ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಜನರ ನಿರ್ಲಕ್ಷ್ಯದಿಂದ ಪ್ರಕರಣಗಳಲ್ಲಿ ಏರಿಕೆ -ಆರೋಗ್ಯ ತಜ್ಞರು

Last Updated 21 ಫೆಬ್ರುವರಿ 2021, 9:46 IST
ಅಕ್ಷರ ಗಾತ್ರ

ಮುಂಬೈ: ‘ಮಹಾರಾಷ್ಟ್ರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದ್ದು, ಇದಕ್ಕೆ ಜನರೇ ಹೊಣೆ. ಅವರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸದಿರುವ ಮತ್ತು ಸಾಮಾಜಿಕ ಅಂತರದ ನಿಯಮವನ್ನು ಪಾಲಿಸದ ಕಾರಣ ಪ್ರಕರಣಗಳು ಹೆಚ್ಚಿವೆ’ ಎಂದು ಆರೋಗ್ಯ ತಜ್ಞರು ದೂರಿದ್ದಾರೆ.

‘ಮಹಾರಾಷ್ಟ್ರದ ಗ್ರಾಮೀಣ ಪ್ರದೇಶ ಮತ್ತು ಮುಂಬೈ ಕೊಳಚೆ ಪ್ರದೇಶವಲ್ಲದ ಸ್ಥಳಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಹೇರುವ ಸಾಧ್ಯತೆಗಳಿವೆ’ ಎಂಬ ಮಾತುಗಳು ಕೇಳಿ ಬಂದಿವೆ.

ಇಲ್ಲಿ ಶನಿವಾರ 6281 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದೆ. ಇದರೊಂದಿಗೆ ಸತತ ಐದನೇ ದಿನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 20,93,913 ಕ್ಕೆ ಏರಿಕೆಯಾಗಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್‌ನಿಂದಾಗಿ ಈವರೆಗೆ ಒಟ್ಟು 51,753 ಮಂದಿ ಸಾವಿಗೀಡಾಗಿದ್ದಾರೆ. ಇದರೊಂದಿಗೆ ಈ ರಾಜ್ಯದ ಮರಣ ಪ್ರಮಾಣವು ಶೇಕಡ 2.47ರಷ್ಟಿದೆ. ಇದು ದೇಶದ ಸಾವಿನ ಪ್ರಮಾಣಕ್ಕಿಂತ ಹೆಚ್ಚಾಗಿದೆ.

‘ಪ್ರಕರಣದಲ್ಲಾಗಿರುವ ಏರುಗತಿಯನ್ನು ಕೋವಿಡ್‌ನ ಎರಡನೇ ಅಲೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಜನರು ಕೋವಿಡ್‌ ನಿಯಮಗಳನ್ನು ಪಾಲಿಸುತ್ತಿಲ್ಲ. ಅವರು ತಮ್ಮನ್ನು ತಾವು ನಿಯಂತ್ರಿಸಿಕೊಳ್ಳಬೇಕು’ ಎಂದು ಕೋವಿಡ್‌ ಟಾಸ್ಕ್‌ ಪೋರ್ಸ್‌ನ ಮುಖ್ಯಸ್ಥ ಡಾ.ಸಂಜಯ್‌ ಓಕ್‌ ಅವರು ತಿಳಿಸಿದರು.

ಹೆಚ್ಚಿನ ಪ್ರಕರಣಗಳು ಕಟ್ಟಡಗಳಲ್ಲಿ ವರದಿಯಾಗುತ್ತಿವೆ. ಅವರಲ್ಲಿ ಸಣ್ಣ ಪುಟ್ಟ ಅಥವಾ ಲಕ್ಷಣ ರಹಿತ ಸೋಂಕುಗಳು ಕಾಣಿಸಿಕೊಳ್ಳುತ್ತಿದೆ. ಅವರಿಗೆ ಮನೆಯಲ್ಲೇ ಪ್ರತ್ಯೇಕ ವಾಸವಾಗುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೋವಿಡ್‌ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ’ ಎಂದು ಮಹಾನಗರಪಾಲಿಕೆ ಹೆಚ್ಚುವರಿ ಆಯುಕ್ತರು ಸುರೇಶ್‌ ಕಕಾಣಿ ಅವರು ತಿಳಿಸಿದರು.

‘ಮುಂಬೈಗೆ ಅಂತರರಾಷ್ಟ್ರೀಯ ಪ್ರಯಣಿಕರು ಹೆಚ್ಚಿದ್ದಾರೆ. ಕೇರಳದಿಂದ ಬರುವ ಪ್ರಯಣಿಕರನ್ನು ಪರೀಕ್ಷಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT