ಸೋಮವಾರ, ಜೂನ್ 21, 2021
29 °C
ಕೋವಿಡ್ ಮಾರ್ಗಸೂಚಿ ಪಾಲಿಸಲು ಉತ್ತೇಜಿಸಲು ಪೊಲೀಸ್ ಅಧಿಕಾರಿಯ ಹೊಸ ಐಡಿಯಾ

ಕೋವಿಡ್ ಮಾರ್ಗಸೂಚಿ ಪಾಲಿಸುವ ವಧು ವರರಿಗೆ ಪೊಲೀಸ್ ಅಧಿಕಾರಿ ಔತಣಕೂಟ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಭೋಪಾಲ್: ಕೋವಿಡ್‌ ಮಾರ್ಗಸೂಚಿಗಳನ್ನು ಪಾಲಿಸಲು ಜನರನ್ನು ಉತ್ತೇಜಿಸುವುದಕ್ಕಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯೊಬ್ಬರು ‘ಹತ್ತು ಅತಿಥಿಗಳ ಸಮ್ಮುಖದಲ್ಲಿ ಮದುವೆಯಾಗುವ ಪ್ರತಿ ನವ ದಂಪತಿಗೆ ತಮ್ಮ ಮನೆಗೆ ಆಹ್ವಾನಿಸಿ, ರುಚಿಕರ ಭೋಜನ ಕೂಟ ಏರ್ಪಡಿಸುವುದಾಗಿ‘ ಪ್ರಕಟಿಸಿದ್ದಾರೆ.

ಮಧ್ಯಪ್ರದೇಶದ ಭಿಂದ್ ಜಿಲ್ಲೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್‌ ಕುಮಾರ್ ಸಿಂಗ್‌ ಇಂಥ ದ್ದೊಂದು ಹೊಸ ಆಲೋಚನೆಯನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ. 10 ಅಥವಾ ಅದಕ್ಕಿಂತ ಕಡಿಮೆ ಅತಿಥಿಗಳ ಸಮ್ಮುಖದಲ್ಲಿ ವಿವಾಹವಾಗುವ ವಧು-ವರರಿಗೆ ಈ ಆತಿಥ್ಯ ನೀಡುವುದಾಗಿ ಮನೋಜ್‌ ಕುಮಾರ್ ಸೋಮವಾರ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ವಾರದ ಹಿಂದೆ ಬಿಂಧ್‌ ಜಿಲ್ಲೆಯ ಕುರ್ತಾರ ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ಜನರು ಮಾಸ್ಕ್‌ ಧರಿಸಿದೇ, ವ್ಯಕ್ತಿಗತ ಅಂತರ ಕಾಪಾಡದೇ ಮನಬಂದಂತೆ ನೃತ್ಯ ಮಾಡುತ್ತಿದ್ದರು. ಇದನ್ನು ಗಮನಿಸಿದ ಮನೋಜ್ ಅವರು, ಇಂಥ ಘಟನೆಗಳು ಪುನರಾವರ್ತನೆಯಾಗದಂತೆ ಎಚ್ಚರವಹಿಸಲು ತೀರ್ಮಾನಿಸಿ, ಈ ಹೊಸ ಯೋಜನೆ ಪ್ರಕಟಿಸಿದರು.

‘ರುಚಿಕರವಾದ ಭೋಜನ ಪಾರ್ಟಿ ಜತೆಗೆ, ವಿವಾಹ ಮಹೋತ್ಸವದಲ್ಲಿ ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟು ನಿಟ್ಟಾಗಿ ಅನುಸರಿಸಿದ ದಂಪತಿಗೆ ನೆನಪಿನ ಕಾಣಿಕೆ ನೀಡಿ, ಸರ್ಕಾರಿ ವಾಹನದಲ್ಲಿ ಮನೆಗೆ ತಲುಪಿಸುವುದಾಗಿ‘ ಪ್ರಕಟಿಸಿದರು.

‘ಈ ಪ್ರಕಟಣೆ ನೀಡಿ ಎರಡು ದಿನಗಳಾಗಿವೆ. ಇಲ್ಲಿವರೆಗೂ ಯಾರೂ ನನ್ನ ಭೋಜನ ಸತ್ಕಾರದ ಆಹ್ವಾನವನ್ನು ಸ್ವೀಕರಿಸಲು ಬಂದಿಲ್ಲ‘ ಎಂದು ಎಸ್‌ಪಿ ಮನೋಜ್ ಕುಮಾರ್ ಹೇಳಿದರು.

ಏಪ್ರಿಲ್ 30ರಂದು ಎರಡು ಜೋಡಿಗಳು ವಿವಾಹವಾಗುತ್ತಿದ್ದಾರೆ. ನಾನು ಹೇಳಿದ ನಂತರ ಅವರು ಅತಿಥಿಗಳ ಸಂಖ್ಯೆಯನ್ನು 10ಕ್ಕೆ ಮಿತಿಗೊಳಿಸಲು ಯೋಚಿಸಿದ್ದಾರೆ. ಅವರು ಹಾಗೆ ಮಾಡಿದ್ದೇ ಆದರೆ, ನನ್ನ ಕುಟುಂಬದೊಂದಿಗೆ, ನನ್ನ ಮನೆಯಲ್ಲೇ ಆ ಎರಡು ಜೋಡಿಗೂ ಔತಣ ಕೂಟ ಏರ್ಪಡಿಸುತ್ತೇನೆ‘ ಎಂದು ಅವರು ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು