ನವದೆಹಲಿ: ‘ಭಾರಿ ಚೌಕಾಶಿ ಮೂಲಕ ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ಕಚ್ಚಾ ತೈಲ ಖರೀದಿ ಮಾಡುವ ಭಾರತದ ನಿರ್ಧಾರದಿಂದ ಅಮೆರಿಕಕ್ಕೆ ಯಾವುದೇ ತೊಂದರೆ ಇಲ್ಲ' ಎಂದು ಅಧ್ಯಕ್ಷ ಜೊ ಬೈಡನ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಈ ವಿಷಯ ತಿಳಿಸಿರುವ ಇಂಧನ ಸಂಪನ್ಮೂಲ ಇಲಾಖೆಯ ಸಹಾಯಕ ಕಾರ್ಯದರ್ಶಿ ಜೆಫ್ರಿ ಆರ್.ಪ್ಯಾಟ್, ‘ತನ್ನ ಇಂಧನ ಭದ್ರತೆಗೆ ಸಂಬಂಧಿಸಿ ಭಾರತ ತೆಗೆದುಕೊಳ್ಳುತ್ತಿರುವ ನಿರ್ಧಾರಗಳ ಬಗ್ಗೆ ಅಧ್ಯಕ್ಷ ಜೊ ಬೈಡನ್ ಆಡಳಿತಕ್ಕೆ ತೃಪ್ತಿ ಇದೆ’ ಎಂದಿದ್ದಾರೆ.
‘ತೈಲ ಮಾರಾಟದಿಂದ ರಷ್ಯಾಕ್ಕೆ ಸಿಗುತ್ತಿರುವ ಆದಾಯದಲ್ಲಿ ಇಳಿಕೆಯಾಗಬೇಕು ಎಂಬುದು ಜಿ–7 ಗುಂಪಿನ ರಾಷ್ಟ್ರಗಳ ನೀತಿಯಾಗಿದೆ. ಈಗ, ಕಡಿಮೆ ಬೆಲೆಯಲ್ಲಿಯೇ ರಷ್ಯಾ ತೈಲವನ್ನು ಖರೀದಿ ಮಾಡುತ್ತಿರುವ ಭಾರತದ ನಡೆ ನಮ್ಮ ಈ ನೀತಿಗೆ ಪೂರಕವಾಗಿಯೇ ಇದೆ’ ಎಂದು ಪ್ಯಾಟ್ ಹೇಳಿದ್ದಾರೆ.
ರಷ್ಯಾ ತೈಲ ಖರೀದಿಯನ್ನು ಹೆಚ್ಚಿಸುತ್ತಿರುವ ಭಾರತದ ಕ್ರಮದ ಬಗ್ಗೆ ಬೈಡನ್ ಆಡಳಿತವು ಇದೇ ಮೊದಲ ಬಾರಿಗೆ ತನ್ನ ಸ್ಪಷ್ಟ ನಿಲುವು ಹೊರಹಾಕಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.