ಶನಿವಾರ, ಮೇ 21, 2022
23 °C

‘ದೆಹಲಿಯಲ್ಲಿ ಮಾಲಿನ್ಯ ತುರ್ತು ಪರಿಸ್ಥಿತಿ’: ಶೀಘ್ರ ಕ್ರಮಕ್ಕೆ ಸುಪ್ರೀಂ ತಾಕೀತು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ವಾಯು ಮಾಲಿನ್ಯ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗಿರುವುದನ್ನು ತುರ್ತು ಪರಿಸ್ಥಿತಿ ಎಂದು ಕರೆದಿರುವ ಸುಪ್ರೀಂಕೋರ್ಟ್, ಮಾಲಿನ್ಯ ನಿಯಂತ್ರಣಕ್ಕೆ ಲಾಕ್‌ಡೌನ್ ರೀತಿಯ ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ದೆಹಲಿ ಮತ್ತು ಕೇಂದ್ರ ಸರ್ಕಾರಗಳಿಗೆ ಸೂಚಿಸಿದೆ.

ರಾಜಧಾನಿಯ ಜನರು ಮನೆಯಲ್ಲೂ ಮಾಸ್ಕ್ ಧರಿಸುತ್ತಿದ್ದಾರೆ ಎಂದರೆ ಮಾಲಿನ್ಯದ ಪರಿಸ್ಥಿತಿ ಹೇಗಿದೆ ಎಂಬುದು ಅರ್ಥವಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.

ಮಾಲಿನ್ಯಕ್ಕೆ ವಾಹನಗಳ ಹೊಗೆ, ಪಟಾಕಿ, ಧೂಳು ಮುಂತಾದ ಕಾರಣಗಳಿವೆ. ಆದರೆ, ಕೃಷಿ ತ್ಯಾಜ್ಯ ಸುಡುವಿಕೆ ಒಂದನ್ನೇ ಕಾರಣವೆನ್ನಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಪೀಠ ಹೇಳಿದೆ.

ರಾಷ್ಟ್ರದ ರಾಜಧಾನಿಯಲ್ಲಿ ಶಾಲೆಗಳು ಸಹ ತೆರೆದಿದ್ದು, ಮಕ್ಕಳು ಅಪಾಯಕಾರಿ ಮಾಲಿನ್ಯಕ್ಕೆ ತೆರೆದುಕೊಳ್ಳುತ್ತಿದ್ದಾರೆ ಎಂದು ಪೀಠವು ಕಳವಳ ವ್ಯಕ್ತಪಡಿಸಿದೆ.

‘ಶೇ.70ರಷ್ಟು ಮಾಲಿನ್ಯಕ್ಕೆ ರೈತರೇ ಕಾರಣ ಎಂದು ನೀವು ಬಿಂಬಿಸಿದ್ದೀರಿ. ಮೊದಲು ದೆಹಲಿ ಜನರನ್ನು ಮಿತಿಯಲ್ಲಿಡಿ. ಪಟಾಕಿ ಸಿಡಿಸುವುದು, ವಾಹನಗಳ ಮಾಲಿನ್ಯ ನಿಯಂತ್ರಣಕ್ಕೆ ಸಂಬಂಧಿಸಿದ ಪರಿಣಾಮಕಾರಿ ನಿಯಮ ಎಲ್ಲಿದೆ?’ಎಂದು ನ್ಯಾಯಪೀಠ ಪ್ರಶ್ನಿಸಿದೆ.

‘ಅಲ್ಪ ಪ್ರಮಾಣದ ಮಾಲಿನ್ಯ ಕೃಷಿ ತ್ಯಾಜ್ಯ ಸುಡುವಿಕೆಯಿಂದ ಆಗುತ್ತಿದೆ ಎಂಬುದು ನಮಗೆ ಅರ್ಥವಾಗುತ್ತದೆ. ಆದರೆ, ಉಳಿದ ಮಾಲಿನ್ಯಕ್ಕೆ ಪಟಾಕಿ ಸುಡುವಿಕೆ, ಕೈಗಾರಿಕೆ, ವಾಹನಗಳು ಮತ್ತು ಧೂಳಿನ ಮಾಲಿನ್ಯ ಮುಂತಾದವುಗಳು ಕಾರಣವಾಗಿವೆ. ದೆಹಲಿ ವಾಯು ಗುಣಮಟ್ಟ ಸೂಚ್ಯಕ(ಎಕ್ಯುಐ)ವನ್ನು 500ರಿಂದ 200ಕ್ಕೆ ತರುವುದು ಹೇಗೆಂದು ನಮಗೆ ತಿಳಿಸಿ. ಎರಡು ದಿನ ಲಾಕ್‌ಡೌನ್‌ನಂತಹ ತುರ್ತು ಕ್ರಮಗಳನ್ನು ಕೈಗೊಳ್ಳಿ’ ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರನ್ನೂ ಒಳಗೊಂಡ ನ್ಯಾಯಪೀಠ ಸಲಹೆ ನೀಡಿದೆ.

ಈ ಕುರಿತಂತೆ ಸೋಮವಾರ ಉತ್ತರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.

ದೆಹಲಿಯಲ್ಲಿ ಶಾಲೆಗಳು ಆರಂಭವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ನ್ಯಾಯಾಲಯ, ವಾಹನಗಳನ್ನು ತಡೆಯಿರಿ ಅಥವಾ ಲಾಕ್‌ಡೌನ್ ವಿಧಿಸಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದೆ.

‘ಜನರು ಮನೆಯಲ್ಲೂ ಮಾಸ್ಕ್ ಧರಿಸುವಂತಹ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಲಿನ್ಯ ನಿಯಂತ್ರಣಕ್ಕೆ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಾ?’ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ನ್ಯಾಯಪೀಠ ಪ್ರಶ್ನಿಸಿದೆ.

‘ಪಂಜಾಬ್‌ನಲ್ಲಿ ಕಳೆದ 5 ದಿನಗಳಿಂದ ಕೃಷಿ ತ್ಯಾಜ್ಯ ಸುಡುವಿಕೆಯ ಪರಿಣಾಮವನ್ನು ನಾವು ಇಲ್ಲಿ ನೋಡುತ್ತಿದ್ದೇವೆ. ಇದರ ಬಗ್ಗೆ ಪಂಜಾಬ್ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಜಮೀನಿನಲ್ಲಿ ಕಸ ಸುಟ್ಟಿರುವುದು ಕಂಡುಬಂದಲ್ಲಿ ಪರಿಸರ ಪರಿಹಾರವನ್ನು ವಿಧಿಸಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಲಾಗಿದೆ" ಎಂದು ಸಾಲಿಸಿಟರ್ ಜನರಲ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ,.

‘ರಾಜ್ಯ ಅಥವಾ ಕೇಂದ್ರ ಸರ್ಕಾರ ಯಾವುದೇ ಆಗಿರಲಿ. ಮಾಲಿನ್ಯ ನಿಯಂತ್ರಣ ಹೇಗೆ? ಮತ್ತು ಅದಕ್ಕೆ ಜವಾಬ್ದಾರರು ಯಾರು ಎಂಬುದು ಇಲ್ಲಿನ ಪ್ರಶ್ನೆಯಾಗಿದೆ. ಎರಡು–ಮೂರು ದಿನಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತರುವುದು ಹೇಗೆ. ತುರ್ತು ಕ್ರಮಗಳ ಅಗತ್ಯವಿದೆ. ಸದ್ಯದ ಪರಿಹಾರವೇನು?’ಎಂದು ನ್ಯಾಯಪೀಠ ಪ್ರಶ್ನಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು