ಭಾನುವಾರ, ಜೂನ್ 26, 2022
21 °C
ಪರಿಷತ್‌; ವಿಜಯೇಂದ್ರ ಪರ ಬೊಮ್ಮಾಯಿ ಬ್ಯಾಟಿಂಗ್‌

ಬಿಜೆಪಿ 3ನೇ ಅಭ್ಯರ್ಥಿ ಉದ್ಯಮಿ ಪ್ರಕಾಶ್‌ ಶೆಟ್ಟಿ?

ಸಿದ್ದಯ್ಯ ಹಿರೇಮಠ Updated:

ಅಕ್ಷರ ಗಾತ್ರ : | |

ಸಾಂದರ್ಭಿಕ ಚಿತ್ರ

ನವದೆಹಲಿ: ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಸಂಬಂಧ ಶನಿವಾರ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಸಭೆ ಚುನಾವಣೆಗೆ ಪಕ್ಷದ 3ನೇ ಅಭ್ಯರ್ಥಿ ಕಣಕ್ಕಿಳಿಸುವ ಬಗ್ಗೆ ಚರ್ಚಿಸಿದರು.

ಹಾಲಿ ಸದಸ್ಯರಾಗಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ನಿವೃತ್ತ ಐಪಿಎಸ್ ಅಧಿಕಾರಿ ಕೆ.ಸಿ. ರಾಮಮೂರ್ತಿ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ. ಮೂರನೇ ಅಭ್ಯರ್ಥಿ ಆಯ್ಕೆ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಜೆಡಿಎಸ್‌ ವರಿಷ್ಠರಿಗೂ ಆಪ್ತರಾಗಿರುವ ಹೋಟೆಲ್‌ ಉದ್ಯಮಿ ಪ್ರಕಾಶ್‌ ಶೆಟ್ಟಿ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸಿ ರಾಜ್ಯಸಭೆಗೆ ಕಳುಹಿಸುವ ಸಂಬಂಧ ಚಿಂತನೆ ನಡೆದಿದೆ. ಒಂದೆರಡು ದಿನ ಗಳಲ್ಲಿ ಈ ಕುರಿತು ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿದ್ದ ಕೆ.ಸಿ. ರಾಮಮೂರ್ತಿ ಅವರ ಆಯ್ಕೆಯ ಕುರಿತು ರಾಜ್ಯದ ಕೆಲವು ಮುಖಂಡರು ಆಕ್ಷೇಪ ಎತ್ತಿದ್ದರೂ, ಪಕ್ಷ ಸೇರ್ಪಡೆ ಸಂದರ್ಭ ವಾಗ್ದಾನ ಮಾಡಿದಂತೆ ಅವರನ್ನು ಮತ್ತೊಂದು ಅವಧಿಗೆ ಮುಂದುವರಿಸುವುದಕ್ಕೆ ಪಕ್ಷದ ವರಿಷ್ಠರು ಒಲವು ತೋರಿದ್ದಾರೆ ಎನ್ನಲಾಗಿದೆ.

ಕೇಂದ್ರ ಸಚಿವೆ ನಿರ್ಮಲಾ ಅವರನ್ನು ರಾಜ್ಯದಿಂದ ಪುನರಾಯ್ಕೆ ಮಾಡಿ ಕಳುಹಿಸುವ ಕುರಿತು ಯಾವುದೇ ಸಂಶಯವಿಲ್ಲ. ಇನ್ನು ಜೆಡಿಎಸ್‌ ಬೆಂಬಲ ನೀಡಿದಲ್ಲಿ 3ನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ಮಾತುಕತೆ ನಡೆಸಲಾಗಿದೆ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ತಿಳಿಸಿದರು.

ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಪಕ್ಷದಿಂದ ನಾಲ್ವರನ್ನು ಆಯ್ಕೆ ಮಾಡುವ ಅವಕಾಶ ಬಿಜೆಪಿಗಿದೆ. ಬಿ.ಎಸ್‌.ಯಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರ ಅವರನ್ನು ಪರಿಷತ್‌ಗೆ ಕಳುಹಿಸುವ ಬಗ್ಗೆ ಮಾತುಕತೆ ನಡೆಸಲಾಗಿದೆ. ಕೆಲವರು ಇದಕ್ಕೆ ಆಕ್ಷೇಪ ಎತ್ತಿದ್ದಾರೆ. ಆದರೆ, ‘ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯ ದೃಷ್ಟಿಯಿಂದ ಅವರನ್ನು ಕಡೆಗಣಿಸುವುದು ಸೂಕ್ತವಲ್ಲ’ ಎಂದು ಬೊಮ್ಮಾಯಿ ಮನವ
ರಿಕೆ ಮಾಡಿದ್ದಾರೆ ಎಂದು ಅವರು ಹೇಳಿದರು. ವರಿಷ್ಠರಾದ ಅಮಿತ್ ಶಾ, ಜೆ.ಪಿ. ನಡ್ಡಾ ಹಾಗೂ ಬಿ.ಎಲ್‌. ಸಂತೋಷ್ ಅವರನ್ನು ಭೇಟಿ ಮಾಡಲು ಬೊಮ್ಮಾಯಿ ಶುಕ್ರವಾರ ತಡರಾತ್ರಿವರೆಗೆ ಪ್ರಯತ್ನಿಸಿದರೂ ಫಲ ದೊರೆಯಲಿಲ್ಲ. ಹಾಗಾಗಿ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಅವರು, ಬೆಳಗಿನ ಜಾವ 1 ಗಂಟೆಗೆ ಕರ್ನಾಟಕ ಭವನಕ್ಕೆ ಬಂದು ತಂಗಿದ್ದರು.

ಕೊನೆಗೆ ಅಮಿತ್ ಶಾ ಅವರು ದೂರವಾಣಿ ಕರೆಯ ಮೂಲಕ ನೀಡಿದ ಸೂಚನೆಯ ಮೇರೆಗೆ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಶನಿವಾರ ಬೆಳಿಗ್ಗೆ ಭೇಟಿ ಮಾಡಿ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಕುರಿತು ಚರ್ಚಿಸಿದರು.

ವರಿಷ್ಠರದ್ದೇ ಅಂತಿಮ ನಿರ್ಧಾರ: ಸಿದ್ದರಾಮಯ್ಯ

ನವದೆಹಲಿ: ‘ವಿಧಾನ ಪರಿಷತ್‌ ಚುನಾವಣೆಯ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಂಬಂಧ ವರಿಷ್ಠರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಹ ಸಭೆಯಲ್ಲಿ ಭಾಗಿಯಾಗಿದ್ದರು. ಈ ಸಂಬಂಧ ವರಿಷ್ಠರೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರೊಂದಿಗೆ ಶನಿವಾರ ಚರ್ಚೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪಕ್ಷದಿಂದ ರಾಜ್ಯಸಭೆಗೆ ಒಬ್ಬರನ್ನು ಆಯ್ಕೆ ಮಾಡಲು ಅವಕಾಶವಿದೆ. ಅಭ್ಯರ್ಥಿ ಯಾರು ಎಂಬುದನ್ನು ವರಿಷ್ಠರೇ ನಿರ್ಧರಿಸಲಿದ್ದಾರೆ. ವಿಧಾನ ಪರಿಷತ್‌ಗೆ ಪಕ್ಷ ನಿಷ್ಠರು, ನಿರಂತರ ಸೇವೆ ಸಲ್ಲಿಸಿದವರನ್ನು ಪರಿಗಣಿಸುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ ಎಂದು ಅವರು ಹೇಳಿದರು.

ಸಿದ್ದರಾಮಯ್ಯ ಅವರು ಎಸ್‌.ಆರ್‌. ಪಾಟೀಲ ಅವರತ್ತ ಒಲವು ಹೊಂದಿದ್ದಾರೆ. ಡಿ.ಕೆ. ಶಿವಕುಮಾರ್‌ ಸೂಚನೆ ಮೇರೆಗೆ ಇನ್ನೊಬ್ಬರನ್ನು ಆಯ್ಕೆ ಮಾಡಲಾಗುತ್ತದೆ. ರಾಜ್ಯಸಭೆಗೆ ಜೈರಾಮ್‌ ರಮೇಶ್‌ ಅವರನ್ನೇ ಪುನರಾಯ್ಕೆ ಮಾಡುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಪಕ್ಷದ ಮೂಲಗಳು ಹೇಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು