ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಅಧಿಕಾರಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಕೇಂದ್ರ ಸರ್ಕಾರಕ್ಕೆ ಸೂಚನೆ

Last Updated 13 ಏಪ್ರಿಲ್ 2022, 11:02 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳು ತೋರುತ್ತಿರುವ ನಿರಾಸಕ್ತಿಯು ಸೇವೆ ಹಾಗೂ ಸೌಲಭ್ಯಗಳ ಪೂರೈಕೆಯಲ್ಲಿನ ಅಡಚಣೆಗೆ ಕಾರಣವಾಗುತ್ತಿದೆ. ಆದ್ದರಿಂದ ಅವರಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸಬೇಕು ಎಂದು ಸಂಸದೀಯ ಸಮಿತಿಯು ಕೇಂದ್ರ ಸರ್ಕಾರಕ್ಕೆ ಸೂಚಿಸಿ ವರದಿ ನೀಡಿದೆ.

ಸರ್ಕಾರವು ಸಾರ್ವಜನಿಕರಿಗೆ ನಿಗದಿತ ಕಾಲಮಿತಿಯಳಗೆ ಸರಕು ಮತ್ತು ಸೇವೆಗಳನ್ನು ಪೂರೈಸುವ ಯೋಜನೆಯನ್ನ ಜಾರಿಗೆ ತರಬೇಕು. ಈ ಯೋಜನೆಯು ಅಧಿಕಾರಿಗಳ ಕೆಲಸಕ್ಕೆ ತಕ್ಕ ಪ್ರತಿಫಲ ಹಾಗೂ ಶಿಕ್ಷೆಯ ಸೂಕ್ತ ಮಾನದಂಡಗಳನ್ನು ಒಳಗೊಂಡಿರಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.

‘ಸಮಿತಿಯು, ಸಾರ್ವಜನಿಕರ ಸರಕು ಹಾಗೂ ಸೇವೆಗಳ ವಿತರಣೆಯಲ್ಲಿ ಅಧಿಕಾರಿಗಳು ತೋರುತ್ತಿರುವ ನಿರಾಸಕ್ತಿಯನ್ನು ಗಮನಿಸಿದ್ದು, ನೌಕರರಲ್ಲಿ ಉತ್ತಮ ಸೇವಾ ವಿತರಣೆಯ ಮನೋಭಾವವನ್ನು ಬೆಳೆಸಿ, ಅವರ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ಕುಂದುಕೊರತೆಗಳ ಇಲಾಖೆಗೆ ಶಿಫಾರಸು ಮಾಡಲಾಗಿದೆ’ ಎಂದು ಸಂಸದೀಯ ಸಮಿತಿ ತನ್ನ ವರದಿಯಲ್ಲಿ ಮಾಹಿತಿ ನೀಡಿದೆ.

ಇ–ಆಫೀಸ್‌ಗೆ ಒತ್ತು:ಇ–ಆಡಳಿತದಲ್ಲಿ ಇ–ಆಫೀಸ್‌ ಯೋಜನೆ ಆಡಳಿತ ಸುಧಾರಣೆ ಹಾಗೂ ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ ಒಂದು ಪ್ರಮುಖ ಯೋಜನೆಯಾಗಿದ್ದು, ಸರ್ಕಾರದ ಕೆಲಸವು ವೇಗಗೊಳ್ಳುವಲ್ಲಿ ಮಹತ್ವದ ಪಾತ್ರ ವಹಿಸಿರುವುದಲ್ಲದೇ, ನಿರ್ಣಯ ಕೈಗೊಳ್ಳುವಿಕೆಯಲ್ಲೂ ವಿಭಿನ್ನತೆ ಮೆರೆದಿದೆ. ಆದ್ದರಿಂದ ಕೇಂದ್ರದ ಎಲ್ಲ ಸಚಿವಾಲಯ, ಇಲಾಖೆ ಹಾಗೂ ಸಂಸ್ಥೆಗಳಲ್ಲಿ ಇ–ಆಡಳಿತವನ್ನು ಸ್ಥಾಪಿಸಿ, ಕಾರ್ಯಗತಗೊಳಿಸಬೇಕು. ಎಲ್ಲ ನೌಕರರಿಗೂ ಇ–ಆಫೀಸ್‌ ಕುರಿತಾಗಿ ಸೂಕ್ತ ತರಬೇತಿಯನ್ನು ನೀಡಿ, ಇ–ಆಫೀಸ್‌ ಮೂಲಕವೇ ಕೆಲಸ ನಿರ್ವಹಿಸಲು ಪ್ರೋತ್ಸಾಹ ನೀಡಬೇಕು ಎಂದು ಸಮಿತಿಯು 2022–23ರ ಬೇಡಿಕೆಯ ಅನುದಾನದ ವರದಿಯಲ್ಲಿ ತಿಳಿಸಿದೆ.

ಸಾರ್ವಜನಿಕರು ಮೂಲಭೂತ ಸೌಕರ್ಯಗಳನ್ನು ಪಡೆಯುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಇ–ಆಫೀಸ್‌ ಆರಂಭಿಸಿ, ಆರಂಭಿಕ ಹಂತದಲ್ಲಿ ಮೂಲಭೂತ ಸೇವೆಗಳನ್ನು ಒದಗಿಸಬೇಕು. ನಂತರದ ಹಂತಗಳಲ್ಲಿ ಎಲ್ಲ ಅತ್ಯಗತ್ಯ ಸೇವೆಗಳನ್ನು ನಿಗದಿತ ಕಾಲಮಿತಿಯೊಳಗೆ ನೀಡುವಂತೆ ಆಗಬೇಕು ಎಂದು ಸಂಸದೀಯ ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT