ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈಗೆ ಹೊರಟಿದ್ದ ವ್ಯಕ್ತಿಗೆ ಕೋವಿಡ್ ದೃಢ; ವಿಮಾನ ಹತ್ತುವುದನ್ನು ತಡೆದ ಸಿಬ್ಬಂದಿ

Last Updated 15 ಸೆಪ್ಟೆಂಬರ್ 2021, 11:48 IST
ಅಕ್ಷರ ಗಾತ್ರ

ಇಂದೋರ್: ದುಬೈಗೆ ತೆರಳಲು ಏರ್ ಇಂಡಿಯಾ ವಿಮಾನ ಹತ್ತಿದ್ದ 26 ವರ್ಷದ ವ್ಯಕ್ತಿಯೊಬ್ಬರ ಕೋವಿಡ್ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ವಿಮಾನದಿಂದ ಕೆಳಗಿಳಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್ ವಿಮಾನ ನಿಲ್ದಾಣದಲ್ಲಿ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಂತರ ಅವರನ್ನು ಕೋವಿಡ್-19 ರೋಗಿಗಳಿಗಾಗಿ ಸ್ಥಾಪಿಸಲಾದ ಆರೈಕೆ ಕೇಂದ್ರಕ್ಕೆ ಸೇರಿಸಲಾಯಿತು. 'ಕೋವಿಡ್-19 ನಿಯಮಾವಳಿ ಪ್ರಕಾರ, ಬುಧವಾರ ಇಲ್ಲಿನ ದೇವಿ ಅಹಲ್ಯಾಬಾಯಿ ಹೋಲ್ಕರ್ ವಿಮಾನ ನಿಲ್ದಾಣದಲ್ಲಿ ಇಂದೋರ್-ದುಬೈ ವಿಮಾನದ 117 ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆಗಳನ್ನು ನಡೆಸಲಾಯಿತು. ಅವರಲ್ಲಿ 26 ವರ್ಷದ ವ್ಯಕ್ತಿಗೆ ಕೋವಿಡ್ ದೃಢಪಟ್ಟಿತ್ತು' ಎಂದು ಕೋವಿಡ್-19 ತಡೆಗಟ್ಟುವಿಕೆಯ ನೋಡಲ್ ಅಧಿಕಾರಿ ಡಾ.ಅಮಿತ್ ಮಲಾಕರ್ ಹೇಳಿದ್ದಾರೆ.

ಉದ್ಯೋಗದ ನಿಮಿತ್ತ ಆ ವ್ಯಕ್ತಿ ದುಬೈಗೆ ಹೋಗುತ್ತಿದ್ದರು. ವ್ಯಕ್ತಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರಿಂದ ಇಲ್ಲಿನ ಖಾಂಡ್ವಾ ರಸ್ತೆಯಲ್ಲಿರುವ ಕೋವಿಡ್-19 ರೋಗಿಗಳ ಆರೈಕೆ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಮಧ್ಯಪ್ರದೇಶದಲ್ಲಿ ಸದ್ಯ ಕೋವಿಡ್ ಸೋಂಕು ಪ್ರಕರಣಗಳು ತೀವ್ರಗತಿಯಲ್ಲಿ ಕುಸಿತ ಕಂಡಿವೆ. ಮಂಗಳವಾರ, ಮಧ್ಯಪ್ರದೇಶದಲ್ಲಿ ಏಳು ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 7,92,360ಕ್ಕೆ ಏರಿದೆ. ಆದರೆ ರಾಜ್ಯದಲ್ಲಿ ಯಾವುದೇ ಸಾವು ಸಂಭವಿಸಿಲ್ಲ. 7,81,717 ಜನರು ಈವರೆಗೂ ಚೇತರಿಸಿಕೊಂಡಿದ್ದು, 126 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT