ಬುಧವಾರ, ಡಿಸೆಂಬರ್ 2, 2020
23 °C

ಗಡಿ ಬಿಕ್ಕಟ್ಟು: ಎಂಟನೇ ಸುತ್ತಿನ ಮಾತುಕತೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪೂರ್ವ ಲಡಾಖ್‌ ಗಡಿಯಲ್ಲಿ ಘರ್ಷಣೆ ಸಂಭವಿಸಿದ ಎಲ್ಲ ಪ್ರದೇಶಗಳಿಂದ ಚೀನಾ ಮತ್ತು ಭಾರತದ ಸೈನಿಕರು ಹಿಂದೆಸರಿಯುವುದಕ್ಕೆ ಮಾರ್ಗಸೂಚಿಯನ್ನು ರಚಿಸುವ ಉದ್ದೇಶದೊಂದಿಗೆ, ಭಾರತ–ಚೀನಾ ಸೇನೆಯ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಎಂಟನೇ ಸುತ್ತಿನ ಮಾತುಕತೆ ಶುಕ್ರವಾರ ನಡೆಯಿತು ಎಂದು ಮೂಲಗಳು ತಿಳಿಸಿವೆ.

ಪೂರ್ವ ಲಡಾಖ್‌ನ ವಾಸ್ತವ ನಿಯಂತ್ರಣ ರೇಖೆಯ(ಎಲ್‌ಎಸಿ) ಚುಶೂಲ್‌ ಪ್ರದೇಶದಲ್ಲಿ ಬೆಳಗ್ಗೆ 9.30ರಿಂದ ಉನ್ನತ ಮಟ್ಟದ ಮಾತುಕತೆ ನಡೆಯಿತು. ಲೇಹ್‌ನಲ್ಲಿ ನಿಯೋಜನೆಗೊಂಡಿರುವ 14 ಕಾರ್ಪ್ಸ್‌ನ ನೂತನ ಕಮಾಂಡರ್‌ ಲೆ.ಜನರಲ್‌ ಪಿಜಿಕೆ ಮೆನನ್‌ ನೇತೃತ್ವದ ಭಾರತದ ನಿಯೋಗವು ಸಭೆಯಲ್ಲಿ ಭಾಗವಹಿಸಿತು.

ಅ.12ರಂದು ಎರಡೂ ದೇಶದ ಸೇನಾ ಅಧಿಕಾರಿಗಳ ಏಳನೇ ಸುತ್ತಿನ ಮಾತುಕತೆ ನಡೆದಿತ್ತು. ಈ ಸಭೆಯಲ್ಲಿ ಪ್ಯಾಂಗಾಂಗ್‌ ಸರೋವರದ ಸುತ್ತಮುತ್ತಲಿರುವ ಪ್ರಮುಖ ಪರ್ವತ ಪ್ರದೇಶಗಳಿಂದ ಭಾರತದ ಸೈನಿಕರು ಹಿಂದಕ್ಕೆ ಸರಿಯಬೇಕು ಎಂದು ಚೀನಾವು ಆಗ್ರಹಿಸಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಭಾರತ, ಘರ್ಷಣೆ ಸಂಭವಿಸಬಹುದಾದ ಪ್ರದೇಶಗಳಿಂದ ಎರಡೂ ದೇಶಗಳ ಸೈನಿಕರು ಏಕಕಾಲದಲ್ಲಿ ಹಿಂದೆಸರಿಯಬೇಕು ಎಂದು ಪ್ರತಿಪಾದಿಸಿತ್ತು. ಮಾತುಕತೆ ಮುಖಾಂತರವೇ ಒಮ್ಮತವಾದ ಪರಿಹಾರ ಕಂಡುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿತ್ತು.

ಗಡಿ ಬಿಕ್ಕಟ್ಟಿನ ಬಳಿಕ ಭಾರತವು ಪೂರ್ವ ಲಡಾಖ್‌ ಪ್ರದೇಶದಲ್ಲಿ 50 ಸಾವಿರಕ್ಕೂ ಅಧಿಕ ಸೈನಿಕರನ್ನು ನಿಯೋಜಿಸಿದ್ದು, ಚೀನಾವೂ ತನ್ನ ಗಡಿಯಲ್ಲಿ ಇಷ್ಟೇ ಸಂಖ್ಯೆಯ ಸೈನಿಕರನ್ನು ನಿಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು