್ಲಿ ಬರುತ್ತವೆ. ಪ್ರತಿ ಸಮಿತಿಯು 31 ಸದಸ್ಯರನ್ನು ಒಳಗೊಂಡಿದೆ. ಅದರಲ್ಲಿ ಲೋಕಸಭೆಯಿಂದ 20 ಮತ್ತು ರಾಜ್ಯಸಭೆಯಿಂದ 11 ಸಂಸದರನ್ನು ನೇಮಿಸಲಾಗುತ್ತದೆ.

ರಕ್ಷಣಾ ಸಮಿತಿಯ ಸಭೆಗಳಲ್ಲಿ ಬಿಜೆಪಿ ಸಂಸದರ ಹಾಜರಾತಿಯು ಶೇ 87.5 ರಷ್ಟಿದೆ. ರಾಸಾಯನಿಕ ಹಾಗೂ ರಸಗೊಬ್ಬರ ಸಭೆಗಳಲ್ಲಿ ಶೇ 83.33, ಸಿಬ್ಬಂದಿ, ಪಿಂಚಣಿ ಹಾಗೂ ಸಾರ್ವಜನಿಕ ಕುಂದುಕೊರತೆಗೆ ಸಂಬಂಧಿಸಿದ ಸಭೆಗಳಲ್ಲಿ ಶೇ 79.16, ಗೃಹ ವ್ಯವಹಾರಗಳಿಗೆ ಸಂಬಂಧಿಸಿದ ಸಭೆಗಳಲ್ಲಿ ಶೇ 77.63, ಕಲ್ಲಿದ್ದಲು ಹಾಗೂ ಉಕ್ಕಿಗೆ ಸಂಬಂಧಿಸಿದ ಸಭೆಗಳಲ್ಲಿ ಶೇ 75, ಉದ್ಯಮ (ಶೇ 72.72) ಮತ್ತು ಶಿಕ್ಷಣ (ಶೇ 66.66) ಹಾಜರಾತಿಯನ್ನು ಬಿಜೆಪಿ ಸಂಸದರು ಹೊಂದಿದ್ದಾರೆ.

21 ಸಮಿತಿಗಳ ಸಭೆಗಳಲ್ಲಿ ಬಿಜೆಪಿ ಸಂಸದರ ಹಾಜರಾತಿ ಶೇ 50 ಕ್ಕಿಂತ ಹೆಚ್ಚಾಗಿದ್ದರೆ, ಗ್ರಾಮೀಣ ಅಭಿವೃದ್ಧಿ, ಮಾಹಿತಿ ತಂತ್ರಜ್ಞಾನ ಮತ್ತು ಇಂಧನ ಸಮಿತಿಗಳಿಗೆ ಶೇ 50 ರಷ್ಟಿದೆ.

ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಭೆಗಳಲ್ಲಿ ಕಾಂಗ್ರೆಸ್‌ ಶೇ 100 ರಷ್ಟು ಹಾಜರಾತಿಯನ್ನು ಹೊಂದಿದೆ. ಕೃಷಿ ಸಭೆಗಳಲ್ಲಿ (ಶೇ 93.33), ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಸಭೆಗಳಲ್ಲಿ (ಶೇ 88.88) ಜಲ ಸಂಪನ್ಮೂಲಗಳ ಸಭೆಗಳಲ್ಲಿ (ಶೇ 83.33), ಶಿಕ್ಷಣ (ಶೇ 83.33), ಗೃಹ ವ್ಯವಹಾರಗಳ (ಶೇ 78.94) ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಸಭೆಗಳಲ್ಲಿ (ಶೇ 70.83) ರಷ್ಟು ಹಾಜರಾತಿಯನ್ನು ಕಾಂಗ್ರೆಸ್ ಹೊಂದಿದೆ.

ಹಣಕಾಸು ಸಮಿತಿ ಸಭೆಗಳಲ್ಲಿ ಕಾಂಗ್ರೆಸ್ ಸಂಸದರ ಹಾಜರಾತಿ ಶೇ 3.12 ರಷ್ಟಿದ್ದು, ವಿದೇಶಾಂಗ ವ್ಯವಹಾರಕ್ಕೆ ಸಂಬಂಧಿಸಿದ ಸಭೆಗಳಲ್ಲಿ ಶೇ 8.92 ರಷ್ಟಿದೆ. ವಾಣಿಜ್ಯ ಸಭೆಗಳಲ್ಲಿ ಶೇ 13 ಮತ್ತು ಇಂಧನ ಸಭೆಗಳಲ್ಲಿ ಶೇ 21.42 ರಷ್ಟು ಹಾಜರಾತಿಯನ್ನು ಕಾಂಗ್ರೆಸ್‌ ಸಂಸದರು ಹೊಂದಿದ್ದಾರೆ. ಕಾಂಗ್ರೆಸ್ ಸಂಸದರು ಸದಸ್ಯರಾಗಿರುವ 23 ಸಮಿತಿಗಳ ಪೈಕಿ 11 ರಲ್ಲಿ ಶೇ .50 ಕ್ಕಿಂತ ಕಡಿಮೆ ಹಾಜರಾತಿಯನ್ನು ದಾಖಲಿಸಿರುವುದು ತಿಳಿದುಬಂದಿದೆ.

ಬಿಜೆಪಿಯಿಂದ ಹತ್ತು ಸಂಸದರು ಶೇ 100ರಷ್ಟು ಹಾಜರಾತಿಯನ್ನು ಹೊಂದಿದ್ದಾರೆ. ಕಾಂಗ್ರೆಸ್‌ನಿಂದ ಮೂವರು, ಎಸ್‌.ಪಿ, ಟಿ.ಆರ್‌.ಎಸ್‌ ಮತ್ತು ಡಿ.ಎಂ.ಕೆ ಇಂದ ತಲಾ ಒಬ್ಬರು ಸಂಸದರು ಪೂರ್ಣ ಹಾಜರಾತಿಯನ್ನು ದಾಖಲಿಸಿದ್ದಾರೆ.

ಇತರ ಪಕ್ಷಗಳ ಸಂಸದರ ಹಾಜರಾತಿ ಇಂತಿದೆ...

ವೈಎಸ್‌ಆರ್ ಕಾಂಗ್ರೆಸ್ (ಆರು ಸಂಸದರು) ಶೇ 66.66, ಬಿಜೆಡಿ (ಒಂಬತ್ತು ಸಂಸದರು) ಶೇ 61.65, ಟಿಆರ್‌ಎಸ್ (ಏಳು ಸಂಸದರು) ಶೇ 43.56, ಡಿಎಂಕೆ (ಏಳು ಸಂಸದರು) ಶೇ 41.34, ಎಸ್‌ಪಿ (ಎಂಟು ಸಂಸದರು) ಶೇ 37.98 , ಆರ್‌ಜೆಡಿ (ಐದು ಸಂಸದರು) ಶೇ 36.36, ಸಿಪಿಐ-ಎಂ (ಏಳು ಸಂಸದರು) ಶೇ 33.96, ಎಐಎಡಿಎಂಕೆ (ಒಂಬತ್ತು ಸಂಸದರು) ಶೇ 31.09, ಬಿಎಸ್‌ಪಿ(ಐದು ಸಂಸದರು) ಶೇ 26.66 ಮತ್ತು ತೃಣಮೂಲ ಕಾಂಗ್ರೆಸ್‌(ಹದಿಮೂರು ಸಂಸದರು) ಶೇ. 24.44 ರಷ್ಟು ಹಾಜರಾತಿಯನ್ನು ಹೊಂದಿದ್ದಾರೆ.

ತಲಾ ಒಬ್ಬರು ಸದಸ್ಯರನ್ನು ಹೊಂದಿರುವ 14 ಪಕ್ಷಗಳ ಹಾಜರಾತಿ ಶೇ. 23 ರಷ್ಟಿದ್ದು, ಕೆ. ರವೀಂದ್ರ ಕುಮಾರ್ (ಟಿಡಿಪಿ) ಶೇ .90 ರಷ್ಟು ಹಾಜರಾತಿ ಹೊಂದಿದ್ದಾರೆ. ಐವರು ಸ್ವತಂತ್ರ ಮತ್ತು ನಾಮನಿರ್ದೇಶಿತ ಸದಸ್ಯರು ಶೇ 9 ಹಾಜರಾತಿಯನ್ನು ದಾಖಲಿಸಿದ್ದಾರೆ.s

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT