ಶನಿವಾರ, ಅಕ್ಟೋಬರ್ 23, 2021
20 °C

ಲಖಿಂಪುರ–ಖೇರಿ ಹಿಂಸಾಚಾರ: ಚಾಲಕನ ಕುಟುಂಬಕ್ಕೂ ₹45 ಲಕ್ಷ ಪರಿಹಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖಿಂಪುರ–ಖೇರಿ: ರೈತರ ಮೇಲೆ ಎಸ್‌ಯುವಿ ಹರಿದ ನಂತರ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ನಾಲ್ವರಿಗೆ ಕೂಡ ₹45 ಲಕ್ಷ ಪರಿಹಾರ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಕುಮಾರ್‌ ಸಿಂಗ್‌ ಅವರ ಚಾಲಕ, ಬಿಜೆಪಿಯ ಇಬ್ಬರು ಕಾರ್ಯಕರ್ತರು ಮತ್ತು ಒಬ್ಬ ಪತ್ರಕರ್ತ ಹಿಂಸಾಚಾರದಲ್ಲಿ ಮೃತಪಟ್ಟಿದ್ದರು. 

ಚಾಲಕ ಹರಿಓಂ ಮಿಶ್ರಾ, ಬಿಜೆಪಿ ಕಾರ್ಯಕರ್ತರಿಬ್ಬರ ಕುಟುಂಬದ ಸದಸ್ಯರಿಗೆ ತಲಾ ₹45 ಲಕ್ಷದ ಚೆಕ್‌ ಅನ್ನು ಲಖಿಂಪುರ (ಸದರ್‌) ಶಾಸಕ ಯೋಗೇಶ್‌ ವರ್ಮಾ ಗುರುವಾರವೇ ವಿತರಿಸಿದ್ದಾರೆ. ಮೃತ ರೈತರ ಕುಟುಂಬಗಳಿಗೆ ಮಾತ್ರ ಆರಂಭದಲ್ಲಿ ಪರಿಹಾರ ಘೋಷಿಸಲಾಗಿತ್ತು. ಬಳಿಕ ಅದನ್ನು ಮೃತಪಟ್ಟ ಇತರ ನಾಲ್ವರ ಕುಟುಂಬಗಳಿಗೂ ವಿಸ್ತರಿಸಲಾಯಿತು. 

ಪ್ರಧಾನಿ ಮನೆಗೆ ಮುತ್ತಿಗೆ: ಆಜಾದ್‌

ಲಖಿಂಪುರ–ಖೇರಿ ಹಿಂಸಾ ಪ್ರಕರಣದ ಆರೋಪಿಗಳನ್ನು ಏಳು ದಿನಗಳೊಳಗೆ ಬಂಧಿಸದೇ ಇದ್ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮನೆಗೆ ಮುತ್ತಿಗೆ ಹಾಕಲಾಗುವುದು ಎಂದು ಆಜಾದ್‌ ಸಮಾಜ ಪಾರ್ಟಿಯ ಮುಖ್ಯಸ್ಥ, ದಲಿತ ನಾಯಕ ಚಂದ್ರಶೇಖರ ಆಜಾದ್‌ ಶುಕ್ರವಾರ ಘೋಷಿಸಿದ್ದಾರೆ. 

‘ಎಲ್ಲ ವಿಚಾರಗಳ ಬಗ್ಗೆಯೂ ಪ್ರಧಾನಿ ಟ್ವೀಟ್‌ ಮಾಡುತ್ತಾರೆ. ಆದರೆ, ರೈತರ ಹತ್ಯೆಯ ಬಗ್ಗೆ ಅವರು ಇನ್ನೂ ಮೌನ ಮುರಿದಿಲ್ಲ. ಆರೋಪಿಗಳು ಮುಕ್ತವಾಗಿ ಓಡಾಡುತ್ತಿದ್ದಾರೆ’ ಆಜಾದ್‌ ಹೇಳಿದ್ದಾರೆ. 

18ರಂದು ರೈಲು ತಡೆ

ಲಖಿಂಪುರ–ಖೇರಿ ಹಿಂಸಾಚಾರವನ್ನು ಖಂಡಿಸಿ ಇದೇ 18ರಂದು ರೈಲು ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ರೈತ ಸಂಘಟನೆಗಳು ಶುಕ್ರವಾರ ಘೋಷಿಸಿವೆ. ಉತ್ತರ ಪ್ರದೇಶ ಸರ್ಕಾರ ಘೋಷಿಸಿರುವ ನ್ಯಾಯಾಂಗ ತನಿಖೆಯನ್ನು ತಿರಸ್ಕರಿಸಿವೆ. ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧದ ಪ್ರತಿಭಟನೆಯ ನೇತೃತ್ವ ವಹಿಸಿರುವ ರಾಷ್ಟ್ರೀಯ ಕಿಸಾನ್‌ ಯೂನಿಯನ್‌ ಈ ನಿರ್ಧಾರಕ್ಕೆ ಬಂದಿದೆ.

ಕಾಂಗ್ರೆಸ್‌ಗೆ ಪ್ರಶಾಂತ್‌ ಕಿಶೋರ್‌ ಟೀಕೆ

ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್‌ ಕಿಶೋರ್‌ ಅವರು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ‘ಲಖಿಂಪುರ–ಖೇರಿ ಪ್ರಕರಣದಿಂದಾಗಿ ಭಾರತದ ಪುರಾತನ ಪಕ್ಷದ ನೇತೃತ್ವದ ವಿರೋಧ ಪಕ್ಷಗಳು ತ್ವರಿತವಾಗಿ ಮತ್ತು ಅಪ್ರಯತ್ನದಿಂದ ಪುನಶ್ಚೇತನಗೊಳ್ಳಲಿವೆ ಎಂದು ಭಾವಿಸಿದವರಿಗೆ ದೊಡ್ಡ ನಿರಾಶೆ ಆಗಲಿದೆ. ಪುರಾತನ ಪಕ್ಷದ ಆಳದಲ್ಲಿ ಇರುವ ಸಮಸ್ಯೆಗಳು ಮತ್ತು ರಚನೆಯಲ್ಲಿಯೇ ಇರುವ ದೌರ್ಬಲ್ಯಗಳಿಗೆ ತ್ವರಿತ ಪರಿಹಾರವೇನೂ ಇಲ್ಲ’ ಎಂದು ಕಿಶೋರ್‌ ಟ್ವೀಟ್‌ ಮಾಡಿದ್ದಾರೆ. 

ಪ್ರಶಾಂತ್‌ ಕಿಶೋರ್‌ ಅವರು ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ವದಂತಿ ಇತ್ತೀಚೆಗೆ ಹರಿದಾಡಿತ್ತು. 

ಕಿಶೋರ್ ಅವರ ಹೇಳಿಕೆಯನ್ನು ನಿರ್ಲಕ್ಷಿಸಲು ಕಾಂಗ್ರೆಸ್‌ ಯತ್ನಿಸಿದೆ. ‘ಸಮಾಲೋಚಕ’ರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಲಾಗದು ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು