‘ವಿಸ್ತಾರ’ ವಿಮಾನದಲ್ಲಿ ಅರೆಬೆತ್ತಲಾಗಿ ಮಹಿಳೆ ಗಲಾಟೆ, ಸಿಬ್ಬಂದಿ ಮೇಲೆ ಹಲ್ಲೆ

ಮುಂಬೈ: ಅಬುಧಾಬಿಯಿಂದ ಮುಂಬೈಗೆ ಸೋಮವಾರ (ಜನವರಿ 30) ಬಂದಿಳಿದ ವಿಸ್ತಾರ ಏರ್‌ಲೈನ್ಸ್ ವಿಮಾನದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಅರೆ ಬೆತ್ತಲಾಗಿ ಓಡಾಡಿದ ಇಟಲಿಯ ಮಹಿಳೆಯೊಬ್ಬರನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ವಿಮಾನದಲ್ಲಿ ಗದ್ದಲ ಸೃಷ್ಟಿಸಿದ ಮಹಿಳೆಯನ್ನು ಪೌಲಾ ಪೆರ್ರುಸಿಯೊ ಎಂದು ಗುರುತಿಸಲಾಗಿದೆ. ಎಕಾನಮಿ ಕ್ಲಾಸ್ ಟಿಕೆಟ್ ಖರೀದಿಸಿ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಕುಳಿತುಕೊಳ್ಳಲು ಹಠ ಮಾಡಿದ್ದಾರೆ ಎನ್ನಲಾಗಿದೆ. ಬಳಿಕ ತಾವು ಧರಿಸಿದ್ದ ಕೆಲವು ಬಟ್ಟೆಗಳನ್ನು ತೆಗೆದು ಅರೆ ಬೆತ್ತಲಾಗಿ ಓಡಾಡಿದ್ದಾರೆ ಎಂದು ವರದಿಯಾಗಿದೆ.
ಸಂಸ್ಥೆಯ ಏರ್ ವಿಸ್ತಾರ ಯುಕೆ–256 ವಿಮಾನದಲ್ಲಿದ್ದ ಸಿಬ್ಬಂದಿ ನೀಡಿದ ದೂರಿನಂತೆ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಹಿಳೆ ಕುಡಿದ ಮತ್ತಿನಲ್ಲಿದ್ದರು ಎಂದು ವಿಮಾನ ನಿಲ್ದಾಣದ ಠಾಣೆಯ ಪೊಲೀಸರು ತಿಳಿಸಿದ್ದಾರೆ.
ಜನವರಿ 30ರ ತಡರಾತ್ರಿ 2:03ಕ್ಕೆ ಅಬುಧಾಬಿಯಿಂದ ಹೊರಟಿದ್ದ ವಿಮಾನವು ಬೆಳಗಿನ ಜಾವ ಮುಂಬೈಗೆ ಬಂದಿಳಿದಿತ್ತು.
'2023ರ ಜನವರಿ 30ರಂದು ಅಬುಧಾಬಿಯಿಂದ ಮುಂಬೈಗೆ ಸಂಚರಿಸುತ್ತಿದ್ದ ವಿಸ್ತಾರ ಯುಕೆ–256 ವಿಮಾನದಲ್ಲಿದ್ದ ಮಹಿಳೆ ಅಶಿಸ್ತು ತೋರಿದ್ದಾರೆ ಎಂಬುದನ್ನು ಖಚಿತಪಡಿಸುತ್ತಿದ್ದೇವೆ. ಅಶಿಸ್ತು ಮತ್ತು ಹಿಂಸಾ ಕೃತ್ಯ ನಡೆಸಿದ್ದನ್ನು ಗಮನದಲ್ಲಿರಿಸಿ, ಎಚ್ಚರಿಕೆಯ ಕಾರ್ಡ್ ನೀಡಲು ಹಾಗೂ ಮಹಿಳೆಯನ್ನು ನಿರ್ಬಂಧಿಸಲು ವಿಮಾನದ ಕ್ಯಾಪ್ಟನ್ ನಿರ್ಧರಿಸಿದರು' ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
'ಇತರ ಪ್ರಯಾಣಿಕರ ಸುರಕ್ಷತೆ ಹಾಗೂ ಭದ್ರತೆಯನ್ನು ಖಾತ್ರಿಪಡಿಸಲು ಪೈಲಟ್ ನಿಯಮಿತವಾಗಿ ಪ್ರಕಟಣೆಗಳನ್ನು ನೀಡಿದ್ದಾರೆ. ಮಾರ್ಗಸೂಚಿ ಹಾಗೂ ನಮ್ಮ ಕಟ್ಟುನಿಟ್ಟಿನ ಕಾರ್ಯಾಚರಣೆ ವಿಧಾನಕ್ಕೆ ಅನುಸಾರವಾಗಿ, ವಿಮಾನವು ಬಂದಿಳಿಯುತ್ತಿದ್ದಂತೆಯೇ ಮಹಿಳೆ ವಿರುದ್ಧ ಕ್ರಮ ಕೈಗೊಳ್ಳುವಂತೆ ನಿಲ್ದಾಣದಲ್ಲಿನ ಭದ್ರತಾ ಏಜೆನ್ಸಿಗಳಿಗೆ ತಿಳಿಸಲಾಗಿತ್ತು' ಎಂದೂ ವಕ್ತಾರರು ಮಾಹಿತಿ ನೀಡಿದ್ದಾರೆ.
Drunk Italian flyer runs half-naked on Vistara flight; released on bail after arrest in Mumbai
Read @ANI Story | https://t.co/WT6W6YHKSM#Vistara #Mumbai #Flight pic.twitter.com/HgQKFDY5vX
— ANI Digital (@ani_digital) January 31, 2023
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.