ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಷುದ್ರಶಕ್ತಿ’ ನಂಬಿ ಪುತ್ರಿಯರನ್ನೇ ಕೊಂದ ಪೋಷಕರ ಬಂಧನ

Last Updated 26 ಜನವರಿ 2021, 17:41 IST
ಅಕ್ಷರ ಗಾತ್ರ

ಹೈದರಾಬಾದ್: ‘ಕಲಿಯುಗ ಮುಗಿದು ಸತ್ಯಯುಗ ಆರಂಭವಾಗುತ್ತದೆ. ಕ್ಷುದ್ರ ಶಕ್ತಿಯಿಂದ ಸತ್ತವರು ಕೆಲವೇ ಗಂಟೆಗಳಲ್ಲಿ ಮತ್ತೆ ಹುಟ್ಟಿ ಬರುತ್ತಾರೆ’ ಎಂದು ನಂಬಿ ತಮ್ಮ ಇಬ್ಬರು ಪುತ್ರಿಯರನ್ನು ಕೊಂದಿದ್ದ ಪೋಷಕರನ್ನು ಮಂಗಳವಾರ ಪೊಲೀಸರು ಬಂಧಿಸಿದ್ದಾರೆ.

ಈ ವಿಲಕ್ಷಣ ಘಟನೆಯು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಭಾನುವಾರ ರಾತ್ರಿ ನಡೆದಿದೆ. ವಿ.ಪುರುಷೋತ್ತಮ ನಾಯ್ಡು ಮತ್ತು ಪದ್ಮಜಾ ದಂಪತಿ ಪ್ರಕರಣದ ಆರೋಪಿಗಳು. ಪುತ್ರಿಯರಾದ ಅಲೇಖ್ಯಾ (27) ಮತ್ತು ಸಾಯಿ ದಿವ್ಯಾ (22) ಅವರನ್ನು ಡಂಬಲ್‌ಗಳಿಂದ ಹೊಡೆದು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ‌

ಶವಗಳ ಅಂತ್ಯಕ್ರಿಯೆ ಸೋಮವಾರ ನಡೆದಿದ್ದು, ಸಂಬಂಧಿಕರ ನೆರವಿನೊಂದಿಗೆ ಪುರುಷೋತ್ತಮ ನಾಯ್ದು ಅಂತ್ಯಕ್ರಿಯೆ ನೆರವೇರಿಸಿದರು. ಮೃತ ಪುತ್ರಿಯರ ತಾಯಿ ಪದ್ಮಜಾ ಇನ್ನೂ ಭ್ರಮೆಯ ಸ್ಥಿತಿಯಲ್ಲಿದ್ದಾರೆ.

‘ಬಂಧನದ ನಂತರ ಪೋಷಕರನ್ನು ಕೋವಿಡ್–19 ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಪದ್ಮಜಾ ಶಿವನ ಸಾಕಾರದಿಂದಾಗಿ ಅಂತಹ ಪರೀಕ್ಷೆಗಳ ಅಗತ್ಯವಿಲ್ಲವೆಂದು ಹೇಳಿ ಆಸ್ಪತ್ರೆಯೊಳಗೆ ಪ್ರವೇಶಿಸಲು ನಿರಾಕರಿಸಿದರು. ಪುರುಷೋತ್ತಮ್ ನಾಯ್ದು ನಿಧಾನವಾಗಿ ವಾಸ್ತವ ಸ್ಥಿತಿಗೆ ಮರಳುತ್ತಿದ್ದಾರೆ. ಆದರೆ, ಪದ್ಮಜಾ ಅವರ ಮಾನಸಿಕ ಸ್ಥಿತಿಯಲ್ಲಿ ಸುಧಾರಣೆಯಾಗಿಲ್ಲ. ಅವರು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ’ ಎಂದು ಮದನಪಲ್ಲಿ ಗ್ರಾಮೀಣ ವಲಯದ ಸರ್ಕಲ್ ಇನ್‌ಸ್ಪೆಕ್ಟರ್ ಎಂ. ಶ್ರೀನಿವಾಸ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ ಆ ದಿನ ಏನು ನಡೆದಿದೆ ಎಂದು ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ಘಟನಾ ಸ್ಥಳದಲ್ಲಿ ಅಂದು ಪೋಷಕರು ಮತ್ತು ಇಬ್ಬರು ಪುತ್ರಿಯರು ಮಾತ್ರ ಇದ್ದರು. ಅವರು ಕ್ಷುದ್ರ ಶಕ್ತಿಯನ್ನು ನಂಬಿದ್ದರು ಎಂದು ತೋರುತ್ತದೆ’ ಎಂದೂ ಶ್ರೀನಿವಾಸ್ ತಿಳಿಸಿದ್ದಾರೆ.

ಸ್ಥಳೀಯ ವರದಿಗಳ ಪ್ರಕಾರ, ‘ಇಬ್ಬರು ಹುಡುಗಿಯರೂ ಒಂದು ವಾರದಿಂದ ತಮ್ಮ ಮೇಲೆ ಕ್ಷುದ್ರಶಕ್ತಿ ದಾಳಿ ಮಾಡಿದೆ ಎಂಬ ಭಯದಿಂದ ಇದ್ದರು. ಭಾನುವಾರ ಮಧ್ಯಾಹ್ನದ ಹೊತ್ತಿಗೆ ಸಾಯಿದಿವ್ಯಾ ಮೇಲೆ ಮೊದಲು ಡಂಬಲ್‌ನಿಂದ ಹೊಡೆಯಲಾಗಿದೆ. ಆಕೆ ತಕ್ಷಣವೇ ಸಾವನ್ನಪ್ಪಿದ್ದಾಳೆ. ನಂತರ ಆಕೆಯ ಅಕ್ಕ ಅಲೇಖ್ಯಾಳನ್ನು ಡಂಬಲ್‌ನಿಂದ ಹೊಡೆದು ಸಾಯಿಸಲಾಗಿದೆ’ ಎಂದು ತಿಳಿದುಬಂದಿದೆ.

ಸುಶಿಕ್ಷಿತ ಪೋಷಕರು

ಪುರುಷೋತ್ತಮ ನಾಯ್ಡು, ಎಂ.ಎಸ್‌ಸಿ, ಪಿಎಚ್‌.ಡಿ ಪದವೀಧರ. ಮದನಪಲ್ಲಿಯ ಮಹಿಳಾ ಸರ್ಕಾರಿ ಪದವಿಪೂರ್ವ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಹಾಗೂ ಕಾಲೇಜಿನ ಉಪ ಪ್ರಾಂಶುಪಾಲ. ಪದ್ಮಜಾ, ಸ್ನಾತಕೋತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದವರು. ಸ್ಥಳೀಯ ಖಾಸಗಿ ಶಾಲೆಯೊಂದರಲ್ಲಿ ಪ್ರಾಂಶುಪಾಲೆ.

ಅಲೇಖ್ಯಾ, ಭೋಪಾಲ್‌ನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರು. ಸಾಯಿ ದಿವ್ಯಾ, ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಅವರ ಕೆ.ಎಂ. ಮ್ಯೂಸಿಕ್ ಕನ್ಸರ್ವೇಟರಿ ಶಾಲೆಯ ವಿದ್ಯಾರ್ಥಿನಿ. ಕೊರೊನಾ ಲಾಕ್‌ಡೌನ್ ಕಾರಣದಿಂದಾಗಿ ಈ ಇಬ್ಬರು ಪುತ್ರಿಯರು ತಮ್ಮ ಪೋಷಕರ ಜತೆಯಲ್ಲಿ ನೆಲೆಸಿದ್ದರು.

ಕೊಲೆ ಮಾಡಿದ ವಿಷಯವನ್ನು ತಂದೆ, ತನ್ನ ಸಹೋದ್ಯೋಗಿಯೊಬ್ಬರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ. ವಿಷಯ ಕೇಳಿ ಅಘಾತಕ್ಕೊಳಗಾದ ಆ ಸಹೋದ್ಯೋಗಿ, ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.

ಸ್ಥಳ ಪರಿಶೀಲಿಸಿದ ಪೊಲೀಸರು, ಈ ಕುಟುಂಬ, ಕೆಲ ಸಮಯದಿಂದ ಮಾಟ, ಮಂತ್ರದಂತಹ ಅತೀಂದ್ರೀಯ ಚಟುವಟಿಕೆಗಳನ್ನು ಅನುಸರಿಸುತ್ತಿದ್ದರು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ‘ಮಕ್ಕಳನ್ನು ಕೊಂದು, ತಾವೂ ಸಾಯಲು ಯೋಜನೆ ರೂಪಿಸಿದ್ದರು. ನಾವೂ ಮತ್ತೆ ಹುಟ್ಟಿ ಬರುತ್ತೇವೆ ಎಂಬುದು ಅವರ ನಂಬಿಕೆಯಾಗಿತ್ತು‘ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸುವಾಗಲೂ ಈ ದಂಪತಿ ಪ್ರತಿರೋಧ ತೋರಿ, ‘ಸತ್ಯಯುಗ ಆರಂಭವಾಗುತ್ತದೆ. ಇಬ್ಬರೂ ಮಕ್ಕಳೂ ಅಲ್ಲೇ ಹುಟ್ಟಿಬರಲಿದ್ದಾರೆ, ದೇಹಗಳಿಗೆ ಜೀವ ಬರಲಿದೆ‘ ಎಂದು ಹೇಳುತ್ತಿದ್ದುದ್ದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT