ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮುಗಲಭೆ ಆರೋಪಿಗಳ ಆಸ್ತಿ ಧ್ವಂಸ ವಿರುದ್ಧ ‘ಸುಪ್ರೀಂ’ಗೆ ಜಮೀಯತ್ ಉಲಮಾ ಅರ್ಜಿ

Last Updated 18 ಏಪ್ರಿಲ್ 2022, 11:25 IST
ಅಕ್ಷರ ಗಾತ್ರ

ನವದೆಹಲಿ: ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಆಸ್ತಿಗಳನ್ನು ಧ್ವಂಸಗೊಳಿಸುವಂಥ ‘ಪ್ರಚೋದಕ ಕ್ರಮ’ಗಳನ್ನು ಕೇಂದ್ರ ಸರ್ಕಾರ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳು ತೆಗೆದುಕೊಳ್ಳದಂತೆ ನಿರ್ದೇಶನ ನೀಡಬೇಕೆಂದು ಕೋರಿ ಜಮೀಯತ್ ಉಲಮಾ–ಇ– ಹಿಂದ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಶ್ರೀರಾಮನವಮಿ ಆಚರಣೆಯ ಸಂದರ್ಭದಲ್ಲಿ ಗಲಭೆ ಎಸಗಿದ ಆರೋಪಿಗಳ ಆಸ್ತಿಗಳನ್ನು ಧ್ವಂಸಗೊಳಿಸಲು ಬುಲ್ಡೋಜರ್‌ಗಳನ್ನು ಬಳಸಿ ಮಧ್ಯಪ್ರದೇಶದಲ್ಲಿ ಅಧಿಕಾರಿಗಳು ಇತ್ತೀಚೆಗೆ ಕೈಗೊಂಡ ಕ್ರಮಗಳಿಂದಾಗಿ ಈ ಮನವಿಯು ಮಹತ್ವ ಪಡೆದುಕೊಂಡಿದೆ. ಜಮೀಯತ್ ಉಲಮಾ-ಇ- ಹಿಂದ್‌ನ ಕಾರ್ಯದರ್ಶಿ ಗುಲ್ಜಾರ್ ಅಹ್ಮದ್ ನೂರ್ ಮೊಹಮ್ಮದ್ ಅಜ್ಮಿ ಅವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

‘ವಸತಿ ಕಟ್ಟಡಗಳು ಅಥವಾ ಯಾವುದೇ ವಾಣಿಜ್ಯ ಆಸ್ತಿಯನ್ನು ಶಿಕ್ಷಾರ್ಹ ಕ್ರಮವಾಗಿ ಕೆಡವಲು ಸಾಧ್ಯವಿಲ್ಲ ಎಂದು ನ್ಯಾಯಾಲಯವು ಘೋಷಿಸಬೇಕು. ಕೋಮು ಗಲಭೆಗಳು ಸೇರಿದಂತೆ ಜನರು ಪ್ರಕ್ಷುಬ್ಧವಾಗುವಂಥ ಸಂದರ್ಭಗಳನ್ನು ನಿಭಾಯಿಸಲು ಪೊಲೀಸ್ ಸಿಬ್ಬಂದಿಗೆ ವಿಶೇಷ ತರಬೇತಿಯನ್ನು ನೀಡಬೇಕು’ ಎಂದೂ ಅರ್ಜಿದಾರರು ತಮ್ಮ ಮನವಿಯಲ್ಲಿ ಕೋರಿದ್ದಾರೆ.

ಹಲವು ಸಚಿವರು ಮತ್ತು ಶಾಸಕರು ಸಮಾಜದ ಒಂದು ನಿರ್ದಿಷ್ಟ ವರ್ಗದವರ ಅಪರಾಧದ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿರುವ ಅರ್ಜಿದಾರರು, ಗುಜರಾತ್ ಮತ್ತು ಉತ್ತರಪ್ರದೇಶ ರಾಜ್ಯಗಳು ಕೈಗೊಂಡ ಆರೋಪಿಗಳ ಆಸ್ತಿ ನೆಲಸಮ ಕ್ರಮಗಳನ್ನು ಉಲ್ಲೇಖಿಸಿ, ಇದು ‘ನ್ಯಾಯಾಲಯಗಳ ಪ್ರಮುಖ ಪಾತ್ರ ಸೇರಿದಂತೆ ನಮ್ಮ ದೇಶದ ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ’ ಎಂದು ಹೇಳಿದ್ದಾರೆ.

‘ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ತಡೆಯಲು ತಕ್ಷಣದ ಕ್ರಮದ ಅಗತ್ಯವಿದೆ. ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯಲು ಮತ್ತು ಇತರ ರಾಜ್ಯಗಳಲ್ಲಿಯೂ ಇಂತಹ ಕೃತ್ಯಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಬೇಕು’ ಎಂದು ಅರ್ಜಿದಾರರು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT