ಶುಕ್ರವಾರ, ಸೆಪ್ಟೆಂಬರ್ 30, 2022
26 °C

ಪಡಿತರ ಚೀಟಿಗೆ ಆಧಾರ್ ಲಿಂಕ್: ಅಸ್ಸಾಂನಲ್ಲಿ ಫಲಾನುಭವಿಗಳ ಸಂಖ್ಯೆ 50 ಲಕ್ಷ ಅಂತರ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಕ್ರಜಾರ್ (ಅಸ್ಸಾಂ): ‘ರಾಜ್ಯದಲ್ಲಿ ಪಡಿತರ ಚೀಟಿಗಳೊಂದಿಗೆ ಆಧಾರ್ ಕಾರ್ಡ್‌ಗಳನ್ನು ಜೋಡಣೆ ಮಾಡಿದ ಬಳಿಕ ಫಲಾನುಭವಿಗಳ ಸಂಖ್ಯೆಯಲ್ಲಿ ಸುಮಾರು 50 ಲಕ್ಷದಷ್ಟು ಅಂತರ ಕಂಡುಬಂದಿದೆ’ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಂಗಳವಾರ ತಿಳಿಸಿದ್ದಾರೆ. 

ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ  ಅವರು, ಪಡಿತರ ಚೀಟಿಗೆ ನಿಜವಾಗಿಯೂ ಅರ್ಹರಾದ ಫಲಾನುಭವಿಗಳನ್ನು ಪಟ್ಟಿಗೆ ಸೇರಿಸಲು ಸರ್ಕಾರವು ಆಧಾರ್ ಜೋಡಣೆಯನ್ನು ಕೈಗೊಂಡಿದೆ. ಜೋಡಣೆ ಬಳಿಕ‌ ಸುಮಾರು 50 ಲಕ್ಷದಷ್ಟು ಫಲಾನುಭವಿಗಳು ಈ ಸೇವೆಯ ವ್ಯಾಪ್ತಿಯೊಳಗೆ ಬಂದಿಲ್ಲ. ಈ ಫಲಾನುಭವಿಗಳಲ್ಲಿ ಕೆಲವರು ಸಾವಿಗೀಡಾಗಿರಬಹುದು, ಮತ್ತೆ ಕೆಲವರು ಮದುವೆಯಾಗಿ ಬೇರೆಡೆ ಸ್ಥಳಾಂತರಗೊಂಡಿರಬಹುದು. ದುರದೃಷ್ಟವಶಾತ್ ಕೆಲವು ನಕಲಿ ಫಲಾನುಭವಿಗಳೂ ಇದ್ದಾರೆ’ ಎಂದು ಅವರು ವಿವರಿಸಿದ್ದಾರೆ. 

‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ಹೊಸದಾಗಿ 50 ಲಕ್ಷ ಜನರನ್ನು ಸೇರ್ಪಡೆಗೊಳಿಸಲಿದ್ದೇವೆ. ಈ ಬಗ್ಗೆ ಸಚಿವ ಸಂಪುಟದಲ್ಲಿ ಎಲ್ಲಾ ಅಂಶಗಳನ್ನು ಚರ್ಚಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ರಾಜ್ಯ ಸರ್ಕಾರದ ‘ಅರುಣೋದಯ್’ ಯೋಜನೆಯಲ್ಲಿ ಸುಮಾರು 62 ಸಾವಿರ ಮಂದಿ ಅನರ್ಹರು ಇದ್ದಾರೆ ಎಂಬುದು ತಿಳಿದು ಬಂದಿದೆ. ಅಂತೆಯೇ ಸುಮಾರು 2 ಸಾವಿರ ಮಂದಿ ಸ್ವಇಚ್ಛೆಯಿಂದ ಈ ಯೋಜನೆಯಿಂದ ಹೊರಗುಳಿದಿದ್ದಾರೆ. ಪ್ರಸ್ತುತ 20 ಸಾವಿರ ಲಕ್ಷ ಕುಟುಂಬಗಳನ್ನು ಒಳಗೊಂಡಿರುವ ಈ ಯೋಜನೆಯಡಿ ಫಲಾನುಭವಿಗಳಿಗೆ ರಾಜ್ಯ ಸರ್ಕಾರವು ಪ್ರತಿ ತಿಂಗಳೂ ₹1,250 ಮೊತ್ತವನ್ನು ಸಹಾಯದ ರೂಪದಲ್ಲಿ ನೀಡುತ್ತಿದೆ’ ಎಂದು ಅವರು ತಿಳಿಸಿದ್ದಾರೆ. 

ಉಗ್ರರ ಗುಂಪುಗಳೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ?
‘ಕೇಂದ್ರ ಸರ್ಕಾರವು ಸೆಪ್ಟೆಂಬರ್ ಅಂತ್ಯದೊಳಗೆ ಅಸ್ಸಾಂನ ಆದಿವಾಸಿ ಉಗ್ರ ಸಂಘಟನೆಗಳೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ’ ಎಂದು ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಈ ಕುರಿತು ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳದ ಅವರು, ‘ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ಈ ಪ್ರಕ್ರಿಯೆಯನ್ನು ನಡೆಸಲಾಗುವುದು’ ಎಂದಷ್ಟೇ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು