ಬುಧವಾರ, ಏಪ್ರಿಲ್ 14, 2021
31 °C

ಇಸ್ರೊ ವಾಣಿಜ್ಯ ಘಟಕದ ಮೊದಲ ಕಾರ್ಯಾಚರಣೆ; 19 ಉಪಗ್ರಹಗಳು ಕಕ್ಷೆಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಪಿಎಸ್‌ಎಲ್‌ವಿ-ಸಿ51 ನೌಕೆಯು ಬ್ರೆಜಿಲ್‌ನ ಅಮೇಜಾನಿಯಾ-1 ಸೇರಿ 19 ಖಾಸಗಿ ಉಪಗ್ರಹಗಳನ್ನು ಭಾನುವಾರ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಇಸ್ರೊ ವಾಣಿಜ್ಯ ಘಟಕ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನ (ಎನ್‌ಎಸ್‌ಐಎಲ್‌) ಮೊದಲ ಕಾರ್ಯಾಚರಣೆ ಇದಾಗಿದೆ.

ಬ್ರೆಜಿಲ್‌ನ ಭೂಪರಿವೀಕ್ಷಣಾ ಉಪಗ್ರಹ ಅಮೇಜಾನಿಯಾ-1 ಉಪಗ್ರಹವು ಪಿಎಸ್‌ಎಲ್‌ವಿ-ಸಿ51ನಲ್ಲಿದ್ದ ಪ್ರಮುಖ ಉಪಗ್ರಹವಾಗಿತ್ತು. ಉಳಿದ 18 ಚಿಕ್ಕ ಉಪಗ್ರಹಗಳಾಗಿದ್ದವು. ಈ 18 ಉಪಗ್ರಹಗಳಲ್ಲಿ ಐದು ಉಪಗ್ರಹಗಳನ್ನು ವಿದ್ಯಾರ್ಥಿಗಳೇ ಸಂಪೂರ್ಣವಾಗಿ ಅಭಿವೃದ್ಧಿಪಡಿಸಿದ್ದಾರೆ ಎಂಬುದು ವಿಶೇಷ.

18 ಉಪಗ್ರಹಗಳಲ್ಲಿ ಇಸ್ರೊನ ಇನ್‌ಸ್ಪೇಸ್‌ಇ ಕಾರ್ಯಕ್ರಮದ 4 ಉಪಗ್ರಹಗಳು ಇದ್ದವು. ಉಳಿದ 14 ಉಪಗ್ರಹಗಳನ್ನು ಎನ್‌ಎಸ್‌ಐಎಲ್‌ ಉಡ್ಡಯನ ಮಾಡಿತು. ಇನ್‌ಸ್ಪೇಸ್‌ಇ ಉಡ್ಡಯನ ಮಾಡಿದ 4 ಉಪಗ್ರಹಗಳನ್ನು ದೇಶದ ವಿವಿಧ ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಅಭಿವೃದ್ಧಿಪಡಿಸಿದ್ದವು. ಇವುಗಳಲ್ಲಿ ಒಂದು ಉಪಗ್ರಹವನ್ನು ಸ್ಪೇಸ್‌ ಕಿಡ್ಸ್‌ ಇಂಡಿಯಾ ಎಂಬ ಸಂಸ್ಥೆಯು ಅಭಿವೃದ್ಧಿಪಡಿಸಿದೆ. ಈ ಉಪಗ್ರಹವು ಭಗವದ್ಗೀತೆಯ ಇ-ಕಾಪಿಯನ್ನು ಹೊಂದಿತ್ತು. ಮೆಮೊರಿ ಕಾರ್ಡ್‌ನಲ್ಲಿ ಈ ಇ-ಕಾಪಿಯನ್ನು ಇರಿಸಿ, ಕಕ್ಷೆಗೆ ಕಳುಹಿಸಲಾಗಿದೆ. ಇದೇ ಉಪಗ್ರಹವು ಪ್ರಧಾನಿ ನರೇಂದ್ರ ಮೋದಿ ಅವರ ಚಿತ್ರವನ್ನು ಬಾಹ್ಯಾಕಾಶಕ್ಕೆ ಒಯ್ದಿದೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತ ಕಾರ್ಯಕ್ರಮವನ್ನು ಆರಂಭಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸಲು ಅವರ ಚಿತ್ರವನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ’ ಎಂದು ಸ್ಪೇಸ್‌ ಕಿಡ್ಸ್ ಇಂಡಿಯಾ ಹೇಳಿದೆ.

342 ವಿದೇಶಿ ಉಪಗ್ರಹಗಳು ಕಕ್ಷೆಗೆ: ಇಸ್ರೊ ಇದುವರೆಗೆ ವಿದೇಶಗಳ 342 ಉಪಗ್ರಹಗಳನ್ನು ಬಾಹ್ಯಾಕಾಶದ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ. ಇವುಗಳಲ್ಲಿ ಖಾಸಗಿ ಕಂಪನಿಗಳ ಉಪಗ್ರಹಗಳು ಮತ್ತು ಸರ್ಕಾರಿ ಪ್ರಾಯೋಜಿತ ಉಪಗ್ರಹಗಳು ಸೇರಿವೆ. ಇಸ್ರೊ ಇದುವರೆಗೆ 34 ದೇಶಗಳ ಉಪಗ್ರಹ
ಗಳನ್ನು ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದೆ.

53ನೇ ಪಿಎಸ್‌ಎಲ್‌ವಿ: ಪಿಎಸ್‌ಎಲ್‌ವಿ(ಧ್ರುವೀಯ ಉಪಗ್ರಹ ಉಡ್ಡಯನ ವಾಹನ) ನೌಕೆಯ 53ನೇ ಕಾರ್ಯಾಚರಣೆ ಇದಾಗಿದೆ. ಪಿಎಸ್ಎಲ್‌ವಿ-ಸಿ51 ಸ್ಟ್ರಾಪ್‌ಆನ್ ಮೋಟರ್‌ ಇದ್ದ ಮೂರನೇ ಕಾರ್ಯಾಚರಣೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು