ಭಾನುವಾರ, ಆಗಸ್ಟ್ 14, 2022
19 °C

ಕ್ಷೀಣಿಸಿದ ಬುರೆವಿ ಚಂಡಮಾರುತ, ಕೇರಳಕ್ಕಿಲ್ಲ ಅಪಾಯ: ಹವಾಮಾನ ಇಲಾಖೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೇರಳಕ್ಕೆ ತಲುಪುವ ಮುನ್ನವೇ ಬುರೆವಿ ಚಂಡಮಾರುತವು ಕ್ಷೀಣಿಸಿದೆ ಎಂದು ತಿಳಿಸಿರುವ ಭಾರತೀಯ ಹವಾಮಾನ ಇಲಾಖೆಯು(ಐಎಂಡಿ), ಕೇರಳದ ಏಳು ಜಿಲ್ಲೆಗಳಿಗೆ ನೀಡಿದ್ದ ‘ರೆಡ್‌ ಅಲರ್ಟ್‌’ ಹಿಂಪಡೆದಿದೆ.

ಬುರೆವಿ ಚಂಡಮಾರುತದ ಪಥವನ್ನು ಆಧರಿಸಿ ಐಎಂಡಿ ಮುಂದೆ ನೀಡುವ ನಿರ್ದೇಶನದವರೆಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಗ್ಗೆ 10ರಿಂದ ಸ್ಥಗಿತವಾಗಿದ್ದ ವಿಮಾನ ಹಾರಾಟವು ಸಂಜೆ ವೇಳೆ ಪುನರಾರಂಭಗೊಂಡಿದೆ. 

ಐಎಂಡಿ ಮಾಹಿತಿ ಅನ್ವಯ ಮುಂದಿನ 36 ಗಂಟೆಗಳಲ್ಲಿ ಚಂಡಮಾರುತವು ಮತ್ತಷ್ಟು ಕ್ಷೀಣಿಸಲಿದ್ದು, ಕೇರಳಕ್ಕೆ ಪ್ರವೇಶಿಸುವ ವೇಳೆಗೆ ಅದರ ವೇಗ ಗಂಟೆಗೆ 30–40 ಕಿ.ಮೀಗೆ ಕುಸಿಯಲಿದೆ. ಕೇರಳದ ಕೆಲ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ದಕ್ಷಿಣ ಕೇರಳದ ಕೆಲವೆಡೆ ಗಂಟೆಗೆ 35–45 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸಲಿದೆ. 

ಕೇರಳದ 10 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್‌ ಅನ್ನು ಶುಕ್ರವಾರ ಘೋಷಿಸಲಾಗಿದ್ದು, ಬುರೆವಿ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ ಇದ್ದ ಕಾರಣ ಐದು ಜಿಲ್ಲೆಗಳಲ್ಲಿ ಶುಕ್ರವಾರ ಸಾರ್ವಜನಿಕ ರಜೆಯನ್ನು ರಾಜ್ಯ ಸರ್ಕಾರ ಘೋಷಿಸಿತ್ತು.

ತಮಿಳುನಾಡು, ಪಾಂಡಿಚೇರಿಯಲ್ಲಿ ಭಾರಿ ಮಳೆ: ಬುರೆವಿ ಚಂಡಮಾರುತದ ಪ್ರಭಾವದಿಂದಾಗಿ ತಮಿಳುನಾಡು ಹಾಗೂ  ಪಾಂಡಿಚೇರಿಯ ಹಲವೆಡೆ ಭಾರಿ ಮಳೆಯಾಗಿದೆ. ಶುಕ್ರವಾರ ಬೆಳಗ್ಗೆ 8.30ರವರೆಗಿನ 24 ಗಂಟೆ ಅವಧಿಯಲ್ಲಿ ಪಾಂಡಿಚೇರಿಯಲ್ಲಿ 14 ಸೆಂ.ಮೀ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡಿನ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಬೆಳೆ ಹಾನಿಯಾಗಿದೆ.

ನಾಗಪಟ್ಟಿನಂ ಜಿಲ್ಲೆಯ ಕೊಲ್ಲಿಡಂ ಪ್ರದೇಶದಲ್ಲಿ 36 ಸೆಂ.ಮೀ., ಚಿದಂಬರಂನಲ್ಲಿ 34 ಸೆಂ.ಮೀ ಭಾರಿ ಮಳೆ ದಾಖಲಾಗಿದೆ. ತಿರುವರೂರ್, ತಂಜಾವೂರು, ಪುದುಕೊಟ್ಟೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭತ್ತ ಹಾಗೂ ಕಬ್ಬಿನ ಬೆಳೆ ನಾಶವಾಗಿದೆ.

ಪಾಂಡಿಚೇರಿಯಲ್ಲಿ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ಮುಖ್ಯರಸ್ತೆಗಳು ಜಲಾವೃತವಾಗಿದ್ದವು. ಭಾರಿ ಮಳೆಯ ಕಾರಣ ಹಲವು ಗಂಟೆ ವಿದ್ಯುತ್‌ ಸರಬರಾದಜು ಕೂಡಾ ವ್ಯತ್ಯಯವಾಗಿತ್ತು. ಜಲಾವೃತವಾದ ಪ್ರದೇಶಗಳಿಗೆ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಶುಕ್ರವಾರ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು