ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸರ್ಕಾರ ಬೆಳಗಾವಿಯಲ್ಲಿ ಕಚೇರಿ ಸ್ಥಾಪಿಸಲಿ: ರಾವುತ್‌

‘ಸಾಮ್ನಾ‘ದಲ್ಲಿ ಶಿವಸೇನಾ ಮುಖಂಡ ಪ್ರತಿಪಾದನೆ
Last Updated 18 ಏಪ್ರಿಲ್ 2021, 10:33 IST
ಅಕ್ಷರ ಗಾತ್ರ

ಮುಂಬೈ: ಮರಾಠಿ ಭಾಷಿಕರ ಅಭಿವೃದ್ಧಿಗಾಗಿ ಮಹಾರಾಷ್ಟ್ರ ಸರ್ಕಾರ ಬೆಳಗಾವಿಯಲ್ಲಿ ಕಚೇರಿಯನ್ನು ಸ್ಥಾಪಿಸಬೇಕು ಎಂದು ಶಿವಸೇನಾ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್‌ ರಾವುತ್‌ ಭಾನುವಾರ ಹೇಳಿದ್ದಾರೆ.

ಪಕ್ಷದ ಮುಖವಾಣಿ ‘ಸಾಮ್ನಾ’ದಲ್ಲಿ ಪ್ರಕಟವಾಗುವ ಅವರ ವಾರದ ಅಂಕಣದಲ್ಲಿ ಈ ಕುರಿತು ಬರೆದಿರುವ ಅವರು, ‘ಗಡಿ ಪ್ರದೇಶಗಳಿಗೆ ಸಂಬಂಧಿಸಿ ಸಮನ್ವಯ ಸಚಿವರಾಗಿರುವ ಏಕನಾಥ್‌ ಶಿಂಧೆ ಅವರು ಬೆಳಗಾವಿ ಜಿಲ್ಲೆಗೆ ಮೇಲಿಂದ ಮೇಲೆ ಭೇಟಿ ನೀಡಬೇಕು’ ಎಂದೂ ಹೇಳಿದ್ದಾರೆ.

ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಸಮನ್ವಯ ಸಚಿವರಾಗಿದ್ದ ಚಂದ್ರಕಾಂತ ಪಾಟೀಲ ವಿವಾದಿತ ಗಡಿ ಪ್ರದೇಶಗಳಿಗೆ ಯಾವತ್ತೂ ಭೇಟಿ ನೀಡಲೇ ಇಲ್ಲ. ಗಡಿ ವಿವಾದಕ್ಕೆ ಸಂಬಂಧಿಸಿ ಅವರು ನೀಡಿದ್ದ ಹೇಳಿಕೆಗಳು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದ್ದವು ಎಂದು ಟೀಕಿಸಿದ್ದಾರೆ.

ಗಡಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿದ್ದು, ಕರ್ನಾಟಕದ ವಾದದ ವಿರುದ್ಧ ಮಹಾರಾಷ್ಟ್ರ ಸರ್ಕಾರ ತನ್ನ ನಿಲುವನ್ನು ಮತ್ತಷ್ಟು ಗಟ್ಟಿಗೊಳಿಸಬೇಕು. ರಾಜ್ಯದ ಅಡ್ವೋಕೇಟ್‌ ಜನರಲ್‌ ಅವರು ಬೆಳಗಾವಿ ಸೇರಿದಂತೆ ಗಡಿ ಪ್ರದೇಶಗಳಿಗೆ ಭೇಟಿ ನೀಡಿ, ಗಡಿ ವಿವಾದದ ಬಗ್ಗೆ ಅಲ್ಲಿನ ಜನರಿಗೆ ಸಮಗ್ರ ಮಾಹಿತಿ ನೀಡಬೇಕು ಎಂದು ರಾವುತ್‌ ತಮ್ಮ ಅಂಕಣದಲ್ಲಿ ಹೇಳಿದ್ದಾರೆ.

‘ಮುಂಬೈನಲ್ಲಿ ವ್ಯಾಪಾರ ನಡೆಸಲು ಕನ್ನಡಿಗರಿಗೆ ಕಷ್ಟವಾಗಬಹುದು’

ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಮೇಲೆ ಕನ್ನಡಿಗರು ದಾಳಿ ನಡೆಸಿದರು. ಹೀಗಾಗಿ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ಸೇರಿದ ಬಸ್‌ಗಳನ್ನು ಜಖಂಗೊಳಿಸುವ ಮೂಲಕ ಶಿವಸೈನಿಕರು ತಕ್ಕ ಪ್ರತ್ಯುತ್ತರ ನೀಡಿದರು ಎಂದು ರಾವುತ್‌ ಹೇಳಿದ್ದಾರೆ.

‘ಒಂದು ವೇಳೆ ಇಂಥ ಘಟನೆಗಳು ಮುಂಬೈನಲ್ಲಿ ನಡೆದರೆ, ಇಲ್ಲಿರುವ ಕನ್ನಡಿಗರಿಗೆ ತಮ್ಮ ವ್ಯಾಪಾರ–ವಹಿವಾಟು ನಡೆಸುವುದು ಕಷ್ಟವಾಗುವುದು’ ಎಂದು ಎಚ್ಚರಿಸಿರುವ ಅವರು, ‘ಆ ಮಟ್ಟಕ್ಕೆ ಯಾರೂ ಹೋಗಬಾರದು’ ಎಂದೂ ಹೇಳಿದ್ದಾರೆ.

‘ಏ. 17ರಂದು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ದೇವೇಂದ್ರ ಫಡಣವೀಸ್‌ ಅವರು ಮಹಾರಾಷ್ಟ್ರ ಏಕೀಕರಣ ಸಮಿತಿ ಅಭ್ಯರ್ಥಿ ಶುಭಂ ಶೆಳ್ಕೆ ವಿರುದ್ಧ ಪ್ರಚಾರ ಮಾಡಿದರು’ ಎಂದು ಟೀಕಿಸಿದ್ದಾರೆ.

‘ಶೆಳ್ಕೆ ಅವರು ಬೆಳಗಾವಿಯಲ್ಲಿರುವ ಮರಾಠಿ ಭಾಷಿಕರ ಏಕತೆಯನ್ನು ಪ್ರತಿನಿಧಿಸುವ ಅಭ್ಯರ್ಥಿಯಾಗಿದ್ದರು. ಹೀಗಾಗಿ ಫಡಣವೀಸ್‌ ಅವರು ಶೆ್ಳ್ಕೆ ವಿರುದ್ಧ ಚುನಾವಣಾ ಪ್ರಚಾರ ಕೈಗೊಳ್ಳಬಾರದಿತ್ತು’ ಎಂದೂ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT