ಬುಧವಾರ, ಅಕ್ಟೋಬರ್ 28, 2020
20 °C
ಹಿರಿಯ ನಾಗರಿಕರು ಸೇರಿದಂತೆ ಕಂಪ್ಯೂಟರ್‌ ಬಳಕೆದಾರರಿಗೆ ವಂಚನೆ

ವಂಚನೆ: ಅಂತರರಾಷ್ಟ್ರೀಯ ಜಾಲ ಭೇದಿಸಿದ ಸಿಬಿಐ–ಯುಎಸ್‌ಡಿಜೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಭಾರತದಲ್ಲಿರುವ ಕಾಲ್‌ ಸೆಂಟರ್‌ಗಳನ್ನು ಬಳಸಿಕೊಂಡು ಅಮೆರಿಕದಲ್ಲಿನ ಹಿರಿಯ ನಾಗರಿಕರು ಸೇರಿದಂತೆ ಕಂಪ್ಯೂಟರ್‌ ಬಳಕೆ ಮಾಡುವವರನ್ನು ವಂಚಿಸುತ್ತಿದ್ದ ಅಂತರರಾಷ್ಟ್ರೀಯ ಜಾಲವನ್ನು ಸಿಬಿಐ ಹಾಗೂ ಅಮೆರಿಕದ ಯುನೈಟೆಡ್‌ ಸ್ಠೇಟ್ಸ್‌ ಡಿಪಾರ್ಟ್‌ಮೆಂಟ್‌ ಆಫ್‌ ಜಸ್ಟಿಸ್‌ (ಯುಎಸ್‌ಡಿಜೆ) ಭೇದಿಸಿವೆ.  

ದೆಹಲಿ, ನೋಯ್ಡಾ, ಗುರುಗ್ರಾಮ ಹಾಗೂ ಜೈಪುರಗಳಲ್ಲಿ ಸಿಬಿಐ ಹಾಗೂ ಯುಎಸ್‌ಡಿಜೆ ಜಂಟಿ ಕಾರ್ಯಾಚರಣೆ ನಡೆಸಿ, ವಂಚಕರ ಜಾಲವನ್ನು ಪತ್ತೆ ಮಾಡಿವೆ.

ಹಿರಿಯ ನಾಗರಿಕರಿಗೆ ವಂಚಿಸುವುದನ್ನು ತಡೆಯಲು ಯುಎಸ್‌ಡಿಜೆ ಅಧೀನದಲ್ಲಿ ಕಾರ್ಯ ನಿರ್ವಹಿಸುವ ಕಾರ್ಯಪಡೆ (ಟಿಇಎಫ್‌ಎಸ್‌ಎಫ್‌) ಹಾಗೂ ಮೈಕ್ರೋಸಾಫ್ಟ್‌ ಕಂಪನಿ ನೀಡಿದ ಸುಳಿವಿನ ಮೇರೆಗೆ ಉಭಯ ತನಿಖಾ ಸಂಸ್ಥೆಗಳು ತನಿಖೆ ಕೈಗೊಂಡಿವೆ ಎಂದು ಮೂಲಗಳು ಹೇಳಿವೆ.

ದೆಹಲಿ ಹಾಗೂ ಜೈಪುರಗಳಲ್ಲಿ ದಾಳಿ ನಡೆಸಿದ ಸಿಬಿಐ, ವಂಚನೆ ಆರೋಪ ಎದುರಿಸುತ್ತಿರುವ ಐದು ಕಂಪನಿಗಳ ನಿರ್ದೇಶಕರ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಕಂಪನಿಗಳಿಗೆ ಸಂಬಂಧಿಸಿದ ಹಲವಾರು ಡಿಜಿಟಲ್‌ ಸಾಕ್ಷ್ಯಗಳನ್ನು ಸಹ ಜಪ್ತಿ ಮಾಡಿ, ಕಂಪನಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದೆ.

ಮೈಕಲ್‌ ಬ್ರಿಯಾನ್‌ ಕಾಟರ್‌ ಈ ಜಾಲದ ಮುಖ್ಯ ಸೂತ್ರಧಾರ ಎನ್ನಲಾಗಿದೆ. ಈತ ಹಾಗೂ ಐದು ಕಂಪನಿಗಳು ಅಮೆರಿಕದಲ್ಲಿ ಹೊಂದಿರುವ ಕಚೇರಿ, ವೆಬ್‌ಸೈಟ್‌ಗಳು, ಹಣ ಪಾವತಿಗೆ ಸಂಬಂಧಿಸಿದ ಡಿಜಿಟಲ್‌ ವ್ಯವಸ್ಥೆಗಳನ್ನು ಹಾಳುಗೆಡಹುವುದನ್ನು ನಿರ್ಬಂಧಿಸಿ ದಕ್ಷಿಣ ಫ್ಲಾರಿಡಾದ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.

ವಂಚನೆ ಹೇಗೆ?: ಕಂಪ್ಯೂಟರ್‌ ಸುರಕ್ಷತೆ ಕುರಿತಂತೆ ಎಚ್ಚರಿಕೆ ನೀಡಲು ಬಳಕೆದಾರರಿಗೆ ಈ ಐದು ಕಂಪನಿಗಳು ಸಂದೇಶ ಕಳುಹಿಸುತ್ತಿದ್ದವು. ಮೈಕ್ರೋಸಾಫ್ಟ್‌ ಕಂಪನಿಯೇ ಈ ಸಂದೇಶಗಳನ್ನು ಕಳುಹಿಸಿದೆ ಎಂದು ಬಳಕೆದಾರರು ನಂಬುವ ರೀತಿಯಲ್ಲಿ ಈ ಮೆಸೇಜ್‌ಗಳು ಇರುತ್ತಿದ್ದವು. ಕಂಪ್ಯೂಟರ್‌ ಮೇಲೆ ವೈರಸ್‌ ದಾಳಿ ಮಾಡಿದೆ, ಕೂಡಲೇ ಸ್ಕ್ಯಾನ್‌ ಮಾಡಿ ಎಂದೂ ಸೂಚಿಸಲಾಗುತ್ತಿತ್ತು ಎಂದು ಹೇಳಲಾಗಿದೆ.

ಸಹಾಯಕ್ಕಾಗಿ ಶುಲ್ಕರಹಿತ ಸಂಖ್ಯೆಗೆ ಕರೆ ಮಾಡುವಂತೆಯೂ ಸೂಚಿಸಲಾಗುತ್ತಿತ್ತು. ಗ್ರಾಹಕರು ಕರೆ ಮಾಡಿದಾಗ, ಅವರ ಕರೆಯನ್ನು ಭಾರತದಲ್ಲಿರುವ ಕಾಲ್‌ಸೆಂಟರ್‌ಗೆ ಸಂಪರ್ಕವಾಗುವಂತೆ ಮಾಡಲಾಗುತ್ತಿತ್ತು. ವೈರಸ್‌ ಪತ್ತೆಯಾಗಿರುವ ಕಾರಣ ಕಂಪ್ಯೂಟರ್‌ಗಳನ್ನು ರಿಮೋಟ್‌ ಮೂಲಕ ಬಳಸಲು ಸೂಚಿಸಲಾಗುತ್ತಿತ್ತು.

ಅಸ್ತಿತ್ವದಲ್ಲಿಯೇ ಇಲ್ಲದಂತಹ ತಾಂತ್ರಿಕ ತೊಂದರೆಗಳನ್ನು ಸರಿಪಡಿಸಲಾಗಿದೆ ಎಂದು ಹೇಳಿ, ಗ್ರಾಹಕರಿಂದ ಸಾವಿರಾರು ಡಾಲರ್‌ಗಳನ್ನು ಸಂಗ್ರಹಿಸಿ, ವಂಚಿಸಲಾಗುತ್ತಿದೆ ಎಂದು ಅಮೆರಿಕದ ಕೋರ್ಟ್‌ನಲ್ಲಿ ದಾಖಲಾದ ದೂರಿನಲ್ಲಿ ವಿವರಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು