ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿ ಸಭೆಯಲ್ಲಿ ಭಾಗವಹಿಸಲು ಜಮ್ಮು–ಕಾಶ್ಮೀರ ಪಕ್ಷಗಳ ನಿರ್ಧಾರ

Last Updated 22 ಜೂನ್ 2021, 9:54 IST
ಅಕ್ಷರ ಗಾತ್ರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇದೇ 24ರಂದು ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲು ಜಮ್ಮು–ಕಾಶ್ಮೀರದ ‘ಪೀಪಲ್ಸ್ ಅಲಯನ್ಸ್ ಫಾರ್ ಗುಪ್ಕರ್ ಡಿಕ್ಲರೇಷನ್ (ಪಿಎಜಿಡಿ)’ ಮೈತ್ರಿಕೂಟ ನಿರ್ಧರಿಸಿದೆ.

‘ನಮ್ಮ ನಿಲುವು ಸ್ಪಷ್ಟವಾಗಿದೆ. ಅದೇನೆಂಬುದು ನಿಮಗೆಲ್ಲ ತಿಳಿದಿದೆ. ನಾಯಕರನ್ನು ಕೇಂದ್ರ ಸರ್ಕಾರವು ವೈಯಕ್ತಿಕವಾಗಿ ಆಹ್ವಾನಿಸಿರುವುದರಿಂದ, ಯಾರಿಗೆಲ್ಲ ಆಹ್ವಾನ ದೊರೆತಿದೆಯೋ ಅವರೆಲ್ಲ ಸಭೆಯಲ್ಲಿ ಭಾಗವಹಿಸಿ ಅಭಿಪ್ರಾಯ ಮಂಡಿಸುವ ಬಗ್ಗೆ ನಿರ್ಧರಿಸಿದ್ದೇವೆ’ ಎಂದು ಪಿಎಜಿಡಿ ಸಭೆಯ ಬಳಿಕ ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.

ಸಭೆಯಲ್ಲಿ ನಮ್ಮ ನಿಲುವು ಏನೆಂಬುದನ್ನು ಪ್ರಧಾನಿ ಮತ್ತು ಗೃಹ ಸಚಿವರ ಮುಂದಿಡಲಿದ್ದೇವೆ. ನಾವೇನು ಹೇಳಿದೆವು, ಅದಕ್ಕೆ ಏನು ಉತ್ತರ ದೊರೆತಿದೆ ಎಂಬುದನ್ನು ಸಭೆ ಮುಕ್ತಾಯವಾದ ಬಳಿಕ ನಿಮಗೆ ತಿಳಿಸಲಿದ್ದೇವೆ ಎಂದು ಮಾಧ್ಯಮದವರನ್ನು ಉದ್ದೇಶಿಸಿ ಅಬ್ದುಲ್ಲಾ ಹೇಳಿದ್ದಾರೆ.

2019ರ ಆಗಸ್ಟ್ 5ರಂದು ಕೇಂದ್ರ ಸರ್ಕಾರವು ಅಸಾಂವಿಧಾನಿಕವಾಗಿ ರದ್ದುಪಡಿಸಿರುವ ವಿಶೇಷ ಸ್ಥಾನಮಾನವನ್ನು ಮರಳಿಸಲು ಬೇಡಿಕೆ ಇಡಬೇಕು ಎಂಬುದೇ ನಮ್ಮ ಸಭೆಯ ಪ್ರಮುಖ ಚರ್ಚಾ ವಿಷಯವಾಗಿತ್ತು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

‘ನಾವು ಮಾತುಕತೆಯ ವಿರುದ್ಧವಿಲ್ಲ. ಮಾತುಕತೆಗೆ ಪೂರಕ ವಾತಾವರಣವನ್ನು ನಿರ್ಮಿಸುವುದಕ್ಕಾಗಿ ಕೇಂದ್ರವು ಜೈಲಿನಲ್ಲಿಟ್ಟಿದ್ದ ರಾಜಕಾರಣಿಗಳನ್ನು ಬಿಡುಗಡೆ ಮಾಡಬೇಕಾಗಿತ್ತು ಎಂದು ನಾನು ಭಾವಿಸಿದ್ದೆ. ಆದರೆ ಹಾಗಾಗಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

ಕೇಂದ್ರದ ಕಾರ್ಯಸೂಚಿಗೆ ನಾವು ಸಹಿ ಹಾಕಲಿದ್ದೇವೆ ಎಂದು ಯಾರೂ ತಪ್ಪಾಗಿ ಭಾವಿಸಬೇಕಿಲ್ಲ ಎಂದು ಸಿಪಿಐ(ಎಂ) ಹಿರಿಯ ನಾಯಕ ಮೊಹಮ್ಮದ್ ಯೂಸುಫ್ ತಾರಿಗಮಿ ಪ್ರತಿಕ್ರಿಯಿಸಿದ್ದಾರೆ.

‘ಕೇಂದ್ರ ಸರ್ಕಾರದ ತೀರ್ಮಾನ ಜಮ್ಮು–ಕಾಶ್ಮೀರದ ಹಿತಾಸಕ್ತಿಗೆ ಪೂರಕವಾಗಿದ್ದರೆ ನಾವು ಮುಂದುವರಿಯೋಣ. ಇಲ್ಲದಿದ್ದರೆ ನಾವು ಯಾವುದಕ್ಕೂ ಸಮ್ಮತಿಸುವುದಿಲ್ಲ’ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT