ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳ ಚುನಾವಣೆ: ಬಿಜೆಪಿಯ ‘ರಥ ಯಾತ್ರೆ’ಗೆ ಇಂದು ನಡ್ಡಾ ಚಾಲನೆ

Last Updated 6 ಫೆಬ್ರುವರಿ 2021, 7:51 IST
ಅಕ್ಷರ ಗಾತ್ರ

ಕೋಲ್ಕತ್ತ:ಮುಂದಿನ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿರಿಸಿ ಬಿಜೆಪಿಯು ಪಶ್ಚಿಮ ಬಂಗಾಳದಾದ್ಯಂತ ನಡೆಸಲು ಉದ್ದೇಶಿಸಿರುವ ‘ರಥ ಯಾತ್ರೆ’ಗೆ ಚಾಲನೆ ನೀಡಲು ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಕೋಲ್ಕತ್ತಾಗೆ ಆಗಮಿಸಿದ್ದಾರೆ.

ಶನಿವಾರ ನಿಗದಿಯಾಗಿದ್ದ ರೋಡ್ ಶೋ ಮತ್ತು ಸಾರ್ವಜನಿಕ ರ‍್ಯಾಲಿಗಳಿಗಾಗಿ ಅವರು ಕೋಲ್ಕತ್ತಾಗೆ ತಲುಪಿದ್ದರೂ, ‘ರಥ ಯಾತ್ರೆ’ ಅಭಿಯಾನಕ್ಕೆ ಸ್ಥಳೀಯ ಆಡಳಿತದಿಂದ ಅನುಮತಿ ದೊರೆಯುವ ಬಗ್ಗೆ ಗೊಂದಲಗಳಿವೆ.

ಏತನ್ಮದ್ಯೆ, ಅಭಿಯಾನದ ಸಲುವಾಗಿ ನಡ್ಡಾ ಭೇಟಿ ನೀಡಲಿರುವ ನದಿಯಾ ಜಿಲ್ಲೆಯಾದ್ಯಂತ ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಶನಿವಾರ ಮಧ್ಯಾಹ್ನದಿಂದ ಎರಡು ದಿನಗಳ ಕಾಲ ಬೈಕ್‌ರ‍್ಯಾಲಿ ನಡೆಸಲು ನಿರ್ಧರಿಸಿದೆ.ಇಂದು ಛಪ್ರಾದಲ್ಲಿ ಆರಂಭವಾಗಲಿರುವ ಟಿಎಂಸಿಯ ‘ಜನಸಮರ್ಥನ ಯಾತ್ರೆ’ ಅಭಿಯಾನವು ಎರಡು ದಿನಗಳ ಬಳಿಕ ಪಲಾಶಿಯಲ್ಲಿ ಮುಕ್ತಾಯವಾಗಲಿವೆ.

ಬಿಜೆಪಿಯ ರಥ ಯಾತ್ರೆಗೆ ಪೊಲೀಸರು ಅನುಮತಿ ನೀಡದಿದ್ದರೂ, ಟಿಎಂಸಿ ತನ್ನ ಬೈಕ್‌ ರ್ಯಾಲಿ ಮುಂದುವರಿಸಲು ನಿರ್ಧರಿಸಿದೆ. ಹೀಗಾಗಿ ಪೊಲೀಸರು ಅನುಮತಿ ನೀಡದಿರುವುದನ್ನು ಲೆಕ್ಕಿಸಿದೆ ತಾವು ಅಭಿಯಾನ ನಡೆಸುವುದಾಗಿ ಬಿಜೆಪಿ ಹೇಳಿತ್ತು.

ಶನಿವಾರ ಸಂಜೆ 4 ಗಂಟೆಗೆ ‘ಪರಿವರ್ತನಾ ಯಾತ್ರೆ’ಗೆ ಚಾಲನೆ ನೀಡಲು ನಡ್ಡಾ ಅವರು ನಬಾದ್ವೀಪ್‌ಗೆ ಭೇಟಿ ನೀಡಲಿದ್ದಾರೆ. ಬಳಿಕ ಕೃಷ್ಣನಗರದ ಧುಬುಲಿಯಾಗೆ ತೆರಳಿ, ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ತಿಂಗಳುದ್ದಕ್ಕೂ ನಡೆಯುವ ರಥಯಾತ್ರೆ ಅಭಿಯಾನದಲ್ಲಿ ಪಾಲ್ಗೊಳ್ಳಲು ಬಿಜೆಪಿಯ ಹಲವು ಹಿರಿಯ ನಾಯಕರು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.

ನದಿಯಾ ಜಿಲ್ಲಾಡಳಿತ ಶುಕ್ರವಾರ ಸಂಜೆಯವರೆಗೂ ಅನುಮತಿ ನಿರಾಕರಿಸಿದ್ದರಿಂದ ‘ರಥಯಾತ್ರೆ’ ಅಥವಾ ‘ಪರಿವರ್ತನಾ ಯಾತ್ರೆ’ ಆಯೋಜನೆ ಬಗ್ಗೆ ಗೊಂದಲಗಳಿದ್ದವು.

ಸದ್ಯ ಬಿಜೆಪಿ, ರಥಯಾತ್ರೆ ನಡೆಸಲು ತನಗೆ ಅನುಮತಿ ದೊರೆತಿದೆ ಎಂದು ಹೇಳಿಕೊಳ್ಳುತ್ತಿದೆಯಾದರೂ, ಜಿಲ್ಲಾ ಪೊಲೀಸರು ಅನುಮತಿ ನೀಡಿರುವುದು ಸಾರ್ವಜನಿಕ ಸಭೆಗೆ ಮಾತ್ರ. ರಥಯಾತ್ರೆಗಲ್ಲ ಎಂದು ತಿಳಿಸಿದ್ದಾರೆ.ಹೀಗಾಗಿ ಅನಿಶ್ಚಿತತೆ ಮುಂದುವರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT