ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಸ್‌ ಅಧಿಕಾರಿ ಪುರುಷೋತ್ತಮ್‌ ಪತ್ನಿಯ ವಿರುದ್ಧ ದೂರು ನೀಡಿದ ನಿರೂಪಕಿ

Last Updated 29 ಸೆಪ್ಟೆಂಬರ್ 2020, 12:24 IST
ಅಕ್ಷರ ಗಾತ್ರ

ಭೋಪಾಲ್‌: ಹಿರಿಯ ಐಪಿಎಸ್‌ ಅಧಿಕಾರಿ ಪುರುಷೋತ್ತಮ್‌ ಶರ್ಮಾ ಅವರ ಪತ್ನಿ ಹಾಗೂ ಪುತ್ರ ಪಾರ್ಥ ವಿರುದ್ಧ ಪ್ರಾದೇಶಿಕ ಸುದ್ದಿ ವಾಹಿನಿಯ ನಿರೂಪಕಿಯೊಬ್ಬರು ಶಹಪುರ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ದೂರು ದಾಖಲಿಸಿದ್ದಾರೆ.

‘ಅಮ್ಮ ಮತ್ತು ಮಗ ಸೇರಿಕೊಂಡು ನನ್ನ ಹೆಸರಿಗೆ ಮಸಿ ಬಳಿಯಲು ಪ್ರಯತ್ನಿಸುತ್ತಿದ್ದಾರೆ’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

ಪುರುಷೋತ್ತಮ್‌ ಅವರು ನಿರೂಪಕಿಯ ಜೊತೆ ಆಕೆಯ ಫ್ಲ್ಯಾಟ್‌ನಲ್ಲಿ ಇರುವುದನ್ನು ಅವರ ಪತ್ನಿ ಪ್ರಶ್ನಿಸಿದ್ದರು. ಇದರಿಂದ ಕೆರಳಿದ್ದ ಪುರುಷೋತ್ತಮ್‌ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದರು. ಅವಾಚ್ಯ ಶಬ್ದಗಳಿಂದಲೂ ನಿಂದಿಸಿದ್ದರು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದರ ಆಧಾರದಲ್ಲೇ ಅವರನ್ನು ವರ್ಗಾವಣೆ ಕೂಡ ಮಾಡಲಾಗಿತ್ತು.

‘ಹಿರಿಯ ಐಪಿಎಸ್‌ ಅಧಿಕಾರಿ ಪುರುಷೋತ್ತಮ್‌ ಶರ್ಮಾ ನನ್ನ ತಂದೆ ಇದ್ದ ಹಾಗೆ. ಅವರು ನನ್ನನ್ನು ಮಗಳೇ ಅಂತಲೇ ಕರೆಯುತ್ತಿದ್ದರು’ ಎಂದು ನಿರೂಪಕಿ ಹೇಳಿದ್ದಾರೆ.

‘ಘಟನೆಯಿಂದ ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ. ಘನತೆಗೂ ಚ್ಯುತಿ ಉಂಟಾಗಿದ್ದು, ಸಮಾಜದಲ್ಲಿ ತಲೆ ಎತ್ತಿಕೊಂಡು ಓಡಾಡದಂತೆ ಆಗಿದೆ. ಇಷ್ಟಕ್ಕೆಲ್ಲಾ ಪುರುಷೋತ್ತಮ್‌ ಅವರ ಪತ್ನಿ ಹಾಗೂ ಮಗನೇ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ’ ಎಂದು ಶಹಪುರ ಠಾಣೆಯ ಉಸ್ತುವಾರಿ ಜಿತೇಂದರ್ ‍ಪಟೇಲ್‌ ನುಡಿದಿದ್ದಾರೆ.

‘ಪತ್ರಿಕೋದ್ಯಮ ವೃತ್ತಿಯಲ್ಲಿರುವ ನಾನು ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನು ಭೇಟಿಯಾಗುವುದು ಸಾಮಾನ್ಯ. ಭಾನುವಾರ (ಸೆ.27) ರಾತ್ರಿ 7 ಗಂಟೆಯ ಸುಮಾರಿಗೆ ಪುರುಷೋತ್ತಮ್‌ ಅವರು ಕರೆ ಮಾಡಿದ್ದರು. ನನ್ನ ಫ್ಲ್ಯಾಟ್‌ ಹತ್ತಿರವೇ ಇರುವುದಾಗಿ ತಿಳಿಸಿದರು. ಹೀಗಾಗಿ ಮನೆಗೆ ಬಂದು ಕಾಫಿ ಕುಡಿದು ಹೋಗಿ ಎಂದು ಸೌಜನ್ಯದಿಂದಲೇ ಕರೆದಿದ್ದೆ. ಕೆಲ ಸಮಯದ ನಂತರ ಮಹಿಳೆಯೊಬ್ಬರು ಫ್ಲ್ಯಾಟ್‌ ಬಳಿ ಬಂದು ಕಾಲಿಂಗ್‌ ಬೆಲ್‌ ಮಾಡಿದರು. ಕದ ತೆರೆಯುತ್ತಿದ್ದಂತೆಯೇ ಬಲವಂತದಿಂದಲೇ ಒಳಗೆ ನುಗ್ಗಿದರು. ಆಕೆ ಶರ್ಮಾ ಅವರ ಪತ್ನಿ ಎಂಬುದು ನನಗೆ ಗೊತ್ತಿರಲಿಲ್ಲ. ನಂತರ ಗಂಡ ಹೆಂಡತಿ ನಡುವೆ ಜಗಳವಾಯಿತು. ಶರ್ಮಾ ಅವರು ಸಿಟ್ಟಿನಿಂದಲೇ ಫ್ಲ್ಯಾಟ್‌ನಿಂದ ಆಚೆ ಹೋದರು. ಬಳಿಕ ಅವರ ಪತ್ನಿ ನನಗೆ ಇಲ್ಲಸಲ್ಲದ ಪ್ರಶ್ನೆಗಳನ್ನೆಲ್ಲಾ ಕೇಳಿದರು. ನಂತರ ಏಕಾಏಕಿ ಮಲಗುವ ಕೋಣೆಗೆ ಹೋಗಿ ವಿಡಿಯೊ ಚಿತ್ರೀಕರಿಸಿದರು. ಅದೇ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು’ ಎಂದು ನಿರೂಪಕಿಯು ದೂರಿನಲ್ಲಿ ವಿವರಿಸಿದ್ದಾರೆ.

‘ಪುರುಷೋತ್ತಮ್‌ ಅವರು ನನ್ನ ಮನೆಗೆ ಕಾಫಿ ಕುಡಿಯಲು ಬಂದರೆ ಇಷ್ಟೆಲ್ಲಾ ಅವಾಂತರಗಳು ಆಗುತ್ತವೆ ಎಂದು ನಾನಂತೂ ನಿರೀಕ್ಷಿಸಿರಲಿಲ್ಲ. ಈ ಘಟನೆಯಿಂದ ಮಾನಸಿಕವಾಗಿ ತುಂಬಾ ನೊಂದಿದ್ದೇನೆ’ ಎಂದೂ ದೂರಿನಲ್ಲಿ ತಿಳಿಸಿದ್ದಾರೆ.

‘ಇದು ವ್ಯಕ್ತಿಯೊಬ್ಬರ ಘನತೆಗೆ ಧಕ್ಕೆ ಉಂಟು ಮಾಡುವುದಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ. ಈ ಸಂಬಂಧ ನ್ಯಾಯಾಲಯದಲ್ಲೇ ದೂರು ದಾಖಲಿಸಬೇಕು’ ಎಂದುಜಿತೇಂದರ್ ‍ಪಟೇಲ್‌ ಹೇಳಿದ್ದಾರೆ.

ಘಟನೆಯ ಬೆನ್ನಲ್ಲೇ ಪುರುಷೋತ್ತಮ್‌ ಅವರನ್ನುಪಬ್ಲಿಕ್‌ ಪ್ರಾಸಿಕ್ಯೂಷನ್‌ ನಿರ್ದೇಶಕ ಹುದ್ದೆಯಿಂದ ಸ್ಟೇಟ್‌ ಸೆಕ್ರೆಟರಿಯೇಟ್‌ಗೆ ವರ್ಗಾವಣೆ ಮಾಡಲಾಗಿದ್ದು ಯಾವುದೇ ಹುದ್ದೆ ತೋರಿಸಿಲ್ಲ.

‘ನೀವು ಪತ್ನಿಯನ್ನು ಥಳಿಸುತ್ತಿರುವ ಹಾಗೂ ಕೌಟುಂಬಿಕ ದೌರ್ಜನ್ಯವೆಸಗುತ್ತಿರುವುದಕ್ಕೆ ಸಂಬಂಧಪಟ್ಟ ಎರಡು ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹೀಗಾಗಿ ನಿಮ್ಮನ್ನು ವರ್ಗಾವಣೆ ಮಾಡಲಾಗಿದೆ’ ಎಂದು ಗೃಹ ಸಚಿವಾಲಯದ ಅಧೀನ ಕಾರ್ಯದರ್ಶಿ ಅನು ಭಲಾವಿ ನೀಡಿರುವ ಷೋಕಾಸ್‌ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಇದು ನಮ್ಮ ಕುಟುಂಬದ ವಿಚಾರ. ಬಹುದೊಡ್ಡ ಅಪರಾಧವೇನಲ್ಲ. ನಾನು ಅಪರಾಧಿಯೂ ಅಲ್ಲ. ನಾನು ಎಲ್ಲೇ ಹೋದರೂ ಪತ್ನಿ ಹಿಂಬಾಲಿಸುತ್ತಾಳೆ. ಅನುಮಾನದಿಂದಲೇ ನೋಡುತ್ತಾಳೆ’ ಎಂದು ಪುರುಷೋತ್ತಮ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT