ಶನಿವಾರ, ಸೆಪ್ಟೆಂಬರ್ 25, 2021
29 °C

ಕಾನ್ಪುರ: 250ಕ್ಕೂ ಹೆಚ್ಚು ಪಾನ್‌, ಸಮೋಸಾ, ಚಾಟ್‌ ಮಾರಾಟಗಾರರು ಕೋಟ್ಯಧಿಪತಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಕಾನ್ಪುರ: ನಗರದ 250ಕ್ಕೂ ಅಧಿಕ ಪಾನ್‌, ಸಮೋಸಾ ಹಾಗೂ ಚಾಟ್‌ ಮಾರಾಟಗಾರರು ಕೋಟ್ಯಧಿಪತಿಗಳು ಎಂದು ಆದಾಯ ತೆರಿಗೆ ಇಲಾಖೆಯು ಇತ್ತೀಚೆಗೆ ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.

ಕಾನ್ಪುರದ ರಸ್ತೆಗಳ ಬದಿಯಲ್ಲಿ ತಿಂಡಿ-ತಿನಿಸುಗಳನ್ನು ಮಾರಾಟ ಮಾಡುವ 256 ಜನರು ಕೋಟ್ಯಧಿಪತಿಗಳು ಎಂದು ಉತ್ತರ ಪ್ರದೇಶದ ಆದಾಯ ತೆರಿಗೆ ಇಲಾಖೆಯ ಅಧ್ಯಯನವು ಹೇಳಿದೆ.

ಕುತೂಹಲಕಾರಿ ಸಂಗತಿ ಎಂದರೆ, ಕಾನ್ಪರ ಮಹಾನಗರ ವ್ಯಾಪ್ತಿಯಲ್ಲಿ ಚಿಂದಿ ಆಯುವ ಜನರ ಪೈಕಿ ಪ್ರತಿ ವ್ಯಕ್ತಿಯು ಮೂರಕ್ಕಿಂತ ಹೆಚ್ಚು ಕಾರುಗಳನ್ನು ಹೊಂದಿರುವುದು ಬೆಳಕಿಗೆ ಬಂದಿದೆ.

ತೆರಿಗೆಯನ್ನು ಪಾವತಿಸದ ಈ ಶ್ರೀಮಂತರು ಜಿಎಸ್‌ಟಿಯೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂಬ ಆಘಾತಕಾರಿ ಸಂಗತಿಯೂ ಸಮೀಕ್ಷೆಯಿಂದ ಬಯಲಾಗಿದೆ.

ಕಳೆದ ಎರಡು ವರ್ಷಗಳಲ್ಲಿ ನಗರದ ಚಿಂದಿ ವ್ಯಾಪಾರಿಯೊಬ್ಬರು ₹ 10 ಕೋಟಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಖರೀದಿಸಿದ್ದಾರೆ.

ಆರ್ಯ ನಗರ, ಸ್ವರೂಪ್ ನಗರ ಮತ್ತು ಬಿರ್ಹಾನ ರಸ್ತೆಯಲ್ಲಿರುವ ಪಾನ್‌ ಅಂಗಡಿಗಳ ಮಾಲೀಕರು ಕೋವಿಡ್‌ ಅವಧಿಯಲ್ಲಿ ₹ 5 ಕೋಟಿಗೂ ಅಧಿಕ ಮೌಲ್ಯದ ಆಸ್ತಿಗಳನ್ನು ಖರೀದಿ ಮಾಡಿದ್ದಾರೆಂದು ತಿಳಿದುಬಂದಿದೆ.

ಮಾಲ್ ರಸ್ತೆ, ಬಿರ್ಹಾನ ರಸ್ತೆಯ ಚಾಟ್ ಮಾರಾಟಗಾರರು ರಿಯಲ್ ಎಸ್ಟೇಟ್‌ ವ್ಯವಹಾರದಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ ಎಂಬ ಅಂಶವೂ ಬೆಳಕಿಗೆ ಬಂದಿದೆ.

ಡೇಟಾ ಸಾಫ್ಟ್‌ವೇರ್ ಮತ್ತು ಇತರ ತಾಂತ್ರಿಕ ಪರಿಕರಗಳ ಸಹಾಯದಿಂದ ಆದಾಯ ತೆರಿಗೆ ಇಲಾಖೆಯು ನಡೆಸಿದ ಸಮೀಕ್ಷೆಯಲ್ಲಿ ಈ ಎಲ್ಲ ವಿಚಾರಗಳು ಹೊರಬಿದ್ದಿವೆ ಎಂದು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು