ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರ್ವಜನಿಕ ಸ್ಥಳ ಈಗಲೂ ಮಹಿಳೆಯರಿಗೆ ಸುರಕ್ಷಿತವಲ್ಲ: ಲೋಕಲ್ ಸರ್ಕಲ್ಸ್ ಸಮೀಕ್ಷೆ

ಮಹಿಳಾ ದಿನಾಚರಣೆ
Last Updated 7 ಮಾರ್ಚ್ 2021, 19:45 IST
ಅಕ್ಷರ ಗಾತ್ರ

ನವದೆಹಲಿ: ಸಾರ್ವಜನಿಕ ಸ್ಥಳಗಳು ಮಹಿಳೆಯರಿಗೆ ಈಗಲೂ ಸುರಕ್ಷಿತವಲ್ಲ ಎಂದು ಲೋಕಲ್ ಸರ್ಕಲ್ಸ್ ನಡೆಸಿದ ಸಮೀಕ್ಷೆಯಲ್ಲಿ ಕಂಡುಬಂದಿದೆ. ಮಹಿಳಾ ದಿನಾಚರಣೆ ಅಂಗವಾಗಿ ನಡೆಸಿದ ಸಮೀಕ್ಷೆಯಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಶೇ 29ರಷ್ಟು ಮಹಿಳೆಯರು ಕನಿಷ್ಟ ಒಮ್ಮೆಯಾದರೂ ಹಿಂಸೆ ಅಥವಾ ಲೈಂಗಿಕ ಕಿರುಕುಳವನ್ನು ಎದುರಿಸಿದ್ದಾರೆ ಎಂಬ ಅಂಶ ತಿಳಿದು ಬಂದಿದೆ. ಶೇ 9ರಷ್ಟು ಮಹಿಳೆಯರು ಈ ಸ್ಥಳಗಳಲ್ಲಿ ಹಲವು ಬಾರಿ ಇಂತಹ ಘಟನೆಗಳಿಗೆ ಮುಖಾಮುಖಿಯಾಗಿದ್ದಾರೆ. ಇಂತಹ ನಾಲ್ಕರಲ್ಲಿ ಒಂದು ಪ್ರಕರಣದಲ್ಲಿ ಮಾತ್ರ ತಪ್ಪಿತಸ್ಥರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಸಮೀಕ್ಷೆಯಲ್ಲಿ ಭಾಗಿಯಾಗಿದ್ದ 8,347 ಮಂದಿಯ ಪೈಕಿ ಶೇ 20ರಷ್ಟು ಮಹಿಳೆಯರು ‘ನಾನು ಮತ್ತು ನನ್ನ ಕುಟುಂಬ ಸದಸ್ಯರಲ್ಲಿ ಒಬ್ಬರು ಒಮ್ಮೆ ಅಥವಾ ಎರಡು ಬಾರಿ ಇದನ್ನು ಅನುಭವಿಸಿದ್ದೇವೆ’ ಎಂದು ಹೇಳಿದ್ದಾರೆ. ಆದರೆ ಶೇ 9ರಷ್ಟು ಮಂದಿ ‘ಹಲವು ಬಾರಿ’ ಇಂಥ ಘಟನೆ ಎದುರಿಸಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ಎದುರಿಸುತ್ತಿರುವ ಮಹಿಳೆಯರ ನೈಜ ಸಂಖ್ಯೆ ಹೆಚ್ಚೇ ಇದೆ. ಏಕೆಂದರೆ, ಅನೇಕ ಮಹಿಳೆಯರು ಇಂತಹ ಘಟನೆಗಳನ್ನು ಕುಟುಂಬದವರ ಜೊತೆ ಹೇಳಿಕೊಳ್ಳದಿರಬಹುದು ಎಂದು ಸಮೀಕ್ಷೆ ಅಭಿಪ್ರಾಯಪಟ್ಟಿದೆ. ಹಿಂಸೆ ಎದುರಿಸುವವರ ಸಂಖ್ಯೆ ಹೆಚ್ಚಿದ್ದರೂ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗುವ ಪ್ರಮಾಣ ಕಡಿಮೆ ಎಂದು ವರದಿ ತಿಳಿಸಿದೆ.

ಹಿಂದೇಟಿಗೆ ಹಲವು ಕಾರಣ
ಇಂಡಿಯನ್ ನ್ಯಾಷನಲ್ ಬಾರ್ ಅಸೋಸಿಯೇಷನ್ ಬಹಿರಂಗಪಡಿಸಿದ 2018ರ ಸಮೀಕ್ಷೆಯ ಪ್ರಕಾರ, ಲೈಂಗಿಕ ಕಿರುಕುಳಕ್ಕೆ ಒಳಗಾದವರಲ್ಲಿ ಶೇ 68ರಷ್ಟು ಜನರು ಇಂತಹ ಘಟನೆಗಳನ್ನು ಹೇಳಿಕೊಳ್ಳುವುದೇ ಇಲ್ಲ. ಬಹುತೇಕರು ಇಂತಹ ಘಟನೆಗಳನ್ನು ಸಹಿಸಿಕೊಳ್ಳುತ್ತಾರೆ. ಲೈಂಗಿಕ ಕಿರುಕುಳಕ್ಕೆ ಒಳಗಾಗುವುದನ್ನು ಕ್ಷುಲ್ಲಕ ಸಮಸ್ಯೆ ಎಂದುಕೊಳ್ಳುತ್ತಾರೆ. ದೂರು ನೀಡಿದರೆ ಪೊಲೀಸ್ ಠಾಣೆ ಅಥವಾ ಕೋರ್ಟ್‌ಗೆ ಅಲೆದಾಡಬೇಕು, ಸಾಮಾಜಿಕವಾಗಿ ಅಪಮಾನ ಎದರಿಸಬೇಕು, ದುಷ್ಕರ್ಮಿಗಳು ಸೇಡು ತೀರಿಸಿಕೊಳ್ಳುತ್ತಾರೆ ಎಂಬಿತ್ಯಾದಿ ಕಾರಣಗಳಿಂದ ಬಹುತೇಕರು ಇಂತಹ ಘಟನೆಗಳನ್ನು ಅಲ್ಲಿಗೇ ಕೈಬಿಡುತ್ತಾರೆ ಎಂದು ವರದಿ ಅಭಿಪ್ರಾಯಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT