ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಂಗು ನಾಡು: ಡಿಎಂಕೆ, ಕೇಂದ್ರದ ತಿಕ್ಕಾಟ ತಮಿಳುನಾಡು ವಿಭಜನೆಗೆ ದಾರಿಯಾಗಬಹುದೇ?

ಅಕ್ಷರ ಗಾತ್ರ

ಚೆನ್ನೈ: ಸದ್ಯ ತಮಿಳುನಾಡಿನಲ್ಲಿಪ್ರತ್ಯೇಕ ‘ಕೊಂಗು ನಾಡು‘ ರಾಜ್ಯ ರಚನೆ ಚರ್ಚೆ ಮುನ್ನೆಲೆಗೆ ಬಂದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ‘ಕೊಂಗು ನಾಡು‘ ಟ್ರೆಂಡ್‌ ಆಗಿದೆ. ಈ ಬಗ್ಗೆ ಕಾವೇರಿದ ಚರ್ಚೆ, ಸಂವಾದಗಳು ನಡೆಯುತ್ತಿವೆ.

ತಮಿಳುನಾಡಿನಲ್ಲಿ ಎರಡು ತಿಂಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದ ಡಿಎಂಕೆ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ನಡುವಿನ ತಿಕ್ಕಾಟವೇ ಪ್ರತ್ಯೇಕ ರಾಜ್ಯ ಚರ್ಚೆ ಕೂಗಿಗೆ ಕಾರಣ. 50ರ ದಶಕದಲ್ಲಿ ಭಾಷಾವಾರು ಪ್ರಾಂತ್ಯಗಳು ರಚನೆಯಾದಗಿನಿಂದಲೂ ಸಣ್ಣದಾಗಿ ಪ್ರತ್ಯೇಕ ರಾಜ್ಯ ರಚನೆ ಕೂಗು ಕೇಳಿ ಬರುತ್ತಿತ್ತು. ಇದರ ಸಾಕಾರಕ್ಕೆ ಹಲವು ಸಂಘಟನೆಗಳು, ರಾಜಕೀಯ ಪಕ್ಷಗಳು ಉದಯವಾಗಿದ್ದರೂ ಅವುಗಳ ಹೋರಾಟದ ಪಾತ್ರ ನಗಣ್ಯವಾಗಿತ್ತು. ಪ್ರಮುಖ ಪ್ರಾದೇಶಿಕ ಪಕ್ಷಗಳಾದ ಎಐಎಡಿಎಂಕೆ ಮತ್ತು ಡಿಎಂಕೆ ಮುಂದೆ ಅವರ ಹೋರಾಟ ಮಂಕಾಗಿತ್ತು. ಆದರೆ ಕಾಲ ಬದಲಾಗಿ, ಇಲ್ಲಿ ಬಿಜೆಪಿ ಬಲವರ್ಧನೆಯಾಗುತ್ತಿದ್ದಂತೆ ‘ಕೊಂಗು ನಾಡು‘ ಕೂಗಿಗೆ ಹೊಸ ಆಯಾಮ ದೊರೆತಿದೆ.ಪ್ರಸ್ತುತ ಕೇಂದ್ರ ಸರ್ಕಾರದ ನಡೆಯಿಂದಾಗಿ ಈ ಕೂಗು ತೀವ್ರ ಕಾವು ಪಡೆದುಕೊಂಡಿದೆ.

ಸ್ಟಾಲಿನ್‌
ಸ್ಟಾಲಿನ್‌

ಕೇಂದ್ರದ ಜಿಎಸ್‌ಟಿ ಹಾಗೂ ನೀಟ್‌ ಪರಿಶೀಲನೆಗೆ ತಮಿಳುನಾಡು ಸರ್ಕಾರ ಸದನ ಸಮಿತಿ ರಚನೆ ಮಾಡಿರುವುದು ಹಾಗೂ ಕೇಂದ್ರವನ್ನು ನಾವು ‘ಒಕ್ಕೂಟ ಸರ್ಕಾರ‘ ಎಂದೇ ಕರೆಯುತ್ತೇವೆ ಎಂಬ ಡಿಎಂಕೆ ವರಿಷ್ಠ ಹಾಗೂ ಮುಖ್ಯಮಂತ್ರಿ ಸ್ಟಾಲಿನ್‌ ಅವರ ಪುನರುಚ್ಚಾರ ಮೋದಿ ಸರ್ಕಾರಕ್ಕೆ ಅಸಮಾಧಾನ ತಂದಿದೆ. ಒಕ್ಕೂಟ ಸರ್ಕಾರ ಎಂಬ ವಾದ ಸಾರ್ವತ್ರಿಕವಾದರೆ ರಾಜ್ಯಗಳಿಂದ ಪ್ರತ್ಯೇಕತೆ ಕೂಗು ಕೇಳಿಬರುಬಹುದು ಎಂಬ ಭಯ ಕೇಂದ್ರ ಸರ್ಕಾರಕ್ಕೆ ಇದೆ.

ತಮಿಳುನಾಡು ಸರ್ಕಾರಕ್ಕೆ ಟಕ್ಕರ್‌ ಕೊಡಲು ಕಾಯುತ್ತಿದ್ದ ಬಿಜೆಪಿಗೆ ಸಂಪುಟ ಪುನಾರಚನೆ ಹೊಸ ಆಸ್ತ್ರವಾಗಿ ಪರಿಣಮಿಸಿತು. ತಮಿಳುನಾಡು ಘಟಕದ ಬಿಜೆಪಿ ಅಧ್ಯಕ್ಷ ಡಾ. ಎಲ್‌. ಮುರುಗನ್‌ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ಮುರುಗನ್‌ ಬಯೋಡೇಟಾದಲ್ಲಿ ಅವರ ಊರಿನ ಬದಲಾಗಿ ‘ಕೊಂಗು ನಾಡು‘ ಎಂದು ಹೆಸರಿಸುವ ಮೂಲಕ ಪ್ರತ್ಯೇಕತೆ ಕೂಗಿನ ಚರ್ಚೆಗೆ ಹೊಸ ಆಯಾಮ ನೀಡಿದೆ.

ಏನಿದು ಕೊಂಗು ನಾಡು ಪ್ರತ್ಯೇಕ ರಾಜ್ಯ ಚರ್ಚೆ?

ಕೊಂಗು ಪ್ರಾಂತ್ಯ (ವಿಕಿಪೀಡಿಯಾ)
ಕೊಂಗು ಪ್ರಾಂತ್ಯ (ವಿಕಿಪೀಡಿಯಾ)

ತಮಿಳುನಾಡಿನ ಪಶ್ಚಿಮ ಭಾಗದ 10 ಜಿಲ್ಲೆಗಳನ್ನು ಒಳಗೊಂಡ ಪ್ರಾಂತ್ಯವನ್ನು ‘ಕೊಂಗು ನಾಡು‘ ಎಂದು ಕರೆಯಲಾಗುತ್ತದೆ. ಕಳೆದ ಐದಾರು ದಶಕಗಳಿಂದಲೂ ಪ್ರತ್ಯೇಕ ‘ಕೊಂಗು ನಾಡು‘ ರಾಜ್ಯ ರಚನೆ ಚರ್ಚೆ ನಡೆಯುತ್ತಿದ್ದರೂ ಅದು ಮುಖ್ಯವಾಹಿನಿಗೆ ಬಂದಿರಲಿಲ್ಲ.

ಇತ್ತೀಚೆಗೆ ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ಮುರುಗನ್‌ ಅವರು ಮೂಲತಃ ನಾಮಕ್ಕಲ್‌ ಜಿಲ್ಲೆಯವರು. ಆದರೆ ಕೇಂದ್ರ ಸರ್ಕಾರ ಅವರ ಬಯೋಡೇಟಾದಲ್ಲಿ ನಾಮಕ್ಕಲ್‌ ಜಿಲ್ಲೆಯನ್ನು ಹೆಸರಿಸದೇ ‘ಕೊಂಗು ನಾಡು‘ ಎಂದು ನಮೂದಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿತ ವಿಷಯವಾಗಿದೆ.

ಕೊಂಗು ನಾಡು ಪ್ರದೇಶ ತಮಿಳಿನ ಶ್ರೀಮಂತ ಸಂಸ್ಕೃತಿಗೆ ಪ್ರಸಿದ್ಧಿಯಾಗಿದೆ. ಇದರ ಇತಿಹಾಸ ಸಂಗಂ ಸಾಹಿತ್ಯದಲ್ಲಿ ಉಲ್ಲೇಖವಾಗಿದೆ. ಪಾಂಡ್ಯರು, ಚೇರರು ಮತ್ತು ಚೋಳರು ಈ ಭಾಗವನ್ನು ಆಳ್ವಿಕೆ ಮಾಡಿದ್ದಾರೆ. ಕೃಷಿಗೆ ಯೋಗ್ಯವಾದ ಭೂಮಿ, ನದಿ–ತೊರೆಗಳು ಹಾಗೂ ಹೇರಳವಾದ ನೈಸರ್ಗಿಕ ಸಂಪತ್ತನ್ನು ಈ ಪ್ರಾಂತ್ಯ ಒಳಗೊಂಡಿದೆ. ಪ್ರಸ್ತುತ ಈ ಪ್ರದೇಶ ಕೈಗಾರಿಕೀರಣಗೊಂಡಿದ್ದು ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಿಗೆ ಹೆಸರುವಾಸಿಯಾಗಿದೆ.ತಮಿಳುನಾಡು ಸರ್ಕಾರಕ್ಕೆ ಸಿಂಹಪಾಲು ಆದಾಯ ಈ ಪ್ರಾಂತ್ಯದಿಂದಲೇ ಬರುತ್ತಿದೆ.

ಬಿಜೆಪಿ ಲೆಕ್ಕಚಾರ ಏನು?

ತಮಿಳುನಾಡಿನಲ್ಲಿ ಕಳೆದ 10 ವರ್ಷಗಳಲ್ಲಿ ಬಿಜೆಪಿಗೆ ನೆಲೆ ಸಿಕ್ಕಿರುವುದು ಈ ಪ್ರಾಂತ್ಯದಲ್ಲಿ ಮಾತ್ರ ಎಂಬುದು ವಿಶೇಷ. ಈ ಭಾಗದಲ್ಲಿ ಬಿಜೆಪಿ ಮತ ಬ್ಯಾಂಕ್‌ ವಿಸ್ತರಣೆಯಲ್ಲಿ ತೊಡಗಿದೆ. ಪ್ರತ್ಯೇಕತೆ ಕೂಗಿನ ಪರವಾಗಿರುವ ಸ್ಥಳೀಯ ರಾಜಕೀಯ ಮುಖಂಡರು ಹಾಗೂ ಸಾಂಸ್ಥಿಕ ನಾಯಕರು ವಿವಿಧ ಪಕ್ಷಗಳು, ನಾನಾ ಸಂಘಟನೆಗಳಲ್ಲಿ ಹಂಚಿ ಹೋಗಿದ್ದಾರೆ. ಅಂತಹವರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನ ಮಂದುವರೆದಿದೆ. ಸದ್ಯ ಇಬ್ಬರು ಬಿಜೆಪಿ ಶಾಸಕರು ಈ ಭಾಗದಿಂದ ಆಯ್ಕೆಯಾಗಿದ್ದಾರೆ. ಕೇಂದ್ರ ಸಚಿವ ಮುರುಗನ್‌ ಹಾಗೂ ಬಿಜೆಪಿ ತಮಿಳುನಾಡು ಘಟಕದ ಅಧ್ಯಕ್ಷ ಅಣ್ಣಾಮಲೈ ಕೂಡ ಇದೇ ಪ್ರಾಂತ್ಯಕ್ಕೆ ಸೇರಿದವರು.

ಮುರುಗನ್‌
ಮುರುಗನ್‌

ಕೊಯಮತ್ತೂರು,ತಿರುಪ್ಪೂರು, ಈರೋಡ್, ನಾಮಕ್ಕಲ್, ಸೇಲಂ, ಧರ್ಮಪುರಿ, ನೀಲಗಿರಿ, ಕರೂರ್ ಮತ್ತು ಕೃಷ್ಣಗಿರಿ ಜಿಲ್ಲೆಗಳು ಈ ಭಾಗದಲ್ಲಿ ಬರುತ್ತವೆ. ಸದ್ಯ 10 ಲೋಕಸಭಾ ಸ್ಥಾನಗಳು, 61 ವಿಧಾನಸಭಾ ಕ್ಷೇತ್ರಗಳು ಕೊಂಗು ನಾಡು ವ್ಯಾಪ್ತಿಯಲ್ಲಿದ್ದು ಈ ಪ್ರಾಂತ್ಯವನ್ನು ತಮಿಳುನಾಡಿನಿಂದ ಬೇರ್ಪಡಿಸಬೇಕು ಎಂಬುದು ಬಿಜೆಪಿಯ ಪ್ರಮುಖ ಅಜೆಂಡಾ ಎಂದು ಪ್ರತ್ಯೇಕತೆಯ ವಿರುದ್ಧ ಇರುವವರು ಆರೋಪ ಮಾಡುತ್ತಿದ್ದಾರೆ.

ಕೊಂಗು ನಾಡು ಪ್ರಾಂತ್ಯವನ್ನು ಪ್ರತ್ಯೇಕ ರಾಜ್ಯ ಅಥವಾ ಪುದುಚೇರಿ ಮಾದರಿಯಲ್ಲಿ ಕೇಂದ್ರಾಡಳಿತ ಪ್ರದೇಶವನ್ನಾಗಿ ರೂಪಿಸುವುದು ಬಿಜೆಪಿಯ ಲೆಕ್ಕಾಚಾರ ಎಂಬುದು ತಮಿಳುನಾಡಿನಲ್ಲಿ ಈಗ ಚರ್ಚಿತ ವಿಷಯವಾಗಿದೆ. ಕೊಂಗು ಪ್ರಾಂತ್ಯದ ಅಕ್ಕಪಕ್ಕದ ಪ್ರದೇಶಗಳನ್ನು ಸೇರಿಸಿಕೊಂಡು ಸುಮಾರು 15 ಲೋಕಸಭಾ ಕ್ಷೇತ್ರಗಳು ಹಾಗೂ 90 ವಿಧಾನಸಭಾ ಸ್ಥಾನಗಳನ್ನು ಒಳಗೊಂಡ ಪ್ರತ್ಯೇಕ ರಾಜ್ಯ ರಚನೆ ಮಾಡುವ ಯೋಜನೆಯನ್ನು ಬಿಜೆಪಿ ಸಿದ್ಧಪಡಿಸಿದೆ ಎನ್ನಲಾಗಿದೆ.

ಪ್ರತ್ಯೇಕತೆ ಚರ್ಚೆಗೆ ಸ್ಥಳೀಯ ರಾಜಕೀಯ ಮುಖಂಡರು, ಸಾಹಿತಿಗಳು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಒಲವು ತೋರಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಕಳೆದೊಂದು ವಾರದಿಂದ ವರದಿ ಮಾಡುತ್ತಿವೆ. ಒಟ್ಟಿನಲ್ಲಿ ಡಿಎಂಕೆ ಹಾಗೂ ಕೇಂದ್ರದ ನಡುವಿನ ತಿಕ್ಕಾಟ ತಮಿಳುನಾಡು ವಿಭಜನೆಗೆ ದಾರಿಯಾಗಬಹುದೇ? ಎಂಬುದನ್ನು ಕಾಲವೇ ನಿರ್ಧರಿಸಬೇಕಿದೆ.

ಕೊಂಗು ನಾಡು ಟ್ರೆಂಡ್‌: ಪ್ರಮುಖ ಟ್ವೀಟ್‌ ಮತ್ತು ಪೋಸ್ಟ್‌ಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT