ಸೋಮವಾರ, ಜುಲೈ 26, 2021
22 °C

ಐಎಎಸ್‌ ಅಧಿಕಾರಿಯ ಸೋಗಿನಲ್ಲಿ ಉಚಿತ ಕೋವಿಡ್‌ ಲಸಿಕೆ ನೀಡುತ್ತಿದ್ದವನ ಬಂಧನ!

PTI Updated:

ಅಕ್ಷರ ಗಾತ್ರ : | |

DH Photo

ಕೋಲ್ಕತಾ: ನಟಿ, ತೃಣಮೂಲ ಕಾಂಗ್ರೆಸ್‌ ಸಂಸದೆ ಮಿಮಿ ಚಕ್ರವರ್ತಿ ಕೋವಿಡ್‌ ಲಸಿಕೆ ಪಡೆದ ಕೇಂದ್ರವನ್ನು ನಿರ್ವಹಿಸುತ್ತಿದ್ದ ನಕಲಿ ಐಎಎಸ್‌ ಅಧಿಕಾರಿಯನ್ನು ಬಂಧಿಸಲಾಗಿದೆ. ಕೋಲ್ಕತಾದ ಕಸಬಾ ಪ್ರದೇಶದಲ್ಲಿ ಐಎಎಸ್‌ ಅಧಿಕಾರಿಯ ಸೋಗಿನಲ್ಲಿ ಲಸಿಕಾ ಕೇಂದ್ರ ತೆರೆದಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೋಲ್ಕತದ ಮಹಾನಗರ ಪಾಲಿಕೆಯ ಸಹ ಆಯುಕ್ತ ಎಂದು ಪರಿಚಯಿಸಿಕೊಂಡಿದ್ದ ದೇವಂಜನ್‌ ದೇವ್‌ ಎಂಬ ವ್ಯಕ್ತಿ ಉಚಿತವಾಗಿ ಕೋವಿಡ್‌ ಲಸಿಕೆಯನ್ನು ನೀಡುವ ಕೇಂದ್ರವನ್ನು ತೆರೆದಿದ್ದ ಎಂದು ಕೋಲ್ಕತಾದ ಹಿರಿಯ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ.

ಅನುಮತಿ ರಹಿತವಾಗಿ ನಡೆಸುತ್ತಿದ್ದ ಲಸಿಕಾ ಕೇಂದ್ರದಲ್ಲಿ ಸಾಕಷ್ಟು ಮಂದಿ ಲಸಿಕೆ ಪಡೆದಿದ್ದಾರೆ. ಆತನ ಕೇಂದ್ರದಲ್ಲಿ ನೀಡಲಾಗುತ್ತಿದ್ದ ಲಸಿಕೆಯ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ. ಲಸಿಕೆ ನಕಲಿಯಾಗಿದ್ದಲ್ಲಿ, ಲಸಿಕೆ ಪಡೆದ ಎಲ್ಲರಿಗೂ ಬರಲು ಹೇಳಿ ನಿಜವಾದ ಲಸಿಕೆಯನ್ನು ನೀಡುತ್ತೇವೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.

'ಲಸಿಕೆ ಪಡೆದುಕೊಂಡ ಬಳಿಕ ಸರ್ಕಾರದಿಂದ ಬರುವ ಅಧಿಕೃತ ಸಂದೇಶ ಬಂದಿರಲಿಲ್ಲ. ಹಾಗಾಗಿ ಲಸಿಕೆ ಬಗ್ಗೆ ಅನುಮಾನ ಮೂಡಿತು. ಇದೇ ಕೇಂದ್ರದಲ್ಲಿ ತೃತೀಯ ಲಿಂಗಿಗಳಿಗೆ ಲಸಿಕೆ ಹಾಕಿಸಿಕೊಳ್ಳಲು ಆಹ್ವಾನ ನೀಡಿದ್ದೆ. ಆದರೆ ನನಗೆ ಅಧಿಕೃತ ಸಂದೇಶ ಬಾರದೆ ಇದ್ದುದರಿಂದ ತಕ್ಷಣ ಅವರೆಲ್ಲರಿಗೂ ಲಸಿಕಾ ಕೇಂದ್ರಕ್ಕೆ ಹೋಗದಂತೆ ತಿಳಿಸಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದೆ' ಮಿಮಿ ಚಕ್ರವರ್ತಿ ಹೇಳಿದ್ದಾರೆ.

ನಕಲಿ ಲಸಿಕಾ ಕೇಂದ್ರ ತೆರೆದಿರುವ ಪ್ರಕರಣದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಪಾಲ್ಗೊಂಡಿದ್ದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಕೆಎಂಸಿ ಬೋರ್ಡ್‌ ಮುಖ್ಯಸ್ಥ ಫಿರ್ಹಾದ್‌ ಹಕಿಮ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು