ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ: ಒಂದು ವರ್ಷ ಪೂರೈಸುತ್ತಿರುವ ಉದ್ಧವ್ ಠಾಕ್ರೆ ಸರ್ಕಾರ

Last Updated 27 ನವೆಂಬರ್ 2020, 9:04 IST
ಅಕ್ಷರ ಗಾತ್ರ

ಮುಂಬೈ: ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಬಿಜೆಪಿಯ ನಿರಂತರ ಪ್ರಯತ್ನಗಳ ನಡುವೆಯೂ ಮಹಾರಾಷ್ಟ್ರದಲ್ಲಿ ಮಹಾ ಅಘಾಡಿ ಅಘಡಿ (ಎಂವಿಎ) ನೇತೃತ್ವದ ಮೈತ್ರಿ ಸರ್ಕಾರ ಯಶಸ್ವಿಯಾಗಿ ಒಂದು ವರ್ಷ ಪೂರೈಸುತ್ತಿದೆ.

ಶಿವಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಮೈತ್ರಿಯ ಮಹಾ ವಿಕಾಸ ಅಘಾಡಿ ಒಕ್ಕೂಟದೊಂದಿಗೆ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿ ಶನಿವಾರಕ್ಕೆ ಒಂದು ವರ್ಷ. ಮೈತ್ರಿ ಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿ ನಡುವೆ ಸಮನ್ವಯ ಸರಿಯಾಗಿಲ್ಲ ಎಂಬ ಗೊಣಗಾಟದ ನಡುವೆಯೂ ಸರ್ಕಾರ ಮುನ್ನಡೆದಿದೆ.

ಕಳೆದ ವರ್ಷ ಅಕ್ಟೋಬರ್ 19ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ, ಮುಖ್ಯಮಂತ್ರಿ ಯಾರಾಗಬೇಕು ಎಂಬುದರ ಬಗ್ಗೆ ಅಂದಿನ ಶಿವಸೇನೆಯು ಮಿತ್ರಪಕ್ಷ ಬಿಜೆಪಿಯೊಂದಿಗೆ ಚರ್ಚೆ ನಡೆಸುತ್ತಿತ್ತು. ಆಗ ಉದ್ಧವ್‌ ಠಾಕ್ರೆ ತಮ್ಮ ತಂದೆಯವರ ಆಶಯದಂತೆ ಶಿವಸೇನೆಗೆ ಮುಖ್ಯಮಂತ್ರಿ ಸ್ಥಾನ ಬೇಕೆಂದು ಪಟ್ಟು ಹಿಡಿದರು.

ಇದಕ್ಕೂ ಮುನ್ನ ನಡೆದ ಚುನಾವಣಾ ರ‍್ಯಾಲಿಗಳಲ್ಲೂ ಉದ್ಧವ್‌ ಠಾಕ್ರೆ, ‘ತಮ್ಮ ತಂದೆ ಶಿವಸೇನಾ ಅಭ್ಯರ್ಥಿ ಮುಖ್ಯಮಂತ್ರಿ ಆಗಬೇಕೆಂದು ಕನಸು ಕಂಡಿದ್ದರು. ಅದನ್ನು ನಾನು ಈಡೇರಿಸುತ್ತೇನೆ‘ ಎಂದು ಪದೇ ಪದೇ ಹೇಳುತ್ತಿದ್ದರು.

ಇವುಗಳ ನಡುವೆ ಮಹಾರಾಷ್ಟ್ರದಲ್ಲಿ ಹಲವು ರಾಜಕೀಯ ಬೆಳವಣಿಗೆಗಳು ನಡೆದವು. ಈ ರಾಜಕೀಯ ಪ್ರಹಸನದ ನಡುವೆ, ಕೆಲ ದಿನಗಳ ಕಾಲ ರಾಷ್ಟ್ರಪತಿ ಆಳ್ವಿಕೆಯೂ ಬಂದು ಹೋಯಿತು. ನಂತರ ಕಾಂಗ್ರೆಸ್‌, ಎನ್‌ಸಿಪಿಯೊಂದಿಗೆ ‘ಮಹಾ ವಿಕಾಸ ಅಘಡಿ‘ ರಚಿಸಿ, ಶಿವಸೇನಾ ನೇತೃತ್ವದ ಸರ್ಕಾರ ರಚನೆಯಾಯಿತು. ಉದ್ಧವ್‌ ಠಾಕ್ರೆ ನ.28ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಈ ಒಂದು ವರ್ಷದಲ್ಲಿ ಮಹಾರಾಷ್ಟ್ರದ ಕರಾವಳಿ ಪ್ರದೇಶದಲ್ಲಿ ನಿಸರ್ಗ ಚಂಡಮಾರುತ ಬಂದಿತು. ಪೂರ್ವ ವಿದರ್ಭಾದಲ್ಲಿ ಪ್ರವಾಹ, ಮರಾಠವಾಡ ಮತ್ತು ಪಶ್ಚಿಮ ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕಿನ ಅಬ್ಬರ, ನೈಸರ್ಗಿಕ ವಿಕೋಪಗಳು.. ಎಲ್ಲವೂ ಸೇರಿ ಠಾಕ್ರೆ ಸರ್ಕಾರವನ್ನು ಅಲುಗಾಡಿಸಿದವು.

ಈ ನಡುವೆ ಮುಖ್ಯಮಂತ್ರಿ ಮನೆಯಲ್ಲೇ ಕುಳಿತು ಆಡಳಿತ ನಡೆಸುತ್ತಿದ್ದಾರೆ ಎಂಬ ಟೀಕೆಗಳ ಕೇಳಿಬಂದವು. ಇದನ್ನು ಬಿಟ್ಟು ಠಾಕ್ರೆ ವಿರುದ್ಧ ಬೇರೆ ಯಾವುದೇ ಆರೋಪಗಳಿರಲಿಲ್ಲ. ಜತೆಗೆ, ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಪುತ್ರ ಆದಿತ್ಯ ಠಾಕ್ರೆಯನ್ನು ಬಂಧಿಸುವ ವಿಫಲ ಪ್ರಯತ್ನಗಳೂ ನಡೆದವು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

ವರ್ಷದಲ್ಲಿ 40 ಲಕ್ಷ ರೈತರಿಗೆ, ₹38 ಸಾವಿರ ಕೋಟಿ ಸಾಲ ಮನ್ನ ಸೇರಿದಂತೆ ಹಲವು ಪ್ರಮುಖ ಆಡಳಿತಾತ್ಮಕ ನಿರ್ಧಾರಗಳನ್ನು ಎಂವಿಎ ಮೈತ್ರಿ ಸರ್ಕಾರ ಕೈಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT