ಮಂಗಳವಾರ, ಸೆಪ್ಟೆಂಬರ್ 21, 2021
29 °C

ನಟ ವಿಜಯ್ ಐಶಾರಾಮಿ ಕಾರು ಆಮದು ಪ್ರಕರಣ: ಏಕ ಸದಸ್ಯ ಪೀಠದ ಆದೇಶಕ್ಕೆ ತಡೆ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಐಷಾರಾಮಿ ಕಾರು ಆಮದು ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರಿಯ ನಟ ವಿಜಯ್‌ಗೆ 1 ಲಕ್ಷ ದಂಡ ವಿಧಿಸಿರುವ ಮತ್ತು ಅವರ ವಿರುದ್ಧ ಕೆಲವು ವ್ಯತಿರಿಕ್ತ ಹೇಳಿಕೆಗಳನ್ನು ನೀಡಿದ್ದ ಏಕ ಸದಸ್ಯ ಪೀಠದ ಆದೇಶಕ್ಕೆ ಮದ್ರಾಸ್ ಹೈಕೋರ್ಟ್ ಮಂಗಳವಾರ ಮಧ್ಯಂತರ ತಡೆ ನೀಡಿದೆ.

ನ್ಯಾಯಮೂರ್ತಿಗಳಾದ ಎಂ.ದುರೈಸ್ವಾಮಿ ಮತ್ತು ಆರ್.ಹೇಮಲತಾ ಅವರ ವಿಭಾಗೀಯ ನ್ಯಾಯಪೀಠ ಮಧ್ಯಂತರ ತಡೆ ನೀಡಿದೆ. ಆದರೆ, 2012ರಲ್ಲಿ ಇಂಗ್ಲೆಂಡ್‌ನಿಂದ ರೋಲ್ಸ್ ರಾಯ್ಸ್ ಘೋಸ್ಟ್ ಕಾರ್ ಅನ್ನು ಆಮದು ಮಾಡಿಕೊಳ್ಳಲು ವಿಧಿಸಿದ್ದ ಶೇ 80ರಷ್ಟು ಪ್ರವೇಶ ತೆರಿಗೆಯಲ್ಲಿ ಬಾಕಿ ಇರುವ ಮೊತ್ತವನ್ನು ಪಾವತಿಸುವಂತೆ ವಿಜಯ್ ಅವರಿಗೆ ನಿರ್ದೇಶನ ನೀಡಿತು.

ಆಮದು ಮಾಡಿಕೊಂಡಿದ್ದ ಕಾರಿಗೆ ಹೆಚ್ಚು ಪ್ರವೇಶ ತೆರಿಗೆ ವಿಧಿಸಲಾಗಿದೆ ಎಂದು ಆರೋಪಿಸಿ ವಿಜಯ್‌ ರಿಟ್‌ ಅರ್ಜಿ ಸಲ್ಲಿಸಿದ್ದರು.

ವಾಣಿಜ್ಯ ತೆರಿಗೆ ಇಲಾಖೆಯಿಂದ ಹೊಸ ನೋಟಿಸ್ ಬಂದ ನಂತರ ಅವರು ಒಂದು ವಾರದೊಳಗೆ ಬಾಕಿ ಮೊತ್ತವನ್ನು ಪಾವತಿಸಬೇಕು ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಕಾರಿಗೆ ವಿಧಿಸಿರುವ ಪ್ರವೇಶ ತೆರಿಗೆಯಿಂದ ವಿನಾಯಿತಿ ನೀಡಬೇಕೆಂದು ಕೋರಿ ಜುಲೈ 13 ರಂದು, ವಿಜಯ್‌ ರಿಟ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್‌.ಎಂ.ಸುಬ್ರಮಣಿಯನ್‌ ಅವರು ಇದ್ದ ಏಕ ಸದಸ್ಯಪೀಠ ಅರ್ಜಿ ವಜಾಗೊಳಿಸಿ, ₹ 1 ಲಕ್ಷ ದಂಡವನ್ನೂ ವಿಧಿಸಿತ್ತು. ಆ ದಂಡದ ಮೊತ್ತವನ್ನು ಎರಡು ವಾರಗಳಲ್ಲಿ ಮುಖ್ಯಮಂತ್ರಿಗಳ ಕೋವಿಡ್‌ ಪರಿಹಾರ ನಿಧಿಗೆ ಸಲ್ಲಿಸಬೇಕು ಎಂದು ಆದೇಶಿಸಿತ್ತು.

ಇದರಿಂದ ಅಸಮಾಧಾನಗೊಂಡ ವಿಜಯ್, ಏಕ ಸದಸ್ಯಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. 

ಇದನ್ನೂ ಓದಿ... ನಿಜ ಜೀವನದಲ್ಲಿ ಹೀರೋ ಆಗಿ: ತಮಿಳು ನಟ ವಿಜಯ್‌ಗೆ ಹೈಕೋರ್ಟ್ ತಾಕೀತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು