ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಿಂಗತ್ವ ಅಲ್ಪಸಂಖ್ಯಾತ ದಂಪತಿಗೆ ಮಾರ್ಚ್‌ನಲ್ಲಿ ಮಗು ನಿರೀಕ್ಷೆ

ಕೇರಳ: ದೇಶದಲ್ಲಿ ಮೊದಲು ಎನ್ನಲಾದ ಪ್ರಕರಣ
Last Updated 4 ಫೆಬ್ರುವರಿ 2023, 12:23 IST
ಅಕ್ಷರ ಗಾತ್ರ

ಕೋಯಿಕ್ಕೋಡ್ (ಕೇರಳ): ಕೇರಳದ ಲಿಂಗತ್ವ ಅಲ್ಪಸಂಖ್ಯಾತ ದಂಪತಿ ಜಿಯಾ ಪಾವಲ್ ಮತ್ತು ಜಹಾದ್ ಮಾರ್ಚ್‌ನಲ್ಲಿ ತಮ್ಮ ಮೊದಲ ಮಗುವಿನ ಜನನದ ನಿರೀಕ್ಷೆ ಹೊಂದಿದ್ದು, ದೇಶದಲ್ಲಿಯೇ ಇದು ಪ್ರಥಮ ಪ್ರಕರಣ ಎನ್ನಲಾಗಿದೆ.

ನೃತ್ಯಗಾರ್ತಿ ಜಿಯಾ ಪಾವಲ್ ಅವರು, ‘ತಮ್ಮ ಸಂಗಾತಿ ಜಹಾದ್ ಈಗ ಎಂಟು ತಿಂಗಳ ಗರ್ಭಿಣಿ’ ಎಂದು ಇನ್‌ಸ್ಟಾಗ್ರಾಂನಲ್ಲಿ ಘೋಷಿಸಿದ್ದಾರೆ.

‘ನಾನು ತಾಯಿಯಾಗುವ ಮತ್ತು ತಂದೆಯಾಗುವ ಅವನ ಕನಸನ್ನು ನನಸಾಗಿಸಲು ನಾವು ಹೊರಟಿದ್ದೇವೆ. ಎಂಟು ತಿಂಗಳ ಭ್ರೂಣವು ಈಗ ಜಹಾದ್ ಹೊಟ್ಟೆಯಲ್ಲಿ ಬೆಳೆಯುತ್ತಿದೆ. ನಮಗೆ ತಿಳಿದುಬಂದ ಮಾಹಿತಿ ಪ್ರಕಾರ, ಭಾರತದಲ್ಲಿ ಲಿಂಗಪರಿವರ್ತಿತ ಪುರುಷ (ಟ್ರಾನ್ಸ್‌ಮ್ಯಾನ್‌) ಗರ್ಭಧಾರಣೆ ಮಾಡಿರುವುದು ಇದೇ ಮೊದಲು’ ಎಂದು ಪಾವಲ್ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಮೂರು ವರ್ಷಗಳಿಂದ ಸಂಗಾತಿಯಾಗಿರುವ ಪಾವಲ್ ಮತ್ತು ಜಹಾದ್ ಇಬ್ಬರೂ ತಮ್ಮ ಲಿಂಗವನ್ನು ಬದಲಾಯಿಸಿಕೊಳ್ಳಲು ಹಾರ್ಮೋನ್ ಚಿಕಿತ್ಸೆಗೆ ಒಳಗಾಗಿದ್ದರು. ಆದರೆ, ಮಗುವನ್ನು ಹೊಂದಬೇಕೆನ್ನುವ ಉದ್ದೇಶದಿಂದ ಚಿಕಿತ್ಸೆಯನ್ನು ನಿಲ್ಲಿಸಿದ್ದಾರೆ. ಹೆಣ್ಣಾಗಿದ್ದ ಜಹಾದ್ ಪುರುಷನಾಗುವ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಮಗು ಹೊಂದಬೇಕೆನ್ನುವ ಉದ್ದೇಶದಿಂದ ಅವರೀಗ ಹಾರ್ಮೋನ್ ಚಿಕಿತ್ಸೆ ನಿಲ್ಲಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಪಾವಲ್, ‘ಲಿಂಗತ್ವ ಅಲ್ಪಸಂಖ್ಯಾತ ಸಮುದಾಯವು ಸಮಾಜದ ಭಯದಲ್ಲಿ ಬದುಕುತ್ತಿದೆ. ನಮ್ಮ ಸಮುದಾಯದ ಅನೇಕರು ತಂದೆ–ತಾಯಿಗಳಾಗಲು ಬಯಸುತ್ತಿದ್ದಾರೆ. ಅನೇಕ ಲಿಂಗ ಪರಿವರ್ತಿತ ಪುರುಷರು ಗರ್ಭಧರಿಸುವ ಸಾಧ್ಯತೆ ಇದೆ. ಆದರೆ, ಅವರು ಮುಂದೆ ಬರುತ್ತಿಲ್ಲ’ ಎಂದರು.

‘ನಾನು ಗರ್ಭಿಣಿಯಾಗುವ ಬಗ್ಗೆ ಎಂದಿಗೂ ಯೋಚಿಸಿರಲಿಲ್ಲ. ಒಂದು ವೇಳೆ ಹಾಗೆ ಮೊದಲೇ ಯೋಚಿಸಿದ್ದರೆ ಶಸ್ತ್ರಚಿಕಿತ್ಸೆಯ ಮೂಲಕ ನನ್ನ ಸ್ತನಗಳನ್ನು ತೆಗೆಸಿಕೊಳ್ಳುತ್ತಿರಲಿಲ್ಲ’ಎಂದು ಜಹಾದ್ ತಿಳಿಸಿದರು.

‘ಈ ಹಿಂದೆ ಮಗುವೊಂದನ್ನು ದತ್ತು ಪಡೆಯಲು ಯೋಚಿಸಿದ್ದೆವು. ಆದರೆ, ಅದಕ್ಕಿದ್ದ ಕಾನೂನಿನ ಪ್ರಕ್ರಿಯೆಯು ಕಷ್ಟಕರವೆನಿಸಿತ್ತು. ಅಲ್ಲದೇ ಸಾಕಿದ ಮಗುವು ನಮ್ಮನ್ನು ಬಿಟ್ಟು ಹೋದರೆ ಎಂಬ ಆತಂಕವೂ ಎದುರಾಯಿತು. ಹಾಗಾಗಿ, ದತ್ತು ಪಡೆಯುವ ಯೋಚನೆ ಕೈಬಿಟ್ಟೆವು. ಸಮಾಜದ ನಮ್ಮ ಬಗ್ಗೆ ಏನು ಯೋಚಿಸುತ್ತದೆ ಎಂಬುದರ ಬಗ್ಗೆ ಜಹಾದ್ ಚಿಂತಿತನಾಗಿದ್ದಾನೆ. ಈಗಲೂ ಅವನು ಮಗುವಿಗೆ ತಂದೆಯಾಗಲು ಬಯಸುತ್ತಿದ್ದಾನೆ. ನಮ್ಮ ಬಗ್ಗೆ ಪೋಸ್ಟ್ ಹಾಕಿದ ಬಳಿಕ ಸಾರ್ವಜನಿಕರಿಂದ ಇಬ್ಬರಿಗೂ ಅಪಾರವಾದ ಬೆಂಬಲ ವ್ಯಕ್ತವಾಗುತ್ತಿದೆ’ ಎಂದು ಜಿಯಾ ಹೇಳಿದ್ದಾರೆ.

‘ಇದರ ನಡುವೆ ನಮಗೆ ಕೆಲವು ಕೆಟ್ಟ ಕಾಮೆಂಟ್‌ಗಳೂ ಬಂದಿವೆ. ಆದರೆ, ನಾವು ಸಕಾರಾತ್ಮಕ ಕಾಮೆಂಟ್‌ಗಳ ಕಡೆಗೆ ಗಮನ ಹರಿಸಿದ್ದೇವೆ’ ಎಂದಿದ್ದಾರೆ.

ಕೋಯಿಕ್ಕೋಡ್‌ ವೈದ್ಯಕೀಯ ಕಾಲೇಜಿನ ವೈದ್ಯರು ಈ ದಂಪತಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯಲ್ಲಿರುವ ತನಕ ಮಗುವಿಗೆ ಎದೆಹಾಲಿನ ಸೌಲಭ್ಯ ಕಲ್ಪಿಸುವ ಕುರಿತು ಆಸ್ಪತ್ರೆಯ ವೈದ್ಯಾಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT