ಶನಿವಾರ, ಸೆಪ್ಟೆಂಬರ್ 24, 2022
21 °C

ಬ್ಯಾಗ್ ಕಿತ್ತುಕೊಂಡು ದಲಿತ ಬಾಲಕಿ ಶಾಲೆಗೆ ಹೋಗುವುದಕ್ಕೆ ಅಡ್ಡಿ: 7 ಮಂದಿ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಶಾಜಾಪುರ (ಮಧ್ಯಪ್ರದೇಶ): ಇಲ್ಲಿನ ಬವಲಿಯಖೇಡಿ ಗ್ರಾಮದ ಸ್ಥಳೀಯ ನಿವಾಸಿಗಳ ಗುಂಪೊಂದು ಅಪ್ರಾಪ್ತ ದಲಿತ ಬಾಲಕಿಗೆ ಶಾಲೆಗೆ ಹೋಗಬೇಡ ಎಂದು ತಡೆ ಒಡ್ಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ.

ಹಳ್ಳಿಯ ಇತರ ಬಾಲಕಿಯರು ಶಾಲೆಗೆ ಹೋಗುತ್ತಿಲ್ಲ. ಹಾಗಾಗಿ, ನೀನೂ ಹೋಗಬೇಡ ಎಂದು ಹೇಳಿದ್ದರು ಎಂದು ತಿಳಿದು ಬಂದಿರುವುದಾಗಿ ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಈ ಸಂಬಂಧ ಬಾಲಕಿಯ ಸಂಬಂಧಿಕರು ಮತ್ತು ಬಂಧಿತ ಆರೋಪಿಗಳ ಸಂಬಂಧಿಕರ ನಡುವೆ ಘರ್ಷಣೆ ಭುಗಿಲೆದ್ದಿದ್ದು, ಕೆಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರಿಶಿಷ್ಟ ಜಾತಿಗೆ ಸೇರಿದ 16 ವರ್ಷದ ಬಾಲಕಿ ಶನಿವಾರ ಮಧ್ಯಾಹ್ನ ಸ್ಥಳೀಯ ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಗ್ರಾಮದ ಇತರ ಬಾಲಕಿಯರು ಶಾಲೆಗೆ ಹೋಗದ ಕಾರಣ ನೀನೂ ಹೋಗುವುದು ಬೇಡ ಎಂದು ಬಾಲಕಿಯನ್ನು ದಬಾಯಿಸಿದ ಕೆಲವು ವ್ಯಕ್ತಿಗಳು ಆಕೆಯ ಶಾಲಾ ಬ್ಯಾಗನ್ನು ಕಿತ್ತುಕೊಂಡಿದ್ದರು ಎಂದು ಕೊತ್ವಾಲಿ ಪೊಲೀಸ್ ಠಾಣೆ ಪ್ರಭಾರಿ ಅವಧೇಶ್ ಕುಮಾರ್ ಶೇಷಾ ತಿಳಿಸಿದ್ದಾರೆ.

ನಂತರ, ಬಾಲಕಿಯ ಕುಟುಂಬ ಮತ್ತು ಆರೋಪಿಯ ಸಂಬಂಧಿಕರ ನಡುವೆ ಘರ್ಷಣೆ ಸಂಭವಿಸಿದೆ ಎಂದು ಅವರು ಹೇಳಿದರು.

ದೂರಿನ ನಂತರ, ಪೊಲೀಸರು ಸೋಮವಾರ ಏಳು ಜನರನ್ನು ಭಾರತೀಯ ದಂಡ ಸಂಹಿತೆಯ ಸಂಬಂಧಿತ ವಿಧಿಗಳ ಅಡಿಯಲ್ಲಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಬಂಧಿಸಿದ್ದಾರೆ ಎಂದು ಅವರು ಹೇಳಿದರು.

ಆರೋಪಿಗಳ ಕಡೆಯಿಂದ ಪ್ರತಿ ದೂರು ದಾಖಲಾಗಿದ್ದು, ಬಾಲಕಿಯ ಸಹೋದರ ಮತ್ತು ಇತರ ಮೂವರ ವಿರುದ್ಧವೂ ಹಲ್ಲೆ ಆರೋಪ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘರ್ಷಣೆಯಲ್ಲಿ ಗಾಯಗೊಂಡವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಆರೋಪಿಗಳ ಪೈಕಿ ಒಬ್ಬ ತನ್ನ ಶಾಲಾ ಬ್ಯಾಗನ್ನು ಕಿತ್ತುಕೊಂಡಿದ್ದಾನೆ ಮತ್ತು ತರಗತಿಗಳಿಗೆ ಹಾಜರಾಗುವುದಕ್ಕೆ ಆಕ್ಷೇಪಿಸಿದ್ದಾನೆ ಎಂದು ಆರೋಪಿಸಿ ಬಾಲಕಿ ವಿಡಿಯೊ ಬಿಡುಗಡೆ ಮಾಡಿದ್ದಾಳೆ. ಇದಕ್ಕೆ ವಿರೋಧಿಸಿದಾಗ ಆರೋಪಿಯು ತನ್ನ ಸಹೋದರನ ಮೇಲೆ ಹಲ್ಲೆ ನಡೆಸಿದ್ದಾನೆ ಮತ್ತು ಇತರ ಕುಟುಂಬ ಸದಸ್ಯರನ್ನು ಸಹ ಥಳಿಸಿದ್ದಾರೆ ಎಂದು ಬಾಲಕಿ ಆರೋಪಿಸಿದ್ದಾಳೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು