ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೃಢವಾದ ಅಭಿಪ್ರಾಯ’ ನೀಡಲಾಗದು: ‘ಸುಪ್ರೀಂ’ಗೆ ಮೇಲ್ವಿಚಾರಣಾ ಸಮಿತಿ ಮಾಹಿತಿ

ಕರ್ನಾಟಕದಲ್ಲಿ ಕಬ್ಬಿಣ ಅದಿರು ಉತ್ಪಾದನೆ ಮಿತಿ ಹೆಚ್ಚಳ ಬೇಡಿಕೆ: ಇಂದು ಅರ್ಜಿ ವಿಚಾರಣೆ
Last Updated 21 ಆಗಸ್ಟ್ 2022, 11:42 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಕಬ್ಬಿಣ ಅದಿರಿನ ವಾರ್ಷಿಕ ಉತ್ಪಾದನೆಯ ಮಿತಿಯನ್ನು ಹೆಚ್ಚಿಸಬೇಕು ಎಂಬ ಬೇಡಿಕೆ ಕುರಿತು ‘ದೃಢವಾದ ಅಭಿಪ್ರಾಯ’ ನೀಡಲಾಗದು ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ. ಸುದರ್ಶನ ರೆಡ್ಡಿ ನೇತೃತ್ವದ ಮೇಲುಸ್ತುವಾರಿ ಪ್ರಾಧಿಕಾರ ಹೇಳಿದೆ.

‘ಅದಿರು ಉತ್ಪಾದನೆ ಮಿತಿಯನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್‌ ನೇಮಿಸಿರುವ ಕೇಂದ್ರೀಯ ಉನ್ನತಾಧಿಕಾರ ಸಮಿತಿ (ಸಿಇಸಿ) ಹಾಗೂ ಮೇಲ್ವಿಚಾರಣಾ ಸಮಿತಿಯು ಪರಸ್ಪರ ವಿರುದ್ಧವಾಗಿರುವ ವರದಿಗಳನ್ನು ನೀಡಿರುವುದೇ ಇದಕ್ಕೆ ಕಾರಣ’ ಎಂದು ಪ್ರಾಧಿಕಾರವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಮುಖ್ಯನ್ಯಾಯಮೂರ್ತಿ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠವು ಈ ಕುರಿತ ಅರ್ಜಿಯ ವಿಚಾರಣೆಯನ್ನು ಸೋಮವಾರ (ಆ.22) ನಡೆಸಲಿದೆ.

ಸದ್ಯ, ವಾರ್ಷಿಕ 3.5 ಕೋಟಿ ಟನ್ ಅದಿರು ಉತ್ಪಾದನೆ ಮಿತಿ ನಿಗದಿ ಮಾಡಲಾಗಿದೆ. ಈ ಮಿತಿಯನ್ನು ಹೆಚ್ಚಿಸಬೇಕು ಎಂಬುದು ಗಣಿ ಉದ್ಯಮಿಗಳ ಬೇಡಿಕೆಯಾಗಿದೆ.

ಜಿಲ್ಲಾ ಮಟ್ಟದಲ್ಲಿ ಉತ್ಪಾದನೆ ಮೇಲೆ ಹೇರಲಾಗಿರುವ ಮಿತಿಯನ್ನು ತೆಗೆದು ಹಾಕುವ ಬೇಡಿಕೆಗೆ ಸಿಇಸಿ, ಗಣಿ ಉದ್ಯಮಕ್ಕೆ ಸಂಬಂಧಿಸಿದ ಸಂಸ್ಥೆಗಳಾದ ಎಫ್‌ಐಎಂಐ ಸೌಥ್, ಕೆಐಎಸ್‌ಎಂಎ ಹಾಗೂ ಕರ್ನಾಟಕ ಸರ್ಕಾರ ಬೆಂಬಲ ವ್ಯಕ್ತಪಡಿಸಿವೆ. ಈ ಅಂಶವನ್ನು ಪ್ರಾಧಿಕಾರವು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಿದೆ. ಈ ಮಿತಿಯನ್ನು ತೆಗೆದು ಹಾಕುವಂತೆ ಕೇಂದ್ರ ಗಣಿ ಹಾಗೂ ಉಕ್ಕು ಸಚಿವಾಲಯಗಳು ಸಹ ಶಿಫಾರಸು ಮಾಡಿವೆ.

ಈ ಪ್ರಕರಣದಲ್ಲಿ ಅರ್ಜಿದಾರ ಸಂಸ್ಥೆಯಾಗಿರುವ ಸಮಾಜ ಪರಿವರ್ತನಾ ಸಮುದಾಯ ಹಾಗೂ ಮೇಲ್ವಿಚಾರಣಾ ಸಮಿತಿಯು, ‘ಸುಸ್ಥಿರ ಅಭಿವೃದ್ಧಿ ಹಾಗೂ ನ್ಯಾಯದ ದೃಷ್ಟಿಯಿಂದ ಈ ಹಂತದಲ್ಲಿ ಅದಿರು ಉತ್ಪಾದನೆ ಮೇಲಿನ ಮಿತಿಯನ್ನು ತೆಗೆದು ಹಾಕುವುದು ಸರಿಯಲ್ಲ’ ಎಂದು ಸುಪ್ರೀಂಕೋರ್ಟ್‌ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT