ಭಾನುವಾರ, ಮಾರ್ಚ್ 26, 2023
24 °C

ಎಲ್ಲ ಸಮಸ್ಯೆಗಳಿಗೆ ದೇಶದ ಕ್ಷಮೆ‌ ಕೇಳಲು ಮೋದಿಗೆ 3-4 ವರ್ಷಗಳೇ ಬೇಕು: ಕಾಂಗ್ರೆಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಚಿ (ಜಾರ್ಖಂಡ್): ದೇಶದಲ್ಲಿ ಸೃಷ್ಟಿಯಾಗಿರುವ ಹಲವು ಸಮಸ್ಯೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಜನರಲ್ಲಿ ಕ್ಷಮೆ ಯಾಚಿಸಲು ಆರಂಭಿಸಿದರೆ ಮೂರು ನಾಲ್ಕು ವರ್ಷಗಳು ಬೇಕಾಗುತ್ತವೆ ಎಂದು ಜಾರ್ಖಂಡ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ರಾಜೇಶ್‌ ಠಾಕೂರ್‌ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿರುವ ಠಾಕೂರ್‌, ‌‘ಪೆಟ್ರೋಲ್‌-ಡೀಸೆಲ್‌ ದರ ಏರಿಕೆ, ಅತ್ಯಾಚಾರ ಪ್ರಕರಣಗಳ ಹೆಚ್ಚಳ, ಶಾಸಕರಿಂದ ಆಗಿರುವ ದೌರ್ಜನ್ಯಗಳು, ಹಣದುಬ್ಬರ, ಜಮ್ಮು ಮತ್ತು ಕಾಶ್ಮೀರದಲ್ಲಿನ ಸದ್ಯದ ಪರಿಸ್ಥಿತಿ, ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸಿದ್ದು, ಪ್ರಜಾಸತ್ತಾತ್ಮಕವಾಗಿ ರಚನೆಯಾದ ಸರ್ಕಾರಗಳನ್ನು ಕುದುರೆ ವ್ಯಾಪಾರದ ಮೂಲಕ ಉರುಳಿಸಿದ್ದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರಧಾನಿ ಮೋದಿ ಅವರು ದೇಶದ ಕ್ಷಮೆ ಕೋರಬೇಕಿದೆ’

ಇದನ್ನೂ ಓದಿ: ಕಣ್ಣು ಕಿತ್ತು, ಕೈ ಕತ್ತರಿಸುತ್ತೇವೆ: ಬಿಜೆಪಿ ಸಂಸದ ಅರವಿಂದ್‌ ಶರ್ಮಾ ಬೆದರಿಕೆ

‘ಒಂದು ವೇಳೆ ಪ್ರಧಾನಿಯವರು ಈಗ ಕ್ಷಮೆ ಕೇಳಲು ಆರಂಭಿಸಿದರೆ, ಎಲ್ಲ ಸಮಸ್ಯೆಗಳ ಬಗ್ಗೆ ಕ್ಷಮೆ ಯಾಚಿಸಿ ಮುಗಿಸಲು ಮೂರರಿಂದ ನಾಲ್ಕು ವರ್ಷಗಳು ಬೇಕಾಗುತ್ತವೆ. ಕಾಂಗ್ರೆಸ್‌ ಅವರಿಗೆ ಸಲಹೆ ನೀಡಿದೆ ಮತ್ತು ಪ್ರಧಾನಿ ಅವರು ಇದೀಗ ಜನರಲ್ಲಿ ಕ್ಷಮೆ ಕೇಳಲು ಆರಂಭಿಸಬೇಕು. ಈಗ ಶುರು ಮಾಡಿದರೂ, ಹಲವು ಸಮಸ್ಯೆಗಳ ಬಗ್ಗೆ 2024ರ ವರೆಗೆ ಪ್ರತಿದಿನವೂ ಕ್ಷಮೆ ಕೇಳಬೇಕಾಗುತ್ತದೆ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.

‘ಹರಿಯಾಣದ ಮಾಜಿ ಸಚಿವ ಮನೀಶ್‌ ಗ್ರೋವರ್‌ ಅವರನ್ನು ಗುರಿಯಾಗಿಸಲು ಯಾರಾದರೂ ಪ್ರಯತ್ನಿಸಿದರೆ, ಅವರ ಕಣ್ಣು ಕಿತ್ತು, ಕೈ ಕತ್ತರಿಸಲಾಗುವುದು’ ಎಂದು ಬಿಜೆಪಿ ಸಂಸದ ಅರವಿಂದ್‌ ಶರ್ಮಾ ಬೆದರಿಕೆ ಹಾಕಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಠಾಕೂರ್‌, ‘ಇಂತಹ ಘಟನೆಗಳು ತಾಲಿಬಾನ್‌ನಲ್ಲಿ ನಡೆಯುತ್ತವೆ. ಅರವಿಂದ ಶರ್ಮಾ ಅವರು ತಾವು ತಾಲಿಬಾನ್‌ ದೇಶದಲ್ಲಿರುವುದಾಗಿ ಭಾವಿಸಿದ್ದಾರೆ. ಪ್ರಧಾನಿಯವರು ಶರ್ಮಾ ಹೇಳಿಕೆ ಬಗ್ಗೆ ಗಮನಹರಿಸಬೇಕು. ಇಲ್ಲವಾದರೆ, ಮೋದಿ ಅವರು ಅಂತಹ ತಾಲಿಬಾನ್‌ ಶಕ್ತಿಗಳಿಗೆ ನೆರವಾಗುತ್ತಿದ್ದಾರೆ ಎಂದು ಅರ್ಥ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಚೀನಾಕ್ಕೆ ನೀಡಿದ್ದ ಕ್ಲೀನ್‌ ಚಿಟ್‌ ವಾಪಸ್‌ ಪಡೆಯಲಿ: ಮೋದಿಗೆ ಕಾಂಗ್ರೆಸ್‌ ಆಗ್ರಹ

ಅರುಣಾಚಲ ಪ್ರದೇಶದಲ್ಲಿ 4.5 ಕಿ.ಮೀ.ನಷ್ಟು ದೂರ ಭಾರತದ ಪ್ರದೇಶಕ್ಕೆ ಚೀನಾ ಪ್ರವೇಶಿಸಿದೆ ಎಂದು ಪೆಂಟಗನ್‌ ವರದಿ ಮಾಡಿದೆ. ಇದನ್ನು ಪ್ರಧಾನಿ ಮೋದಿ ಅವರು ಅಲ್ಲಗಳೆದು, ಭಾರತದ ಭೂಪ್ರದೇಶಕ್ಕೆ ಯಾರೂ ಪ್ರವೇಶಿಸಿಲ್ಲ ಎಂದು ಚೀನಾಕ್ಕೆ ನೀಡಿರುವ ‘ಕ್ಲೀನ್ ಚಿಟ್’ ಅನ್ನು ಹಿಂಪಡೆಯುವಂತೆ ಕಾಂಗ್ರೆಸ್‌ ಶನಿವಾರ ಒತ್ತಾಯಿಸಿತ್ತು. ಅಷ್ಟಲ್ಲದೆ, ಜಗತ್ತನ್ನು ದಾರಿ ತಪ್ಪಿಸಿದ್ದಕ್ಕಾಗಿ ಪ್ರಧಾನಿಯವರು ಕ್ಷಮೆಯಾಚಿಸುವಂತೆ ಆಗ್ರಹಿಸಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು