ಶುಕ್ರವಾರ, ಆಗಸ್ಟ್ 12, 2022
21 °C

‘ಪಿಎಂ ಕೇರ್ಸ್‌’ ನಿಧಿ: ಅನುರಾಗ್‌ ಠಾಕುರ್‌ ಹೇಳಿಕೆ: ಸಂಸತ್‌ ಕಲಾಪದಲ್ಲಿ ಗದ್ದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಪಿಎಂ ಕೇರ್ಸ್‌’ ನಿಧಿಗೆ ಸಂಬಂಧಿಸಿದಂತೆ ಕೇಂದ್ರದ ಸಚಿವ ಅನುರಾಗ್‌ ಠಾಕುರ್‌ ಅವರು ಶುಕ್ರವಾರ ಲೋಕಸಭೆಯಲ್ಲಿ ನೀಡಿದ ಹೇಳಿಕೆಗೆ ಕಾಂಗ್ರೆಸ್‌ ನಾಯಕರು ಭಾರಿ ವಿರೋಧ ವ್ಯಕ್ತಪಡಿಸಿದ್ದರಿಂದ ನಾಲ್ಕು ಬಾರಿ ಕಲಾಪವನ್ನು ಮುಂದೂಡಬೇಕಾಗಿ ಬಂತು.

ಪಿಎಂ ಕೇರ್‌ಸ್‌ ನಿಧಿಗೆ ಸಂಬಂಧಿಸಿದಂತೆ ಮಾತನಾಡಿದ ಠಾಕುರ್‌, ‘ವಿರೋಧ ಪಕ್ಷದವರು ಒಳ್ಳೆಯ ವಿಚಾರಗಳನ್ನು ಸಹ ಕೆಟ್ಟ ದೃಷ್ಟಿಯಿಂದಲೇ ನೋಡುತ್ತಿದ್ದಾರೆ. ಪಿಎಂ ಕೇರ್ಸ್‌ ಅನ್ನು ಮಾರ್ಚ್‌ ತಿಂಗಳಲ್ಲಿ ಆರಂಭಿಸಲಾಗಿತ್ತು. ಏಪ್ರಿಲ್‌ ತಿಂಗಳಲ್ಲೇ ಇದಕ್ಕೆ ವಿರೋಧ ವ್ಯಕ್ತವಾಯಿತು. ಈ ವಿಚಾರದಲ್ಲಿ ನ್ಯಾಯಾಲಯವೂ ನಿಧಿಯ ಪರವಾಗಿ ತೀರ್ಪು ನೀಡಿದೆ. ಇದು ಸಂವಿಧಾನಾತ್ಮಕವಾಗಿ ರಚಿಸಲಾದ ಸಾರ್ವಜನಿಕ ದತ್ತಿನಿಧಿ. ಬಡವರು, ವೃದ್ಧರು ಮಾತ್ರವಲ್ಲ ಮಕ್ಕಳು ಸಹ ಈ ನಿಧಿಗೆ ದೇಣಿಗೆ ನೀಡಿದ್ದಾರೆ' ಎಂದರು.

‘ನೆಹರೂ ಅವರು ಪ್ರಧಾನಿಯಾಗಿದ್ದಾಗ ಆರಂಭಿಸಿದ್ದ ‘ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯು’ ಸಾರ್ವಜನಿಕ ದತ್ತಿನಿಧಿ ಎಂದು ಈವರೆಗೂ ನೋಂದಣಿಯಾಗಿಲ್ಲ. ಆದರೆ ಎಫ್‌ಸಿಆರ್‌ಎ ಸೇರಿದಂತೆ ಎಲ್ಲಾ ಅಗತ್ಯ ಮಂಜೂರಾತಿಗಳನ್ನು ಅದಕ್ಕೆ ನೀಡಲಾಗಿದೆ. ಆ ನಿಧಿಯ ಹಣ ದುರ್ಬಳಕೆಯಾಗಿದ್ದು ಆ ಕುರಿತು ತನಿಖೆ ನಡೆಸಬೇಕಾಗಿದೆ.  ಅದು ಕೇವಲ ನೆಹರು–ಗಾಂಧಿ ಪರಿವಾರದ ಲಾಭಕ್ಕಾಗಿ ಮಾಡಿದ್ದ ನಿಧಿ. ಆ ಕುಟುಂಬ ದೇಶವನ್ನು ಹಾಳುಮಾಡಿದೆ’ ಎಂದರು.

ಈ ಹೇಳಿಕೆಯಿಂದ ಸಿಟ್ಟಿಗೆದ್ದ ಕಾಂಗ್ರೆಸ್‌ ಮುಖಂಡರು, ಸದನದಲ್ಲಿ ಗದ್ದಲ ಎಬ್ಬಿಸಿದರು. ‘ಪಿಎಂ ಕೇರ್ಸ್‌ ನಿಧಿಗೆ ಚೀನಾದ ಕಂಪನಿಗಳೂ ದೇಣಿಗೆ ನೀಡಿವೆ. ಆ ಬಗ್ಗೆಯೂ ತನಿಖೆಯಾಗಬೇಕು’ ಎಂದು ಕಾಂಗ್ರೆಸ್‌ ಮುಖಂಡ ಅಧಿರ್‌ ರಂಜನ್‌ ಚೌಧರಿ ಆಗ್ರಹಿಸಿದರು. ಠಾಕುರ್‌ ಅವರು ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್‌ ಸದಸ್ಯರು ಒತ್ತಾಯಿಸಿದರು. ಗದ್ದಲ ಜೋರಾದಾಗ ಕಲಾಪವನ್ನು ಆರ್ಧ ಗಂಟೆಯ ಕಾಲ ಮುಂದೂಡಲಾಯಿತು. ಮತ್ತೆ ಕಲಾಪ ಆರಂಭವಾದರೂ ಗದ್ದಲವೇ ಮುಂದುವರಿಯಿತು. ಹೀಗೆ ನಾಲ್ಕು ಬಾರಿ ಕಲಾಪವನ್ನು ಮುಂದೂಡಬೇಕಾಗಿ ಬಂತು.

ಕೊನೆಗೆ ಠಾಕುರ್‌ ಅವರು, ‘ಯಾರ ಭಾವನೆಗಳಿಗೂ ನೋವು ಉಂಟುಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ’ ಎಂದರು. ಪ್ರಕರಣವನ್ನು ಅಲ್ಲಿಗೆ ಕೊನೆಗೊಳಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು