ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಳ–ಅಗಲ: ರಾಜಕಾರಣಿಗಳ ಪಕ್ಷಾಂತರ ಪ್ರಹಸನ

ಬಿಜೆಪಿಗೆ ಲಾಭ; ಕಾಂಗ್ರೆಸ್ ಕಳೆದುಕೊಂಡಿದ್ದು ಹೆಚ್ಚು; ನಂತರದ ಸ್ಥಾನದಲ್ಲಿ ಬಿಎಸ್‌ಪಿ–ಎಡಿಆರ್‌ ವಿಶ್ಲೇಷಣೆ
Last Updated 6 ಅಕ್ಟೋಬರ್ 2021, 20:30 IST
ಅಕ್ಷರ ಗಾತ್ರ

2014ರಲ್ಲಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕದ ಏಳು ವರ್ಷಗಳಲ್ಲಿ ಪಕ್ಷಾಂತರ ವಿಪರೀತ ಎನಿಸುವಷ್ಟು ನಡೆದಿದೆ. ಎಲ್ಲ ಪಕ್ಷಗಳನ್ನೂ ಇದು ಬಾಧಿಸಿದೆ. ಆದರೆ ಅತಿಹೆಚ್ಚು ಕಳೆದುಕೊಂಡಿರುವುದು ಕಾಂಗ್ರೆಸ್ ಪಕ್ಷ. ಬಿಜೆಪಿಗೆ ಅತಿಹೆಚ್ಚಿನ ಜನರು ವಲಸೆ ಬಂದಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ತಿಳಿಸಿದೆ

***

ಕಾಂಗ್ರೆಸ್

ಏಳು ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷದ ಹಲವು ಚುನಾವಣಾ ಅಭ್ಯರ್ಥಿಗಳು, ಸಂಸದರು ಮತ್ತು ಶಾಸಕರು ಇತರ ಪಕ್ಷಗಳ ಪಾಲಾಗಿದ್ದಾರೆ. 222 ಮಂದಿ ಅಭ್ಯರ್ಥಿಗಳು, 177 ಸಂಸದರು/ಶಾಸಕರು ಪಕ್ಷವನ್ನು ತೊರೆದು ಹೊರನಡೆದಿದ್ದಾರೆ. ಮಧ್ಯಪ್ರದೇಶದ ಪ್ರಮುಖ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಮತ್ತವರ ಬಣದ ಹಲವು ಶಾಸಕರು ಪಕ್ಷದ ವಿರುದ್ಧ ಬಂಡಾಯವೆದ್ದು, ಬಿಜೆಪಿಗೆ ಹೋಗಿದ್ದಾರೆ.

ಒಟ್ಟಾರೆ 399 ರಾಜಕಾರಣಿಗಳು ಕಾಂಗ್ರೆಸ್‌ಗೆ ವಿದಾಯ ಹೇಳಿದ್ದಾರೆ. ಇದೇ ಅವಧಿಯಲ್ಲಿ 115 ಅಭ್ಯರ್ಥಿಗಳು ಹಾಗೂ 61 ಮಂದಿ ಸಂಸದರು/ಶಾಸಕರು ಕಾಂಗ್ರೆಸ್ ತೆಕ್ಕೆಗೆ ಸೇರಿದ್ದಾರೆ.

***

ಬಿಜೆಪಿ

ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಕಳೆದುಕೊಂಡಿದ್ದಕ್ಕಿಂತ ಗಳಿಸಿದ್ದು ಹೆಚ್ಚು. ಬಿಜೆಪಿಯು 111 ಅಭ್ಯರ್ಥಿಗಳು ಹಾಗೂ 33 ಸಂಸದರು/ಶಾಸಕರನ್ನು ಕಳೆದುಕೊಂಡಿದೆ. 2014ರಿಂದ ಇಲ್ಲಿಯವರೆಗೆ 253 ಅಭ್ಯರ್ಥಿಗಳು ಹಾಗೂ 173 ಸಂಸದರು/ಶಾಸಕರು ಕಮಲ ಪಾಳಯವನ್ನು ಸೇರ್ಪಡೆಯಾಗಿದ್ದಾರೆ. ಪಂಜಾಬ್‌ನಲ್ಲಿ ನವಜೋತ್ ಸಿಂಗ್ ಸಿಧು ಅವರಂತಹ ಮುಖಂಡರು ಕಾಂಗ್ರೆಸ್‌ಗೆ ಹೋದರು.

***

ಬಿಎಸ್‌ಪಿ

ಕಾಂಗ್ರೆಸ್ ಬಳಿಕ ಅತಿಹೆಚ್ಚು ಜನಪ್ರತಿನಿಧಿಗಳನ್ನು ಕಳೆದುಕೊಂಡಿರುವುದು ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ). 153 ಅಭ್ಯರ್ಥಿಗಳು ಹಾಗೂ 20 ಸಂಸದರು/ಶಾಸಕರು ಚುನಾವಣೆಗಳ ವೇಳೆ ಬಿಎಸ್‌ಪಿಯನ್ನು ತೊರೆದಿದ್ದಾರೆ. ಆದರೆ, 65 ಅಭ್ಯರ್ಥಿಗಳು ಹಾಗೂ 12 ಸಂಸದರು/ಶಾಸಕರು ಪಕ್ಷಕ್ಕೆ ಹೊಸದಾಗಿ ಪ್ರವೇಶ ಪಡೆದಿದ್ದಾರೆ.

ರಾಜಸ್ಥಾನದಲ್ಲಿ ಅಶೋಕ್ ಗೆಹಲೋತ್ ಸರ್ಕಾರವನ್ನು ಉಳಿಸಲು ಬಿಎಸ್‌ಪಿ ಶಾಸಕರು ಅವರ ಬೆನ್ನಿಗೆ ನಿಂತರು. ಬಿಜೆಪಿಯ ರಾಜ್ಯ ಘಟಕವನ್ನೇ ಕಾಂಗ್ರೆಸ್ ಜೊತೆ ವಿಲೀನ ಮಾಡಿರುವುದಾಗಿ ಶಾಸಕರು ಪತ್ರ ನೀಡಿದ್ದರು.

***

ಎಐಎಡಿಎಂಕೆ‌

ಎಐಎಡಿಎಂಕೆ‌ಯ ಐವರು ಅಭ್ಯರ್ಥಿಗಳು ಹಾಗೂ ಎಂಟು ಜನ ಶಾಸಕರು ಬೇರೆ ಪಕ್ಷಗಳಿಗೆ ಸೇರಿದ್ದಾರೆ. ಅದೇ ವೇಳೆಗೆ 6 ಜನ ಅಭ್ಯರ್ಥಿಗಳು ಹಾಗೂ ಇಬ್ಬರು ಶಾಸಕರು ಇತರ ಪಕ್ಷಗಳಿಂದ ಬಂದಿದ್ದಾರೆ.

***

ಡಿಎಂಕೆ

ಕಳೆದ ಏಳು ವರ್ಷಗಳಲ್ಲಿ ಬೇರೆ ಪಕ್ಷಗಳ ಐವರು ಅಭ್ಯರ್ಥಿಗಳು ಹಾಗೂ ಮೂವರು ಶಾಸಕರು ಡಿಎಂಕೆ ಪಕ್ಷ ಸೇರಿದ್ದಾರೆ. ಇಲ್ಲಿನ ನಾಲ್ವರು ಚುನಾವಣಾ ಅಭ್ಯರ್ಥಿಗಳು ಹಾಗೂ ಇಬ್ಬರು ಶಾಸಕರು ಬೇರೆ ಪಕ್ಷಗಳಿಗೆ ಸೇರ್ಪಡೆಯಾಗಿದ್ದಾರೆ.

***

ತೃಣಮೂಲ ಕಾಂಗ್ರೆಸ್‌

ಕಳೆದ ಏಳು ವರ್ಷಗಳಲ್ಲಿ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಪಕ್ಷದಿಂದ 26 ಶಾಸಕರು ಹಾಗೂ 31 ಜನ ಅಭ್ಯರ್ಥಿಗಳು ಬೇರೆ ಪಕ್ಷಕ್ಕೆ ಹೋಗಿದ್ದಾರೆ. ಅದೇ ವೇಳೆಗೆ ಬೇರೆ ಪಕ್ಷದಿಂದ 31 ಶಾಸಕರು ಹಾಗೂ 23 ಅಭ್ಯರ್ಥಿಗಳು ಟಿಎಂಸಿ ಸೇರ್ಪಡೆಯಾಗಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಪಕ್ಷದಿಂದ ಶಾಸಕರ ದೊಡ್ಡ ದಂಡೇ ಬಿಜೆಪಿ ಸೇರಿತು. ಅವರಲ್ಲಿ ಸುವೇಂದು ಅಧಿಕಾರಿ, ಮುಕುಲ್‌ ರಾಯ್‌ ಅವರಂಥ ಪ್ರಮುಖ ನಾಯಕರು ಬಿಜೆಪಿ ಸೇರಿದರು.

ಆದರೆ, ಜೂನ್‌ನಲ್ಲಿ ಬಿಜೆಪಿಯ ಶಾಸಕರಾಗಿದ್ದ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಲ್ಲಿದ್ದ ಮುಕುಲ್‌ ರಾಯ್ ಮತ್ತೆ ಟಿಎಂಸಿಗೆ ಮರಳಿದ್ದಾರೆ. ಅವರೊಂದಿಗೆ, ಅವರ ಆಪ್ತರಾದ ಬಿಜೆಪಿ ಶಾಸಕರಾದ ಸುಮನ್‌ ರಾಯ್‌, ವಿಶ್ವಜಿತ್‌ ದಾಸ್‌, ತನ್ಮಯ್‌ ಘೋಷ್‌ ಕೂಡ ಟಿಎಂಸಿಗೆ ವಾಪಸಾಗಿದ್ದಾರೆ. ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ಬಾಬುಲ್‌ ಸುಪ್ರಿಯೊ ಕಳೆದ ತಿಂಗಳು ಟಿಎಂಸಿಗೆ ಸೇರ್ಪಡೆಯಾದ ಪ್ರಮುಖರಲ್ಲಿ ಒಬ್ಬರು.

***

ಟಿಡಿಪಿ

ತೆಲುಗು ದೇಶಂ ಪಕ್ಷ (ಟಿಡಿಪಿ)ಯಿಂದ ಕಳೆದ ಏಳು ವರ್ಷಗಳಲ್ಲಿ 32 ಅಭ್ಯರ್ಥಿಗಳು ಹಾಗೂ 26 ಶಾಸಕರು ಹೊರ ನಡೆದಿದ್ದಾರೆ. ಅದೇ ವೇಳೆಗೆ, ಬೇರೆ ಪಕ್ಷಗಳ 11 ಜನ ಚುನಾವಣಾ ಅಭ್ಯರ್ಥಿಗಳು ಹಾಗೂ 16 ಶಾಸಕರು ಟಿಡಿಪಿ ಸೇರಿದ್ದಾರೆ.
***

ಎಸ್‌ಪಿ

ಉತ್ತರ ಪ್ರದೇಶದ ಪ್ರಮುಖ ರಾಜಕೀಯ ಪಕ್ಷವಾಗಿರುವ ಸಮಾಜವಾದಿ ಪಕ್ಷದಿಂದ (ಎಸ್‌ಪಿ) ಈ ಏಳು ವರ್ಷಗಳ ಅವಧಿಯಲ್ಲಿ 60 ಅಭ್ಯರ್ಥಿಗಳು, 18 ಸಂಸದರು/ಶಾಸಕರು ಹೊರಬಂದಿದ್ದಾರೆ. ಈ ಸಮಯದಲ್ಲಿ 29 ಅಭ್ಯರ್ಥಿಗಳು ಹಾಗೂ 13 ಮಂದಿ ಸಂಸದರು/ಶಾಸಕರು ಪಕ್ಷವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

***

ಜೆಡಿಯು

ಜೆಡಿಯು ಪಕ್ಷದಿಂದ 59 ಅಭ್ಯರ್ಥಿಗಳು ಹಾಗೂ 12 ಮಂದಿ ಸಂಸದರು/ಶಾಸಕರು ಬೇರೆ ಪಕ್ಷಕ್ಕೆ ಹೋಗಿದ್ದರೆ, ಇತರ ಪಕ್ಷದಿಂದ 23 ಅಭ್ಯರ್ಥಿಗಳು ಹಾಗೂ 12 ಮಂದಿ ಶಾಸಕರು ಸೇರ್ಪಡೆಯಾಗಿದ್ದಾರೆ.

***

ಎನ್‌ಸಿಪಿ

ಎನ್‌ಸಿಪಿಯ 52 ಅಭ್ಯರ್ಥಿಗಳು ಹಾಗೂ 25 ಶಾಸಕರು ಬೇರೆ ಪಕ್ಷಗಳಿಗೆ ಸೇರ್ಪಡೆಯಾಗಿದ್ದರೆ, ಇದೇ ಅವಧಿಯಲ್ಲಿ ಇತರ ಪಕ್ಷಗಳ 41 ಅಭ್ಯರ್ಥಿಗಳು ಹಾಗೂ 8 ಶಾಸಕರು ಎನ್‌ಸಿಪಿ ಸೇರಿದ್ದಾರೆ.

***

ಸಿಪಿಐ– ಸಿಪಿಎಂ

ಸಿಪಿಐನ 13 ಅಭ್ಯರ್ಥಿಗಳು ಹಾಗೂ ಇಬ್ಬರು ಶಾಸಕರು ಬೇರೆ ಪಕ್ಷಕ್ಕೆ ಸೇರಿದ್ದರೆ, ಕೇವಲ ಐವರು ಅಭ್ಯರ್ಥಿಗಳು ಇತರ ಪಕ್ಷಗಳಿಂದ ಬಂದಿದ್ದಾರೆ. ಸಿಪಿಎಂನ 13 ಅಭ್ಯರ್ಥಿಗಳು ಹಾಗೂ ಆರು ಜನ ಶಾಸಕರು ಬೇರೆ ಪಕ್ಷಗಳಿಗೆ ಹೋಗಿದ್ದರೆ,
ಬೇರೆ ಪಕ್ಷದಿಂದ ಒಬ್ಬ ಅಭ್ಯರ್ಥಿ ಮಾತ್ರ ಈ ಪಕ್ಷ ಸೇರಿದ್ದಾರೆ.
***

ಟಿಆರ್‌ಎಸ್‌

ಕೆ.ಚಂದ್ರಶೇಖರ್‌ ರಾವ್‌ ಅವರ ಟಿಆರ್‌ಎಸ್‌ ಪಕ್ಷವು ನಾಲ್ವರು ಚುನಾವಣಾ ಅಭ್ಯರ್ಥಿಗಳನ್ನು ಹಾಗೂ ನಾಲ್ವರು ಶಾಸಕರನ್ನು ಕಳೆದುಕೊಂಡಿದ್ದರೆ, ಇದೇ ಅವಧಿಯಲ್ಲಿ ಬೇರೆ ಪಕ್ಷಗಳಿಂದ ಅವರ ಪಕ್ಷಕ್ಕೆ 12 ಅಭ್ಯರ್ಥಿಗಳು ಹಾಗೂ 30 ಶಾಸಕರು ಸೇರ್ಪಡೆಯಾಗಿದ್ದಾರೆ.

***

ಬಿಜು ಜನತಾ ದಳ (ಬಿಜೆಡಿ)

ನವೀನ್‌ ಪಟ್ನಾಯಕ್‌ ನೇತೃತ್ವದ ಬಿಜೆಡಿಯ ಮೂವರು ಚುನಾವಣಾ ಅಭ್ಯರ್ಥಿಗಳು ಹಾಗೂ ಆರು ಶಾಸಕರು ಬೇರೆ ಪಕ್ಷಗಳಿಗೆ ಸೇರ್ಪಡೆಯಾಗಿದ್ದರೆ, ಬೇರೆ ಬೇರೆ ಪಕ್ಷಗಳಿಂದ 16 ಅಭ್ಯರ್ಥಿಗಳು ಮತ್ತು ಮೂವರು ಶಾಸಕರು ಬಿಜೆಡಿ ಸೇರಿದ್ದಾರೆ.

***

ವಿಶ್ಲೇಷಣೆ ಹೇಗೆ?

1,133 ಅಭ್ಯರ್ಥಿಗಳು ಮತ್ತು 500 ಸಂಸದರು/ ಶಾಸಕರು ಚುನಾವಣೆ ವೇಳೆ ಸಲ್ಲಿಸಿದ ಪ್ರಮಾಣಪತ್ರಗಳನ್ನು ಆಧರಿಸಿ ಎಡಿಆರ್‌ ವಿಶ್ಲೇಷಣೆ ನಡೆಸಿದೆ. 2014ರಿಂದ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿ ಆಗಿರುವ ಪಕ್ಷಾಂತರಗಳು ಹಾಗೂ ಉಪ ಚುನಾವಣೆಗಳನ್ನು ಇದು ಒಳಗೊಂಡಿದೆ. ಕರ್ನಾಟಕ, ಮಧ್ಯಪ್ರದೇಶ, ಅರುಣಾಚಲ ಪ್ರದೇಶ, ಗೋವಾ, ಮಣಿಪುರ ಸರ್ಕಾರಗಳು ಪತನವಾದ ವೇಳೆ ಶಾಸಕರು ಪಕ್ಷಾಂತರದ ಮೊರೆ ಹೋಗಿದ್ದಾರೆ.

ಸ್ವಹಿತಾಸಕ್ತಿಯ ಮೇಲುಗೈ

ರಾಜಕಾರಣಿಗಳ ಸತತ ‍ಪಕ್ಷಾಂತರದ ಹಿಂದಿನ ಅತ್ಯಂತ ಸಮರ್ಥನೀಯ ಕಾರಣಗಳನ್ನು ಎಡಿಆರ್ ಮುಂದಿಟ್ಟಿದೆ. ಮೌಲ್ಯಾಧಾರಿತ ರಾಜಕೀಯದ ಅನುಪಸ್ಥಿತಿ, ಹಣ ಮತ್ತು ಅಧಿಕಾರದ ಬಗೆಗಿನ ಅದಮ್ಯ ಹಂಬಲ, ಹಣ ಮತ್ತು ತೋಳ್ಬಲಗಳ ನಡುವಿನ ನಿಕಟ ನಂಟು, ದಕ್ಷ, ಪ್ರಾಮಾಣಿಕ ಮತ್ತು ವಿಶ್ವಾಸಾರ್ಹ ನಾಯಕರ ಕೊರತೆಯು ಪಕ್ಷ ಬದಲಾವಣೆಗೆ ಪ್ರೇರೇಪಿಸುತ್ತವೆ ಎಂದು ಎಡಿಆರ್‌ ವಿಶ್ಲೇಷಿಸಿದೆ.

ರಾಜಕೀಯ ಪಕ್ಷವು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತ ಕಾನೂನಿನ ಅನುಪಸ್ಥಿತಿಯೂ ಮುಖ್ಯವಾದ ಕಾರಣವಾಗಿದೆ. ಜೊತೆಗೆ ಕ್ರಿಮಿನಲ್ ಹಿನ್ನೆಲೆಯವರು ರಾಜಕೀಯ ಪ್ರವೇಶಿಸಲು ಯಾವುದೇ ಅಡೆತಡೆ ಇಲ್ಲದಿರುವುದೂ ಒಂದು ಕಾರಣ ಎಂದಿದೆ.

ಜನರಿಂದ ಮತ್ತು ಜನರಿಗಾಗಿ ಎಂಬ ಪ್ರಜಾಪ್ರಭುತ್ವದ ತತ್ವಕ್ಕಿಂತ ರಾಜಕಾರಣಿಗಳ ಸ್ವಂತ ಹಿತಾಸಕ್ತಿ ಮುಖ್ಯವಾಗಿದೆ. ಈ ಪ್ರವೃತ್ತಿಗಳನ್ನು ನಿಯಂತ್ರಿಸದ ಹೊರತು, ನಮ್ಮ ಪ್ರಸ್ತುತ ಚುನಾವಣಾ ಮತ್ತು ರಾಜಕೀಯ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ ಎಂದು ವರದಿ ಎಚ್ಚರಿಸಿದೆ.

ಆಧಾರ: ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT