ಬುಧವಾರ, ಸೆಪ್ಟೆಂಬರ್ 28, 2022
26 °C

ಕಲ್ಯಾಣ ಯೋಜನೆಗಳನ್ನು ಉಚಿತ ಕೊಡುಗೆ ಎನ್ನುವುದು ಅಪಮಾನ: ಕೆಸಿಆರ್

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಕಲ್ಯಾಣ ಯೋಜನೆಗಳನ್ನು ಉಚಿತ ಕೊಡುಗೆ ಎಂದು ಕರೆಯುವುದು ‘ಅಪಮಾನ ಮಾಡಿದಂತೆ’ಎಂದು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಸೋಮವಾರ ಕೇಂದ್ರದ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯ ಮೌಲ್ಯಗಳನ್ನು ಘಾಸಿಗೊಳಿಸುತ್ತಿದೆ. ರಾಜ್ಯಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುತ್ತಿದೆ ಮತ್ತು ಅಧಿಕಾರಗಳನ್ನು ಕೇಂದ್ರೀಕರಿಸುತ್ತಿದೆ ಎಂದು ಆರೋಪಿಸಿದರು.

ಹಾಲು ಮತ್ತು ಇತರ ದಿನಬಳಕೆ ಪದಾರ್ಥಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಬಡ ಮತ್ತು ಮಧ್ಯಮ ವರ್ಗದವರ ಮೇಲೆ ಅಗಾಧವಾದ ಹೊರೆಯನ್ನು ಕೇಂದ್ರ ಹೇರಿದೆ ಎಂದು ಅವರು ಆರೋಪಿಸಿದರು.

ಉಚಿತ ಕೊಡುಗೆಗಳ ಕುರಿತ ಚರ್ಚೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು, ‘ಜನರ ಕಲ್ಯಾಣ ಸರ್ಕಾರಗಳ ಆದ್ಯ ಜವಾಬ್ದಾರಿ. ಕೇಂದ್ರವು ಆ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೆ, ಕಲ್ಯಾಣ ಯೋಜನೆಗಳನ್ನು ಉಚಿತ ಕೊಡುಗೆ ಎಂದು ಕರೆಯುವ ಮೂಲಕ ಅವಮಾನಿಸುತ್ತಿದೆ’ಎಂದು ರಾವ್ ಕಿಡಿ ಕಾರಿದರು.

ಉಚಿತ ಕೊಡುಗೆಗಳ ಘೋಷಣೆ ತೆರಿಗೆದಾರರ ಮೇಲೆ ಹೊರೆಯಾಗಿದೆ ಮತ್ತು ಕೆಲ ವಿರೋಧ ಪಕ್ಷಗಳು ಉಚಿತ ಕೊಡುಗೆಗಳ ಮೂಲಕ ರಾಜಕೀಯದಲ್ಲಿ ತೊಡಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಟೀಕಿಸಿದ್ದರು. ಇದಲ್ಲದೆ, ಉಚಿತಗಳ ಮೇಲಿನ ಚರ್ಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ‘ವಿಕೃತ ಟ್ವಿಸ್ಟ್’ನೀಡಿದ್ದಾರೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಾಗ್ದಾಳಿ ನಡೆಸಿದ್ದರು. ಎಎಪಿ ನಾಯಕ ಶಿಕ್ಷಣ ಮತ್ತು ಆರೋಗ್ಯವನ್ನು ಉಚಿತ ಕೊಡುಗೆಗಗಳ ಚರ್ಚೆಗೆ ಸೇರಿಸಿರುವುದು ಜನರ ಮನಸ್ಸಿನಲ್ಲಿ ಭಯವನ್ನು ಸೃಷ್ಟಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದರು.

75ನೇ ಸ್ವಾತಂತ್ರ್ಯ ದಿನೋತ್ಸವದ ಹಿನ್ನೆಲೆಯಲ್ಲಿ ಐತಿಹಾಸಿಕ ಗೋಲ್ಕೊಂಡಾ ಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಚಂದ್ರಶೇಖರ ರಾವ್, ‘ಕೇಂದ್ರ ಸರ್ಕಾರವು ಒಕ್ಕೂಟ ವ್ಯವಸ್ಥೆಯ ಮೌಲ್ಯಗಳಿಗೆ ಧಕ್ಕೆಯುಂಟು ಮಾಡುತ್ತಿದೆ. ರಾಜ್ಯಗಳನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಷಡ್ಯಂತ್ರಗಳಲ್ಲಿ ತೊಡಗಿದೆ. ಈ ಮೂಲಕ ತಾನು ಕುಳಿತಿರುವ ಕೊಂಬೆಯನ್ನೇ ಕತ್ತರಿಸುತ್ತಿದೆ’ಎಂದು ಅವರು ಹೇಳಿದರು.

ಕೇಂದ್ರವು ಸಂಗ್ರಹಿಸುವ ತೆರಿಗೆಯ ಆದಾಯದಲ್ಲಿ ರಾಜ್ಯಗಳು ಶೇಕಡ 41 ರಷ್ಟು ಪಾಲು ಪಡೆಯಬೇಕಾಗಿತ್ತು, ಆದರೆ, ರಾಜ್ಯಗಳ ಪಾಲನ್ನು ಕಡಿಮೆ ಮಾಡಲು ತೆರಿಗೆಗಳ ಬದಲಿಗೆ ಸೆಸ್ ವಿಧಿಸುವ ಮೂಲಕ ಪರೋಕ್ಷವಾಗಿ ಆದಾಯವನ್ನು ಗಳಿಸುತ್ತಿದೆ ಎಂದು ಆರೋಪಿಸಿದರು.

ಈ ಮೂಲಕ ಕೇಂದ್ರವು 2022-23ರಲ್ಲಿ ರಾಜ್ಯಗಳ ಆದಾಯದ ಪಾಲನ್ನು ಶೇ.11.4ರಷ್ಟು ಕಡಿಮೆ ಮಾಡುತ್ತಿದೆ ಎಂದರು. ಶೇ 41ರಷ್ಟಿದ್ದ ರಾಜ್ಯಗಳ ತೆರಿಗೆ ಪಾಲನ್ನು ಕೇಂದ್ರವು ಕೇವಲ ಶೇ 29.6ಕ್ಕೆ ಇಳಿಸುವ ಮೂಲಕ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು