ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಪ್ರದೇಶದಲ್ಲಿ ರೈತರ ಮೇಲೆ ಹರಿದ ವಾಹನ: 8 ಬಲಿ

ಪ್ರತಿಭಟನೆನಿರತರ ಮೇಲೆ ಹರಿದ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವರ ಬೆಂಗಾವಲು ವಾಹನ
Last Updated 3 ಅಕ್ಟೋಬರ್ 2021, 20:24 IST
ಅಕ್ಷರ ಗಾತ್ರ

ಲಖನೌ:ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರ ಭೇಟಿಯ ವಿರುದ್ಧ ರೈತರು ನಡೆಸುತ್ತಿದ್ದ ಪ್ರತಿಭಟನೆ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಬೆಂಗಾವಲು ಪಡೆಯ ಎರಡು ಎಸ್‌ಯುವಿಗಳು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಹರಿಯಿತು. ಇದರಿಂದ ನಾಲ್ವರು ರೈತರು ಬಲಿಯಾದರು. ಆಕ್ರೋಶಗೊಂಡ ರೈತರು ಎರಡೂ ಎಸ್‌ಯುವಿಗಳನ್ನು ತಡೆದು ನಿಲ್ಲಿಸಿ, ಅವುಗಳಿಗೆ ಬೆಂಕಿ ಹಚ್ಚಿದರು. ಈ ಎಸ್‌ಯುವಿಗಳಲ್ಲಿ ಇದ್ದವರಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಎಂದು ಲಖಿಂಪುರ್‌–ಖೇರಿ ಜಿಲ್ಲಾಧಿಕಾರಿ ಅರವಿಂದ ಕುಮಾರ್‌ ಚೌರಾಸಿಯಾ ತಿಳಿಸಿದ್ದಾರೆ.

ಮೌರ್ಯ ಅವರು ಬಂಬಿರ್‌ಪುರ ಗ್ರಾಮಕ್ಕೆ ಭೇಟಿ ಕೊಡುವ ಕಾರ್ಯಕ್ರಮ ಇತ್ತು. ಇದು ಸಚಿವ ಅಜಯ್‌ ಮಿಶ್ರಾ ಅವರ ಊರು. ಮೌರ್ಯ ಅವರ ಭೇಟಿಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು.

ಅಜಯ್‌ ಮಿಶ್ರಾ ಅವರ ಮಗನೇ ಒಂದು ಎಸ್‌ಯುವಿ ಚಾಲನೆ ಮಾಡಿದ್ದರು ಎಂದು ರೈತರು ಆರೋಪಿಸಿದ್ದಾರೆ. ಆದರೆ ಅಜಯ್‌ ಮಿಶ್ರಾ ಅವರು ಈ ಆರೋಪವನ್ನು ಅಲ್ಲಗಳೆದಿದ್ದಾರೆ.

ಬಿಜೆಪಿಯ ಮೂವರು ಕಾರ್ಯಕರ್ತರು ಮತ್ತು ಎಸ್‌ಯುವಿಯ ಚಾಲಕನನ್ನು ಪ್ರತಿಭಟನೆ ನಡೆಯುತ್ತಿದ್ದ ಸ್ಥಳದಲ್ಲಿದ್ದ ಜನರು ಹೊಡೆದು ಕೊಂದಿದ್ದಾರೆ ಎಂದು ಮಿಶ್ರಾ ಅವರು ಹೇಳಿದ್ದಾರೆ.

ಮೌರ್ಯ ಅವರ ಕಾರ್ಯಕ್ರಮ ನಿಗದಿಯಾಗಿದ್ದ ಸ್ಥಳಕ್ಕೆ ಬಿಜೆಪಿಯ ಕೆಲವು ಕಾರ್ಯಕರ್ತರು ಕಾರುಗಳಲ್ಲಿ ಹೋಗುತ್ತಿದ್ದರು. ಆಗ, ರೈತರು ಕಪ್ಪು ಬಾವುಟ ತೋರಿಸಿದರು. ವಾಹನ ಸಾಲಿನ ಒಂದು ವಾಹನವು ಮಗುಚಿತು. ಅದು ಕೆಳಗೆ ಸಿಲುಕಿದ ಇಬ್ಬರು ರೈತರು ಮೃತಪಟ್ಟರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಚಿವ ಮಿಶ್ರಾ ಅವರ ಮಗ ಚಲಾಯಿಸಿದ ಕಾರಿನ ಅಡಿಗೆ ಸಿಲುಕಿ ಮೂವರು ರೈತರು ಮೃತಪಟ್ಟಿದ್ದಾರೆ ಎಂದು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಗಳಲ್ಲಿ ಕಳೆದ ಹತ್ತು ತಿಂಗಳಿನಿಂದ ನಡೆಯುತ್ತಿರುವ ಪ್ರತಿಭಟನೆಯ ನೇತೃತ್ವ ವಹಿಸಿರುವ ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) ಟ್ವೀಟ್‌ ಮಾಡಿದೆ.ಗಾಜಿಪುರ ಗಡಿಯಲ್ಲಿ ಪ್ರತಿಭಟನೆ ನಡೆಯುತ್ತಿರುವ ಸ್ಥಳದಲ್ಲಿದ್ದ ಬಿಕೆಯು ನಾಯಕ ರಾಕೇಶ್‌ ಟಿಕಾಯತ್‌ ಅವರು ಲಖಿಂಪುರ್‌–ಖೇರಿಗೆ ಧಾವಿಸಿದ್ದಾರೆ. ಲಖಿಂಪುರ್‌–ಖೇರಿಯ ಹಲವು ಭಾಗಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ.

ಪ್ರತಿಭಟನೆಯ ಬಿಸಿ:ಲಖಿಂಪುರ–ಖೇರಿ ಜಿಲ್ಲೆಯ ತಿಕೋನಿಯಾ ಎಂಬಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಅಜಯ್‌ ಮಿಶ್ರಾ ಮತ್ತು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರು ಭಾಗಹಿಸಬೇಕಿತ್ತು. ಆದರೆ, ಕಾರ್ಯಕ್ರಮದಲ್ಲಿ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಸಿದ್ದರು.

ಮೌರ್ಯ ಅವರು ಹೆಲಿಕಾಪ್ಟರ್‌ ಮೂಲಕ ಬಂದು ತಾತ್ಕಾಲಿಕ ಹೆಲಿಪ್ಯಾಡ್‌ನಲ್ಲಿ ಇಳಿಯಬೇಕಿತ್ತು. ಆದರೆ, ಹೆಲಿ‍ಪ್ಯಾಡ್‌ಗೆ ನುಗ್ಗಿದ್ದ ನೂರಾರು ರೈತರು ಅಲ್ಲಿ ಡೇರೆಗಳನ್ನು ಹಾಕಿ ಕುಳಿತಿದ್ದರು. ಹಾಗಾಗಿ, ಮೌರ್ಯ ಅವರ ಕಾರ್ಯಕ್ರಮವನ್ನು ರದ್ದುಪಡಿಸಲಾಯಿತು.

ರೈತರಿಗೆ ಬೆದರಿಕೆ:ತಾವು ಭಾಗವಹಿಸಿದ ಕಾರ್ಯಕ್ರಮಗಳಲ್ಲಿ ಕಪ್ಪು ಬಾವುಟ ಪ್ರದರ್ಶಿಸಿದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಚಿವ ಅಜಯ್‌ ಮಿಶ್ರಾ ಅವರು ರೈತರಿಗೆ ಇತ್ತೀಚೆಗೆ ಎಚ್ಚರಿಕೆ ಕೊಟ್ಟಿದ್ದರು. ಇದರಿಂದಾಗಿ ಮಿಶ್ರಾ ಅವರ ಮೇಲೆ ರೈತರಿಗೆ ಭಾರಿ ಆಕ್ರೋಶ ಉಂಟಾಗಿತ್ತು. ಲಖಿಂಪುರ್‌–ಖೇರಿಯು ಮಿಶ್ರಾ ಅವರ ತವರು ಜಿಲ್ಲೆ.

ರೈತರ ರಕ್ತಕ್ಕೆ ಕಾತರಿಸುವ ಕೇಂದ್ರ: ಕಾಂಗ್ರೆಸ್‌

ರೈತರ ಮೇಲೆ ಸಚಿವರ ಬೆಂಗಾವಲು ಪಡೆಯ ವಾಹನ ಹರಿದಿರುವುದನ್ನು ಕಾಂಗ್ರೆಸ್‌ ಖಂಡಿಸಿದೆ. ಈ ಅಪಘಾತದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದೆ. ‘ಈ ರೀತಿಯ ಅಮಾನವೀಯ ಮಾರಣ ಹೋಮವನ್ನು ಕಂಡ ಬಳಿಕವೂ ಮೌನವಾಗಿ ಇರುವವರು ಈಗಾಗಲೇ ಸತ್ತಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಆದರೆ, ಈ ತ್ಯಾಗವು ವ್ಯರ್ಥವಾಗಲು ಬಿಡುವುದಿಲ್ಲ– ರೈತರ ಸತ್ಯಾಗ್ರಹವು ಚಿರಾಯುವಾಗಲಿ’ ಎಂದು ಕಾಂಗ್ರೆಸ್ ಸಂಸದ ರಾಹುಲ್‌ ಗಾಂಧಿ ಟ್ವೀಟ್‌ ಮಾಡಿದ್ದಾರೆ. ಪತ್ರಿಕಾ ವರದಿಯ ಚಿತ್ರಗಳು ಮತ್ತು ವಾಹನಗಳು ಉರಿಯುತ್ತಿರುವ ಚಿತ್ರಗಳನ್ನು ಟ್ವೀಟ್‌ಗೆ ರಾಹುಲ್‌ ಲಗತ್ತಿಸಿದ್ದಾರೆ.

‘ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರ ರಕ್ತಕ್ಕಾಗಿ ಕಾತರಿಸುತ್ತಿದೆ. ಕರ್ನಾಲ್‌ನಿಂದ ಲಖಿಂಪುರ್‌–ಖೇರಿವರೆಗೆ ಭೀತಿಯ ವಾತಾವರಣ ಸೃಷ್ಟಿಸಲಾಗಿದೆ’ ಎಂದು ಕಾಂಗ್ರೆಸ್‌ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT