ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಿ.ಎಂ. ಕಿಸಾನ್‌ ಯೋಜನೆ: ರಾಜ್ಯದಲ್ಲಿ ‘ಒಬಿಸಿ’ಗೆ ಹೆಚ್ಚು ಲಾಭ

ದೇಶದ 14 ಕೋಟಿ ರೈತರಿಗೆ ಪ್ರಯೋಜನ
Last Updated 30 ನವೆಂಬರ್ 2020, 6:13 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದಲ್ಲಿ ಪಿಎಂ ಕಿಸಾನ್ ಯೋಜನೆಯ ಶೇ 86ರಷ್ಟು ಫಲಾನುಭವಿಗಳು ಇತರೆ ಹಿಂದುಳಿದ ವರ್ಗಕ್ಕೆ (ಒಬಿಸಿ) ಸೇರಿದ್ದಾರೆ. ಆದರೆ ತೆಲಂಗಾಣ ರಾಜ್ಯದಲ್ಲಿ ಈ ಸಮುದಾಯದ ಯಾರೊಬ್ಬ ಫಲಾನುಭವಿಯೂ ಇಲ್ಲ. ಸಾಮಾನ್ಯ ವರ್ಗಕ್ಕೆ ಸೇರಿದ ಫಲಾನುಭವಿಗಳ ಸಂಖ್ಯೆ ಕರ್ನಾಟಕದಲ್ಲಿ ಅತಿ ಕಡಿಮೆ.

ಆರ್‌ಟಿಐ ಕಾರ್ಯಕರ್ತ ವೆಂಕಟೇಶ್ ನಾಯಕ್ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ಈ ಉತ್ತರ ಲಭ್ಯವಾಗಿದೆ. 10.16 ಕೋಟಿ ಫಲಾನುಭವಿಗಳಲ್ಲಿ ಮಹಿಳೆಯರ ಪ್ರಮಾಣ ಶೇ 24.25

ರಾಜ್ಯದ ಒಟ್ಟು ಫಲಾನುಭವಿಗಳ ಸಂಖ್ಯೆ52.38 ಲಕ್ಷ. ಈ ಪೈಕಿ ಒಬಿಸಿಯ 45.08 ಲಕ್ಷ, ದಲಿತ ಸಮುದಾಯದ 4.44 ಲಕ್ಷ ಹಾಗೂ ಬುಡಕಟ್ಟು ಸಮುದಾಯದ 2.68 ಲಕ್ಷ ಫಲಾನುಭವಿಗಳು ಇದ್ದಾರೆ. ಸಾಮಾನ್ಯ ವರ್ಗದವರ ಸಂಖ್ಯೆ 17,732.

ಪಂಜಾಬ್‌ ಜನಸಂಖ್ಯೆಯಲ್ಲಿ ಶೇ 31ರಷ್ಟು ದಲಿತರು ಇದ್ದರೂ, ಆ ರಾಜ್ಯದಲ್ಲಿ ಯೋಜನೆಯ ಫಲಾನುಭವಿಗಳ ಸಂಖ್ಯೆ ಕೇವಲ 22. ಕೇಂದ್ರಾಡಳಿತ ಪ್ರದೇಶಗಳಾದ ಲಡಾಖ್ ಮತ್ತ ಲಕ್ಷದ್ವೀಪದಲ್ಲಿ ಈ ಸಮುದಾಯದ ಯಾವೊಬ್ಬ ಫಲಾನುಭವಿಯೂ ಇಲ್ಲ. ಕಳೆದ ವರ್ಷದ ಫೆಬ್ರುವರಿಯಲ್ಲಿ ಪಿಎಂ ಕಿಸಾನ್ ಯೋಜನೆ ಆರಂಭವಾಗಿತ್ತು. ರೈತರ ಖಾತೆಗೆ ವರ್ಷಕ್ಕೆ ತಲಾ ₹6,000 ಹಣವನ್ನು ಮೂರು ಕಂತುಗಳಲ್ಲಿ ಪಾವತಿಸುವುದು ಯೋಜನೆಯ ಉದ್ದೇಶ. ಆರಂಭದಲ್ಲಿ ಅತ್ಯಂತ ಬಡ ರೈತರು ಯೋಜನೆಯ ವ್ಯಾಪ್ತಿಯಲ್ಲಿದ್ದರು. ನಂತರ ಯೋಜನೆಯ ವ್ಯಾಪ್ತಿ ವಿಸ್ತಾರವಾಗಿದ್ದು, ಎಲ್ಲ 14 ಕೋಟಿ ರೈತರನ್ನೂ ಸೇರಿಸಲಾಗಿದೆ.

ತೆಲಂಗಾಣದಲ್ಲಿ ಒಬಿಸಿಗೆ ಸೇರಿದ 87 ಜಾತಿಗಳಿದ್ದರೂ ಒಬ್ಬ ಫಲಾನುಭವಿಯೂ ಇಲ್ಲದಿರುವುದು ಅಚ್ಚರಿ ಮೂಡಿಸಿದೆ ಎಂದಿರುವ ಆರ್‌ಟಿಐ ಕಾರ್ಯಕರ್ತ ನಾಯಕ್, ಈ ಬಗ್ಗೆ ತನಿಖೆ ಯಾಗಬೇಕು ಎಂದಿದ್ದಾರೆ. ಕೇರಳದ ಒಟ್ಟು 33.46 ಲಕ್ಷ ಫಲಾನುಭವಿಗಳಲ್ಲಿ ಒಬಿಸಿ ಸಮುದಾಯದವರ ಸಂಖ್ಯೆ ಕೇವಲ 2,220 (ಶೇ 0.07).

ಪರಿಶಿಷ್ಟ ಜಾತಿ ವಿಚಾರದಲ್ಲಿ ಉತ್ತರ ಪ್ರದೇಶದಲ್ಲಿ ಹೆಚ್ಚು (43.94 ಲಕ್ಷ) ಫಲಾನುಭವಿಗಳಿದ್ದಾರೆ. ರಾಜಸ್ಥಾನ, ಮಧ್ಯಪ್ರದೇಶ, ಬಿಹಾರ ಹಾಗೂ ಮಹಾರಾಷ್ಟ್ರ ರಾಜ್ಯಗಳು ನಂತರದ ಸ್ಥಾನದಲ್ಲಿವೆ. ಪರಿಶಿಷ್ಟ ಪಂಗಡ ಫಲಾನುಭವಿಗಳು ಮಧ್ಯಪ್ರದೇಶದಲ್ಲಿ ಅತಿಹೆಚ್ಚಿನ ಸಂಖ್ಯೆಯಲ್ಲಿ (16.52 ಲಕ್ಷ) ಇದ್ದಾರೆ. ನಂತರದ ಸ್ಥಾನದಲ್ಲಿ ಒಡಿಶಾ, ಗುಜರಾತ್, ರಾಜಸ್ಥಾನ, ಛತ್ತೀಸಗಡ ಹಾಗೂ ಮಹಾರಾಷ್ಟ್ರ ಇವೆ. ಮಹಾರಾಷ್ಟ್ರದಲ್ಲಿ ಅತಿಹೆಚ್ಚು ಸಂಖ್ಯೆಯ (51.07 ಲಕ್ಷ) ಸಾಮಾನ್ಯ ವರ್ಗದ ಫಲಾನುಭವಿಗಳಿದ್ದಾರೆ. ನಂತರದ ಸ್ಥಾನದಲ್ಲಿ ಬಿಹಾರ, ಕೇರಳ, ತೆಲಂಗಾಣ ಹಾಗೂ ಗುಜರಾತ್ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT