ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಶಿಮಠದಲ್ಲಿ 600ಕ್ಕೂ ಹೆಚ್ಚು ಮನೆಗಳಲ್ಲಿ ಬಿರುಕು: ಉಪಗ್ರಹ ಸರ್ವೆಯಲ್ಲಿ ಪತ್ತೆ

ಅಸುರಕ್ಷಿತ ವಲಯದಿಂದ ಜನರ ಸ್ಥಳಾಂತರಿಸಲು ಜಿಲ್ಲಾಡಳಿತಕ್ಕೆ ಸೂಚನೆ
Last Updated 9 ಜನವರಿ 2023, 19:31 IST
ಅಕ್ಷರ ಗಾತ್ರ

ನವದೆಹಲಿ/ಡೆಹ್ರಾಡೂನ್‌: ಭೂಕುಸಿತದಿಂದ ಮುಳುಗುತ್ತಿರುವ ಉತ್ತರಾಖಂಡದ ಜೋಶಿಮಠದಲ್ಲಿ 600 ಮನೆಗಳು ವ್ಯಾಪಕ ಬಿರುಕು ಬಿಟ್ಟಿರುವುದು ಉಪಗ್ರಹ ಸರ್ವೇಕ್ಷಣೆಯಲ್ಲಿ ಕಂಡುಬಂದಿದೆ. ಸುಮಾರು 4 ಸಾವಿರ ಸಂತ್ರಸ್ತರನ್ನು ಸುರಕ್ಷಿತ ನೆಲೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಸೇನೆ ಮತ್ತು ಐಟಿಬಿಪಿ ಕಚೇರಿಗಳ ತಗ್ಗಿನ ಭಾಗಗಳಲ್ಲಿಯೂ ಕೆಲವು ಕಡೆ ಬಿರುಕುಗಳು ಕಾಣಿಸಿವೆ. ಸಾಕಷ್ಟು ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮ ಅನುಸರಿಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿರುವುದಾಗಿ ‘ಎನ್‌ಡಿಟಿವಿ’ ಸೋಮವಾರ ವರದಿ ಮಾಡಿದೆ.

ಇದೇ ವೇಳೆ, ಗಡಿ ನಿರ್ವಹಣೆಯ ಕಾರ್ಯದರ್ಶಿ ಡಾ.ಧರ್ಮೇಂದ್ರ ಸಿಂಗ್ ಗಂಗ್ವಾರ್ ಅವರ ನೇತೃತ್ವದ ಕೇಂದ್ರದ ಉನ್ನತ ತಂಡವು ಡೆಹ್ರಾಡೂನ್‌ ತಲುಪಿದ್ದು, ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಅವರನ್ನು ಭೇಟಿ ಮಾಡಿತು.

ಎನ್‌ಡಿಆರ್‌ಎಫ್‌ ಮತ್ತು ಸ್ಥಳೀಯ ಆಡಳಿತವು ಸಮೀಕ್ಷೆ ನಡೆಸುತ್ತಿವೆ. ಜೋಶಿಮಠದಲ್ಲಿ ಶೇ 30ರಷ್ಟು ಹಾನಿಯಾಗಿದೆ. ತಜ್ಞರ ಸಮಿತಿಯು ವರದಿ ಸಿದ್ಧಪಡಿಸುತ್ತಿದ್ದು, ಆ ವರದಿಯನ್ನು ಪ್ರಧಾನಿ ಕಚೇರಿಗೆ (ಪಿಎಂಒ) ಸಲ್ಲಿಸಲಾಗುವುದು ಎಂದು ಗೃಹ ಸಚಿವಾಲಯದ ಅಧಿಕಾರಿ ಹೇಳಿದರು.

ಜಿಲ್ಲಾಡಳಿತ ಪಟ್ಟಣದಲ್ಲಿ 200ಕ್ಕೂ ಹೆಚ್ಚು ಮನೆಗಳು ವಾಸಕ್ಕೆ ಅಸುರಕ್ಷಿತವೆಂದು ಕೆಂಪು ಗೆರೆಗಳಿಂದ ಗುರುತಿಸಿದೆ. ಪರಿಹಾರ ನೆಲೆ ಅಥವಾ ಬಾಡಿಗೆ ಮನೆಗಳಿಗೆ ತೆರಳುವಂತೆ ನಾಗರಿಕರಿಗೆ ಸೂಚಿಸಿರುವ ಜಿಲ್ಲಾಡಳಿತ, ಸಂತ್ರಸ್ತ ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹ 4,000 ನೆರವನ್ನು ಮುಂದಿನ ಆರು ತಿಂಗಳವರೆಗೆ ನೀಡುವುದಾಗಿ ಭರವಸೆ ನೀಡಿದೆ.

ಮನೆ ಬಿಡಲು ಹಿಂಜರಿಕೆ: ಅಸುರಕ್ಷಿತ ವಲಯವಾಗಿ ಘೋಷಿಸಲ್ಪಟ್ಟ ಜೋಶಿಮಠದ ನಿವಾಸಿಗಳು ತಮ್ಮ ಮನೆಗಳನ್ನು ತೊರೆಯಲು ಹಿಂಜರಿಯುತ್ತಿದ್ದು, ಪ್ರತಿ ನಿಮಿಷವೂ ಮುಖ್ಯವಾಗಿದೆ. ಪೀಡಿತ ವಲಯದಿಂದ ಜನರನ್ನು ತಕ್ಷಣ ಸ್ಥಳಾಂತರಿಸಬೇಕು ಎಂದು ಉತ್ತರಾಖಂಡ ಮುಖ್ಯ ಕಾರ್ಯದರ್ಶಿ ಎಸ್‌.ಎಸ್‌. ಸಂಧು ಅವರು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.

ಸೋಮವಾರ ಇನ್ನೂ 68 ಮನೆಗಳಲ್ಲಿ ಬಿರುಕುಗಳು ಕಾಣಿಸಿವೆ. ವಾಸಿಸಲು ಸುರಕ್ಷಿತವಲ್ಲದ ಮನೆಗಳ ಸಂಖ್ಯೆ 678ಕ್ಕೆ ತಲುಪಿದೆ. ಮತ್ತೆ 27 ಕುಟುಂಬಗಳನ್ನು ಸುರಕ್ಷಿತ ನೆಲೆಗಳಿಗೆ ಸ್ಥಳಾಂತರಿಸಲಾಗಿದೆ. ಈವರೆಗೆ 82 ಕುಟುಂಬಗಳನ್ನು ಪಟ್ಟಣದ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಚಮೋಲಿಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT