ಬುಧವಾರ, ಸೆಪ್ಟೆಂಬರ್ 22, 2021
23 °C

ವಿಧಾನಸಭೆಯಲ್ಲಿನ ಗದ್ದಲ: ಶಿಕ್ಷಣ ಸಚಿವರ ರಾಜೀನಾಮೆ ಅಗತ್ಯವಿಲ್ಲ ಎಂದ ಕೇರಳ ಸಿ.ಎಂ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೇರಳ ವಿಧಾನಸಭೆಯಲ್ಲಿ 2015ರಲ್ಲಿ ನಡೆದಿದ್ದ ಗದ್ದಲಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಶಿಕ್ಷಣ ಸಚಿವ ವಿ.ಶಿವನ್‌ ಕುಟ್ಟಿ ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ವಿಧಾನಸಭೆಯಲ್ಲಿ ಗುರುವಾರ ಆಗ್ರಹಿಸಿದವು.

ಆದರೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ಶಿಕ್ಷಣ ಸಚಿವರು ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ವಿರೋಧ ಪಕ್ಷಗಳ ಬೇಡಿಕೆಯನ್ನು ತಳ್ಳಿಹಾಕಿದರು.

ಈ ಪ್ರಕರಣದಲ್ಲಿ ಶಿವನ್‌ ಕುಟ್ಟಿ ಸೇರಿದಂತೆ ಎಲ್‌ಡಿಎಫ್‌ ಶಾಸಕರ ವಿರುದ್ಧದ ಕ್ರಿಮಿನಲ್‌ ಪ್ರಕರಣವನ್ನು ವಾಪಸ್‌ ಪಡೆಯುವಂತೆ ಕೋರಿ ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ತಿರಸ್ಕರಿಸಿತ್ತು. ಇದನ್ನು ಪ್ರಮುಖ ಅಸ್ತ್ರವಾಗಿಸಿಕೊಂಡ ವಿರೋಧ ಪಕ್ಷಗಳು ಗುರುವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು.

ಸುಪ್ರೀಂ ಕೋರ್ಟ್‌ ತೀರ್ಪಿನ ಚರ್ಚೆ ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ವಿರೋಧ ಪಕ್ಷಗಳು ಪಟ್ಟು ಹಿಡಿದವು. ಈ ವೇಳೆ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ವಾಕ್ಸಮರ ನಡೆಯಿತು.

ಕ್ರಿಮಿನಲ್‌ ಪ್ರಕರಣ ಎದುರಿಸುತ್ತಿರುವ ಮಾರ್ಕ್ಸ್‌ವಾದಿ ನಾಯಕರು ನ್ಯಾಯಾಂಗ ವಿಚಾರಣೆಯನ್ನು ಎದುರಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದ ನಂತರವೂ ಶಿವನ್‌ ಕುಟ್ಟಿ ಅವರು ಸಚಿವರಾಗಿ ಮುಂದುವರಿಯುವುದು ಸರಿಯಲ್ಲ. ಅದು ಅನ್ಯಾಯ. ಕೂಡಲೇ ಮುಖ್ಯಮಂತ್ರಿ ಅವರಿಂದ ರಾಜೀನಾಮೆ ಪಡೆಯಬೇಕು ಅಥವಾ ಅವರನ್ನು ಆ ಸ್ಥಾನದಿಂದ ಕೆಳಗಿಳಿಸಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಆಗ್ರಹಿಸಿದರು.

ವಿರೋಧ ಪಕ್ಷಗಳ ಬೇಡಿಕೆಯನ್ನು ತಿರಸ್ಕರಿಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು, ನ್ಯಾಯಾಲಯವು ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ತಪ್ಪಿತಸ್ಥರೆಂದು ಹೇಳಿಲ್ಲ. ಹಾಗಾಗಿ ಶಿಕ್ಷಣ ಸಚಿವರು ರಾಜೀನಾಮೆ ನೀಡುವ ವಿಷಯ ಬರುವುದಿಲ್ಲ ಎಂದರು.

ಸಂವಿಧಾನ ಬದ್ಧವಾಗಿ ಶಾಸಕಾಂಗ ಮತ್ತು ಅದರ ಸದಸ್ಯರಿಗೆ ಕೆಲವು ಸವಲತ್ತುಗಳು ದೊರೆತಿವೆ. ಶಾಸಕಾಂಗದ ಈ ಸವಲತ್ತಿಗೆ ಸಂಬಂಧಿಸಿದ ವ್ಯವಸ್ಥೆಯನ್ನು ಸಂರಕ್ಷಿಸಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದರು.

ಶಾಸಕಾಂಗ ಒಂದು ಸಾರ್ವಭೌಮ ಸಂಸ್ಥೆ. ಸದನದೊಳಗಿನ ಸಮಸ್ಯೆಗಳು ಅಲ್ಲಿಯೇ ಕೊನೆಗೊಳ್ಳಬೇಕು. ಅಂತಹ ಸಮಸ್ಯೆಗಳನ್ನು ಹೊರಗೆ ಎಳೆಯುವುದು ಶಾಸಕಾಂಗದ ಸಾರ್ವಭೌಮತ್ವವನ್ನು ಹಾಳುಮಾಡುವ ಪ್ರವೃತ್ತಿಯನ್ನು ಬಲಪಡಿಸಿದಂತಾಗುತ್ತದೆ ಎಂದು ವಿಜಯನ್ ವಿವರಿಸಿದರು.

ಈ ಪ್ರಕರಣದ ಆರೋಪಿ ಶಾಸಕರ ವಿರುದ್ಧ ಆಗಿನ ವಿಧಾನಸಭಾ ಸ್ಪೀಕರ್ ಆಗಲೇ ಕ್ರಮ ತೆಗೆದುಕೊಂಡಿದ್ದರು. ಈ ಸಂಬಂಧ ಆರೋಪಿಗಳನ್ನು ಅವರು ಸದನದಿಂದ ಅಮಾನತುಗೊಳಿಸಿದ್ದರು. ಒಂದೇ ಅಪರಾಧಕ್ಕೆ ಎರಡೆರಡು ಬಾರಿ ಶಿಕ್ಷೆ ನೀಡುವುದು ನಮ್ಮ ಕಾನೂನು ಪರಿಕಲ್ಪನೆಯ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿವೆ ಎಂದು ಅವರು ಹೇಳಿದರು.

ಅವರು ತಮ್ಮ ನಿಲುವನ್ನು ಸಮರ್ಥಿಸಿಕೊಳ್ಳಲು 1998 ರಿಂದ 2021ರ ನಡುವೆ ದೇಶದ ವಿವಿಧ ರಾಜ್ಯಗಳ ಶಾಸನ ಸಭೆಗಳಲ್ಲಿ ನಡೆದ ಹಿಂಸಾತ್ಮಕ ಘಟನೆಗಳ ವಿವರವಾದ ಪಟ್ಟಿಯನ್ನೂ ನೀಡಿದರು.

ಮುಖ್ಯಮಂತ್ರಿ ಅವರ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು