ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ವಿವಾದಾತ್ಮಕ ಕಾನೂನು ರದ್ದು

Last Updated 24 ನವೆಂಬರ್ 2020, 12:16 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳ ಪೊಲೀಸ್ ಕಾಯ್ದೆಗೆ ತರಲಾಗಿದ್ದ ವಿವಾದಾತ್ಮಕ ತಿದ್ದುಪಡಿಯನ್ನು ರದ್ದುಗೊಳಿಸಲು ಸುಗ್ರೀವಾಜ್ಞೆ ತರಲು ಕೇರಳದ ಸಿಪಿಐ-ಎಂ ನೇತೃತ್ವದ ಎಲ್‌ಡಿಎಫ್ ಸರ್ಕಾರ ಮಂಗಳವಾರ ನಿರ್ಧರಿಸಿದೆ.

ಸೆಕ್ಷನ್ 118-ಎ ರದ್ದುಪಡಿಸುವ ಸುಗ್ರೀವಾಜ್ಞೆಯನ್ನು ಹೊರಡಿಸುವಂತೆ ಮಂಗಳವಾರ ನಡೆದ ವಿಶೇಷ ಸಂಪುಟ ಸಭೆಯು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಶಿಫಾರಸು ಮಾಡಿದೆ.

'ತಿದ್ದುಪಡಿಯನ್ನು ರದ್ದು ಮಾಡಲು ಸುಗ್ರೀವಾಜ್ಞೆ ತರಲು ಕ್ಯಾಬಿನೆಟ್ ನಿರ್ಧರಿಸಿದೆ,' ಎಂದು ಸರ್ಕಾರದ ಮೂಲಗಳು ಸುದ್ದಿ ಸಂಸ್ಥೆ ಪಿಟಿಐಗೆ ತಿಳಿಸಿವೆ.

ಕಾಯ್ದೆಯಲ್ಲಿ 118–ಎ ಎಂಬ ಹೊಸ ಸೆಕ್ಷನ್‌ ಸೇರ್ಪಡೆಗೊಳಿಸಿದ್ದ ಸರ್ಕಾರವು ಸಾಮಾಜಿಕ ಮಾಧ್ಯಮ ಸೇರಿದಂತೆ ಯಾವುದೇ ಮಾಧ್ಯಮದ ಮುಖಾಂತರ ವ್ಯಕ್ತಿಯೊಬ್ಬರ ಮಾನಹಾನಿ ಮಾಡಿದರೆ ಅಥವಾ ಬೆದರಿಸಿದರೆ ಮೂರು ವರ್ಷ ಗಳ ಜೈಲು ಶಿಕ್ಷೆ ಅಥವಾ ₹10 ಸಾವಿರ ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಕೊಡುವ ತಿದ್ದುಪಡಿ ತಂದಿತ್ತು. ಈ ತಿದ್ದುಪಡಿ ಸುಗ್ರೀವಾಜ್ಞೆಗೆ ಕೇರಳದ ರಾಜ್ಯಪಾಲರು ಶನಿವಾರ ಸಹಿ ಮಾಡಿದ್ದರು.

‘ಎಲ್‌ಡಿಎಫ್‌ಗೆ ಬೆಂಬಲ ನೀಡಿರುವವರು ಹಾಗೂ ಪ್ರಜಾಪ್ರಭುತ್ವವನ್ನು ರಕ್ಷಿಸಲು ಬದ್ಧತೆ ಹೊಂದಿರುವವರು ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿರುವುದರಿಂದ ಸರ್ಕಾರವು ಕೇರಳ ಪೊಲೀಸ್‌ ಕಾಯ್ದೆಯಲ್ಲಿನ ತಿದ್ದುಪಡಿಯನ್ನು ಅನುಷ್ಠಾನಕ್ಕೆ ತರದಿರಲು ನಿರ್ಧರಿಸಿದೆ. ವಿಧಾನಸಭೆ ಹಾಗೂ ಸಮಾಜದ ಎಲ್ಲ ವಲಯದ ಸಲಹೆಗಳನ್ನು ಸಂಗ್ರಹಿಸಿ ವಿಸ್ತೃತವಾಗಿ ಚರ್ಚಿಸಿದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಪ್ರಕಟಣೆಯಲ್ಲಿ ತಿಳಿಸಿದ್ದರು.

ಸಾಮಾಜಿಕ ಜಾಲತಾಣಗಳ ದುರ್ಬಳಕೆ ತಡೆಯಲು ಈ ತಿದ್ದುಪಡಿಯನ್ನು ತರಲಾಗಿದೆ ಎಂದು ಸರ್ಕಾರ ಸ್ಪಷ್ಟನೆ ನೀಡಿದ್ದರೂ, ಸುಗ್ರೀವಾಜ್ಞೆಯಲ್ಲಿ ‘ಯಾವುದೇ ಮಾದರಿಯ ಸಂವಹನ’ ಎನ್ನುವ ಪ್ರಸ್ತಾಪವಿದ್ದ ಕಾರಣ, ಮಾಧ್ಯಮ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸರ್ಕಾರ ಈ ತಿದ್ದುಪಡಿ ತಂದಿದೆ ಎನ್ನುವ ವಿರೋಧ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT