ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಮತ್ತೆ ಲಾಕ್‌ಡೌನ್: ಕೋವಿಡ್‌ ಸರಪಣಿ ತುಂಡರಿಸಲು ಕ್ರಮ

Last Updated 19 ಏಪ್ರಿಲ್ 2021, 15:45 IST
ಅಕ್ಷರ ಗಾತ್ರ

ನವದೆಹಲಿ: ದಿನೇದಿನೇ ಹರಡುತ್ತಿರುವ ಕೋವಿಡ್‌ ಸೋಂಕನ್ನು ಹಿಮ್ಮೆಟ್ಟಿಸಲು ದೆಹಲಿಯಲ್ಲಿ ಸೋಮವಾರ ರಾತ್ರಿಯಿಂದ ಒಂದು ವಾರದ ಅವಧಿಯ ಲಾಕ್‌ಡೌನ್‌ ಘೋಷಿಸಲಾಗಿದೆ.

ಭಾನುವಾರ ಕೋವಿಡ್‌ ಸೋಂಕಿತರ ಸಂಖ್ಯೆ 25,000ದ ಗಡಿ ದಾಟಿದೆ. ನಗರದ ಆರೋಗ್ಯ ವ್ಯವಸ್ಥೆಯನ್ನು ಸರಿ ದಾರಿಗೆ ತರುವ ನಿಟ್ಟಿನಲ್ಲಿ ಸೋಮವಾರ ರಾತ್ರಿ 10ರಿಂದ ಏಪ್ರಿಲ್ 26ರ ಬೆಳಿಗ್ಗೆ 5ರವರೆಗೆ ಲಾಕ್ ಡೌನ್ ಇರಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತಿಳಿಸಿದ್ದಾರೆ.

ನಗರದಲ್ಲಿನ ಆಸ್ಪತ್ರೆಗಳಲ್ಲಿ ಹಾಸಿಗೆ, ತುರ್ತು ಚಿಕಿತ್ಸಾ ಘಟಕ, ಆಮ್ಲಜನಕ ಮತ್ತು ಅಗತ್ಯ ಔಷಧಿಗಳ ತೀವ್ರ ಕೊರತೆ ಇರುವುದರಿಂದ ಆರೋಗ್ಯ ವ್ಯವಸ್ಥೆ ಕುಸಿಯುತ್ತಿದೆ. ಈ ಕರಾಳ ಸ್ಥಿತಿಯ ನಿರ್ವಹಣೆಗಾಗಿಯೇ ಲಾಕ್‌ಡೌನ್‌ ಅನ್ನು ಅಲ್ಪಾವಧಿಗೆ ಘೋಷಿಸಲಾಗಿದೆ. ವಲಸೆ ಕಾರ್ಮಿಕರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗಿ ದೆಹಲಿ ಬಿಟ್ಟು ಹೊರಹೋಗಬಾರದು ಎಂದು ಅವರು ಮನವಿ ಮಾಡಿದ್ದಾರೆ.

ಲಾಕ್‌ಡೌನ್ ವೇಳೆ ಪೂರ್ವ ನಿರ್ಧರಿತ ಮದುವೆ ಸಮಾರಂಭಗಳು ನಿರಾತಂಕವಾಗಿ ನಡೆಯಲು ಈ ವೇಳೆ ಅನುಮತಿ ನೀಡಲಾಗುವುದು. ಗರಿಷ್ಠ 50 ಜನರು ಲಗ್ನ ಪತ್ರಿಕೆ ತೋರಿಸಿ ಮದುವೆಗಳಲ್ಲಿ ಭಾಗವಹಿಸಬಹುದು. ಶವ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಗರಿಷ್ಠ 20 ಜನರಿಗೆ ಅವಕಾಶ ಕಲ್ಪಿಸಲಾಗುತ್ತದೆ. ಅಗತ್ಯ ಸೇವೆಗಳು, ಅಗತ್ಯ ವಸ್ತುಗಳು ಲಭ್ಯವಿರಲಿವೆ ಎಂದು ಅವರು ಭರವಸೆ ನೀಡಿದ್ದಾರೆ.

ಖಾಸಗಿ ಸಂಸ್ಥೆಗಳ ಕಚೇರಿಗಳು, ಅಂಗಡಿ, ಮಾಲ್‌, ಜಿಮ್‌, ವಾರದ ಸಂತೆ, ಕೈಗಾರಿಕೆ, ಶೈಕ್ಷಣಿಕ ಸಂಸ್ಥೆ, ಚಿತ್ರಮಂದಿರ, ರೆಸ್ಟೋರಂಟ್‌, ಬಾರ್‌, ಸಭಾಂಗಣ, ಸಾರ್ವಜನಿಕ ಉದ್ಯಾನ, ಕ್ರೀಡಾ ಸಂಕೀರ್ಣ, ಸ್ಪಾ, ಕ್ಷೌರದ ಅಂಗಡಿ ಮತ್ತು ಬ್ಯೂಟಿ ಪಾರ್ಲರ್‌ಗಳ ಬಾಗಿಲು ಮುಚ್ಚಲಿವೆ. ಕಿರಾಣಿ, ಔಷಧ, ಹಾಲು, ಹಣ್ಣು, ತರಕಾರಿ ಅಂಗಡಿಗಳು ಕಾರ್ಯ ನಿರ್ವಹಿಸಲಿವೆ. ಗರ್ಭಿಣಿಯರು, ಕೊರೊನಾ ಪರೀಕ್ಷೆಗೆ ಆಸ್ಪತ್ರೆಗಳಿಗೆ ತೆರಳುವವರು, ವಿಮಾನ, ರೈಲು ಮತ್ತು ಬಸ್‌ ನಿಲ್ದಾಣಗಳಿಗೆ ತೆರಳುವವರಿಗೆ ಅನುಮತಿ ನೀಡಲಾಗುತ್ತದೆ ಎಂದು ಅವರು ಘೋಷಿಸಿದ್ದಾರೆ.

ಮದ್ಯ ಪ್ರಿಯರ ಧಾವಂತ:ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ದೆಹಲಿಯಲ್ಲಿ ಒಂದು ವಾರದ ಅವಧಿಯ ಲಾಕ್‌ಡೌನ್‌ ಆಗಲಿದೆ ಎಂದು ಘೋಷಿಸುತ್ತಿದ್ದಂತೆಯೇ ಸೋಮವಾರ ಮಧ್ಯಾಹ್ನದ ವೇಳೆಗೆ ಮದ್ಯದ ಅಂಗಡಿಗಳತ್ತ ಧಾವಿಸಿದ ಸಾವಿರಾರು ಜನ ಸರದಿ ಸಾಲಿನಲ್ಲಿ ನಿಂತು ಮದ್ಯ ಖರೀದಿಸಿದರು.

ನಗರದ ವಿವಿಧೆಡೆ ಇರುವ ಮದ್ಯದ ಅಂಗಡಿಗಳೆದುರು ಇದ್ದಕ್ಕಿದ್ದಂತೆಯೇ ಅರ್ಧ ಕಿಲೋಮೀಟರ್‌ವರೆಗೆ ಸರದಿ ಸಾಲು ಕಂಡುಬಂತಲ್ಲದೆ, ನೂಕು ನುಗ್ಗಲು ಉಂಟಾಯಿತು. ಕೆಲವರು ಹತ್ತಾರು ಬಾಟಲ್‌ಗಳನ್ನು ಕೊಂಡೊಯ್ದ ದೃಶ್ಯ ಕಂಡುಬಂತು.

ಅದೇರೀತಿ, ಪ್ರಮುಖ ಮಾರುಕಟ್ಟೆಗಳಲ್ಲಿನ ದಿನಸಿ ಅಂಗಡಿಗಳೆದುರೂ ಜನರು ಆಹಾರ ಧಾನ್ಯ ಖರೀದಿಗೆ ಮುಗಿಬಿದ್ದಿದ್ದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT