ಶನಿವಾರ, ಮೇ 15, 2021
25 °C

ಬಿಜೆಪಿಯ ಸಂಚಿಗೆ ಕಾಂಗ್ರೆಸ್‌ ಸಾಥ್‌: ಕೇರಳ ಸಿಎಂ ಪಿಣರಾಯಿ ವಿಜಯನ್‌ ಆರೋಪ

ಪಿಟಿಐ‌ Updated:

ಅಕ್ಷರ ಗಾತ್ರ : | |

Pinarayi vijayan

ಕೊಚ್ಚಿ: ‘ಕೇಂದ್ರದ ತನಿಖಾ ಸಂಸ್ಥೆಗಳು ರಾಜ್ಯದಲ್ಲಿ ವಿಧ್ವಂಸಕ ಕೆಲಸಗಳನ್ನು ಮಾಡುತ್ತಿವೆ. ಕೇರಳ ಮೂಲಸೌಲಭ್ಯ ಹೂಡಿಕೆ ನಿಧಿ ಮಂಡಳಿಯನ್ನು  (ಕೆಐಐಎಫ್‌ಬಿ) ನಾಶಪಡಿಸುವ ಮೂಲಕ ರಾಜ್ಯದ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಸ್ಥಗಿತಗೊಳಿಸಲು ಪ್ರಯತ್ನಿಸುತ್ತಿವೆ’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಆರೋಪಿಸಿದ್ದಾರೆ.

ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಹಾಗೂ ಬಿಜೆಪಿ ಒಟ್ಟಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿವೆ. ತನಿಖಾ ಸಂಸ್ಥೆಗಳ ಮೂಲಕ ಬಿಜೆಪಿಯು ಯೋಜನೆಗಳನ್ನು ಸ್ಥಗಿತಗೊಳಿಸುತ್ತಿದ್ದರೆ, ಕಾಂಗ್ರೆಸ್‌ ಪಕ್ಷವು ಅದಕ್ಕೆ ಸಹಕಾರ ನೀಡುತ್ತಿದೆ. ಅಭಿವೃದ್ಧಿಯನ್ನು ಗಲ್ಲಿಗೇರಿಸುವ ಕೆಲಸವನ್ನು ಕಾಂಗ್ರೆಸ್‌ ಮಾಡುತ್ತಿದೆ ಎಂದು ಅವರು ಮಾಧ್ಯಮಗೋಷ್ಠಿಯಲ್ಲಿ ಆರೋಪಿಸಿದರು.

ವಸತಿರಹಿತರಿಗೆ ಮನೆಗಳನ್ನು ನಿರ್ಮಿಸಿಕೊಡುವ ರಾಜ್ಯ ಸರ್ಕಾರದ ‘ಲೈಫ್‌ ಮಿಷನ್‌’ ಯೋಜನೆಯನ್ನು  ಕೆಐಐಎಫ್‌ಬಿ ನಿರ್ವಹಿಸುತ್ತಿದೆ. ಈ ಮಂಡಳಿಯು ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಯನ್ನು ಉಲ್ಲಂಘಿಸಿದೆ ಎಂಬ ಆರೋಪದ ಕಾರಣಕ್ಕೆ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ಶೋಧ ನಡೆಸಿದ್ದರು.

‘ಬಡವರಿಗೆ ಆಹಾರ ಧಾನ್ಯಗಳನ್ನು ನೀಡುವ ಮತ್ತು ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ನೀಡುವುದನ್ನು ತಡೆಯಬೇಕು ಎಂದು ವಿರೋಧ ಪಕ್ಷದ ನಾಯಕ ರಮೇಶ್‌ ಚೆನ್ನಿತ್ತಲ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಕೂಡಲೇ ಈ ದೂರನ್ನು ವಾಪಸ್‌ ಪಡೆದು ಜನರ ಕ್ಷಮೆ ಯಾಚಿಸಬೇಕು’ ಎಂದು ಮುಖ್ಯಮಂತ್ರಿ ಆಗ್ರಹಿಸಿದರು.

ಚುನಾವಣಾ ನೀತಿಸಂಹಿತೆ ಜಾರಿಯಲ್ಲಿರುವುದರಿಂದ, ವಿಶು ಸಂದರ್ಭದಲ್ಲಿ (ಏ.14) ಜನರಿಗೆ ವಿಶೇಷ ಆಹಾರ ವಿತರಿಸುವ ಯೋಜನೆಯನ್ನು ಸದ್ಯಕ್ಕೆ ತಡೆಹಿಡಿಯಬೇಕು ಎಂದು ಚೆನ್ನಿತ್ತಲ ಅವರು ಚುನಾವಣಾ ಆಯೋಗಕ್ಕೆ ಈಚೆಗೆ ಮನವಿ ಸಲ್ಲಿಸಿದ್ದರು.

ಸೈದ್ಧಾಂತಿಕ ಗೊಂದಲ: ‘ಎಡ ಪಕ್ಷಗಳು ಮತ್ತು ಕಾಂಗ್ರೆಸ್‌ ಸೈದ್ಧಾಂತಿಕ ಗೊಂದಲದಲ್ಲಿವೆ. ಕೇರಳದಲ್ಲಿ ಇವೆಡರೂ ಒಂದರ ವಿರುದ್ಧ ಇನ್ನೊಂದು ಸ್ಪರ್ಧಿಸುತ್ತಿವೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಒಂದಾಗಿ ಬಿಜೆಪಿ ವಿರುದ್ಧ ಸ್ಪರ್ಧಿಸುತ್ತಿವೆ’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದರು.

ಧರ್ಮಾಡಂ ಕ್ಷೇತ್ರಕ್ಕೆ ಬಿಜೆಪಿಯ ಅಭ್ಯರ್ಥಿ ಸಿ.ಕೆ. ಪದ್ಮನಾಭನ್‌ ಪರವಾಗಿ ಚಕ್ಕರಕ್ಕಲ್‌ನಲ್ಲಿ ಆಯೋಜಿಸಿದ್ದ ರ್‍ಯಾಲಿಯಲ್ಲಿ ಮಾತನಾಡಿದ ಅವರು, ‘ಇಲ್ಲಿಯ ಮುಖ್ಯಮಂತ್ರಿ ಕಚೇರಿಯೇ ಚಿನ್ನದ ಕಳ್ಳಸಾಗಾಣೆಯಲ್ಲಿ ತೊಡಗಿದೆ. ಪ್ರಕರಣವು ಬೆಳಕಿಗೆ ಬಂದಾಗ ಕೇಂದ್ರೀಯ ಸಂಸ್ಥೆಯ ಮೂಲಕ ತನಿಖೆ ನಡೆಸುವಂತೆ ಪಿಣರಾಯಿ ವಿಜಯನ್‌ ಆಗ್ರಹಿಸಿದ್ದರು. ಆದರೆ ಅವರ ಕಚೇರಿಯೇ ಇದರಲ್ಲಿ ಭಾಗಿ ಎಂದು ಗೊತ್ತಾಗುತ್ತಿದ್ದಂತೆಯೇ, ‘ರಾಜ್ಯದ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ’ ಎಂದು ಆರೋಪಿಸಲು ತೊಡಗಿದ್ದಾರೆ’ ಎಂದರು.

ಚುನಾವಣಾ ಕಣದಲ್ಲಿ

l ಅಭಿವೃದ್ಧಿಗೆ ಸಂಬಂಧಿಸಿದಂತೆ ತಮ್ಮ ಪಕ್ಷದ ಅಭ್ಯರ್ಥಿ ವಸಂತಿ ಶ್ರೀನಿವಾಸನ್‌ ಜತೆ ಮುಕ್ತ ಚರ್ಚೆಗೆ ಬರುವಂತೆ ಮಕ್ಕಳ್‌ ನೀಧಿ ಮಯ್ಯಂನ ಮುಖ್ಯಸ್ಥ ಕಮಲ್‌ ಹಾಸನ್‌ ಅವರಿಗೆ ಕೇಂದ್ರಸ ಸಚಿವೆ ಸ್ಮೃತಿ ಇರಾನಿ ಸವಾಲು ಹಾಕಿದ್ದಾರೆ. ಕೊಯಮತ್ತೂರ ದಕ್ಷಿಣ ಕ್ಷೇತ್ರದಲ್ಲಿ ಕಮಲ್‌ ಹಾಸನ್‌ ಹಾಗೂ ವಸಂತಿ ಅವರು ಸ್ಪರ್ಧಿಗಳಾಗಿದ್ದಾರೆ

l ‘ಕನ್ಯಾಕುಮಾರಿ ಜಿಲ್ಲೆಯಲ್ಲಿ ಬಂದರು ನಿರ್ಮಾಣದ ವಿಚಾರವಾಗಿ ಕಾಂಗ್ರೆಸ್‌ ಹಾಗೂ ಡಿಎಂಕೆ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಅಂಥ ಯಾವುದೇ ಪ್ರಸ್ತಾವ ಇಲ್ಲ ಎಂದು ಈ ಹಿಂದೆಯೂ ಸ್ಪಷ್ಟಪಡಿಸಿದ್ದೇನೆ’ ಎಂದು ಎಐಎಡಿಎಂಕೆ ಮುಖಂಡ, ತಮಿಳುನಾಡಿನ ಮುಖ್ಯಮಂತ್ರಿ ಪಳನಿಸ್ವಾಮಿ ಹೇಳಿದ್ದಾರೆ.

l ‘ಪುದುಚೇರಿಗೆ ಪೂರ್ಣ ಪ್ರಮಾಣದ ರಾಜ್ಯದ ಸ್ಥಾನಮಾನ ನೀಡುವ ವಿಚಾರದಲ್ಲಿ ಬಿಜೆಪಿ ಯಾಕೆ ಮೌನವಾಗಿದೆ’ ಎಂದು ಅಲ್ಲಿನ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ ನಾಯಕ ವಿ. ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು