ಬುಧವಾರ, ಸೆಪ್ಟೆಂಬರ್ 22, 2021
24 °C
’ಮೊಕದ್ದಮೆ ದಾಖಲಿಸಲು ನಿವೃತ್ತ ನ್ಯಾಯಮೂರ್ತಿ ಡಿ.ಕೆ. ಜೈನ್‌ ನೇತೃತ್ವದ ಸಮಿತಿ ವರದಿ ಆಧಾರವಾಗುವುದಿಲ್ಲ’

ಇಸ್ರೊ ಬೇಹುಗಾರಿಕೆ ಪ್ರಕರಣ: ತನಿಖೆ ಮುಂದುವರಿಸಲು ಸಿಬಿಐಗೆ ‘ಸುಪ್ರೀಂ’ ಸೂಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: 1994ರ ಇಸ್ರೊ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಲೋಪದ ಕುರಿತು ಮೊಕದ್ದಮೆ ದಾಖಲಿಸಲು ನಿವೃತ್ತ ನ್ಯಾಯಮೂರ್ತಿ ಡಿ.ಕೆ. ಜೈನ್‌ ನೇತೃತ್ವದ ಸಮಿತಿಯ ವರದಿ ಆಧಾರವಾಗುವುದಿಲ್ಲ. ಸಿಬಿಐ ತನಿಖೆಯನ್ನು ನಡೆಸಲೇಬೇಕು ಎಂದು ಸುಪ್ರೀಂ ಕೋರ್ಟ್‌ ಸೋಮವಾರ ಹೇಳಿದೆ.

ಈ ಪ್ರಕರಣದಲ್ಲಿ ಇಸ್ರೊದ ವಿಜ್ಞಾನಿ ನಂಬಿ ನಾರಾಯಣನ್‌ (79) ಅವರನ್ನು ಖುಲಾಸೆಗೊಳಿಸಲಾಗಿತ್ತು ಮತ್ತು ₹50 ಲಕ್ಷ ಪರಿಹಾರ ನೀಡುವಂತೆ ಸುಪ್ರೀಂ ಕೋರ್ಟ್‌ ಕೇರಳ ಸರ್ಕಾರಕ್ಕೆ ಆದೇಶ ನೀಡಿತ್ತು. ಬೇಹುಗಾರಿಕೆಯ ಈ ಪ್ರಕರಣದಲ್ಲಿ ನಾರಾಯಣನ್‌ ಅವರನ್ನು ಸಿಲುಕಿಸಿದ್ದರ ಸಂಬಂಧ ತನಿಖೆ ನಡೆಸುವುದಕ್ಕೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿ.ಕೆ. ಜೈನ್‌ ನೇತೃತ್ವದ ಸಮಿತಿಯನ್ನು ರಚಿಸಿತ್ತು. 

ಈ ಪ್ರಕರಣದ ಬಗ್ಗೆ ಎಫ್‌ಐಆರ್‌ ದಾಖಲಿಸಿರುವ ಸಿಬಿಐ, ತನಿಖೆ ನಡೆಸಿ ಕಾನೂನು ಪ್ರಕಾರ ಮುಂದುವರಿಯಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

’ಕೇವಲ ವರದಿ ಆಧಾರದ ಮೇಲೆ ಆರೋಪಿಗಳ ವಿರುದ್ಧ ಸಿಬಿಐಗೆ ಕ್ರಮಕೈಗೊಳ್ಳಲು ಅವಕಾಶ ಇಲ್ಲ. ತನಿಖೆ ನಡೆಸಿ ಸಾಕ್ಷ್ಯಗಳನ್ನು ಸಂಗ್ರಹಿಸಬೇಕು’ ಎಂದು ನ್ಯಾಯಮೂರ್ತಿಗಳಾದ ಎ.ಎಂ. ಖನ್ವಿಲ್ಕರ್‌ ಮತ್ತು ಸಂಜೀವ್‌ ಖನ್ನಾ ಅವರನ್ನೊಳಗೊಂಡ ಪೀಠವು ಹೇಳಿದೆ.

ಸಮಿತಿ ವರದಿ ಮೇಲೆಯೇ ಸಿಬಿಐ ಅವಲಂಬನೆಯಾಗಿದೆ. ಹೀಗಾಗಿ, ಈ ವರದಿಯನ್ನು ತಮ್ಮ ಜತೆಯೂ ಹಂಚಿಕೊಳ್ಳಬೇಕು ಎಂದು ಆರೋಪಿಯೊಬ್ಬರ ಪರ ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಪೀಠವು, ‘ವರದಿಯು ಕೇವಲ ಪ್ರಾಥಮಿಕ ಮಾಹಿತಿಯನ್ನು ಒಳಗೊಂಡಿರುವುದರಿಂದ ಸಿಬಿಐ ತನಿಖೆ ನಡೆಸಲಿದೆ’ ಎಂದು ಹೇಳಿದೆ.

ಸಿಬಿಐ ದಾಖಲಿಸಿರುವ ಎಫ್‌ಐಆರ್‌ನಲ್ಲಿಯೂ ವರದಿಯ ಕೆಲವು ಅಂಶಗಳನ್ನು ಒಳಗೊಂಡಿದೆ ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪೀಠದ ಗಮನಕ್ಕೆ ತಂದರು.

ಸಮಿತಿಯ ವರದಿಯನ್ನು ಮಾತ್ರ ಸಾರ್ವಜನಿಕವಾಗಿ ಬಹಿರಂಗಪಡಿಸಬಾರದು ಮತ್ತು ಕಾನೂನಿನ ಪ್ರಕಾರ ಅಧಿಕಾರಿಗಳು ಮುಂದಿನ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಸುಪ್ರೀಂ ಕೋರ್ಟ್‌ ಈಗಾಗಲೇ ಹೇಳಿದೆ ಎಂದು ಪೀಠವು ತಿಳಿಸಿದೆ.

ಎಫ್‌ಐಆರ್‌ ದಾಖಲಿಸಲಾಗಿದೆ. ಆದರೆ, ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿಲ್ಲ ಎನ್ನುವುದನ್ನು ವರದಿಯಲ್ಲೂ ಹೇಳಲಾಗಿದೆ ಎಂದು ಪೀಠವು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು