ಮುಂಬೈ: ಹಣಕಾಸು ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ಜಾರಿ ನಿರ್ದೇಶನಾಲಯದ (ಇ.ಡಿ) ವಿಚಾರಣೆಗೆ ಮತ್ತೆ ಗೈರಾಗಿದ್ದಾರೆ.
ಈ ಹಿಂದೆ ವಿಚಾರಣೆಗೆ ಹಾಜರಾಗುವಂತೆ ಅವರಿಗೆ ಮೂರು ಬಾರಿ ಸಮನ್ಸ್ ನೀಡಲಾಗಿತ್ತು. ಅವರ ಪುತ್ರ ಹಾಗೂ ಪತ್ನಿಗೂ ಸಮನ್ಸ್ ನೀಡಲಾಗಿತ್ತು. ಅವರೂ ವಿಚಾರಣೆಗೆ ಹಾಜರಾಗಿರಲಿಲ್ಲ.
₹100 ಕೋಟಿ ಲಂಚ ಪಡೆಯಲು ಮತ್ತು ಸುಲಿಗೆ ಮಾಡಲು ಮಹಾರಾಷ್ಟ್ರ ಪೊಲೀಸರಿಗೆ ಸೂಚಿಸಿದ್ದ ಆರೋಪಕ್ಕೆ ಸಂಬಂಧಿಸಿ ದೇಶಮುಖ್ ಅವರ ವಿರುದ್ಧ ಹಣಕಾಸು ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೇ ಪ್ರಕರಣದಿಂದಾಗಿ ದೇಶಮುಖ್ ಅವರು ಏಪ್ರಿಲ್‌ನಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗಿ ಬಂದಿತ್ತು.
ದೇಶಮುಖ್ ಮತ್ತು ಅವರ ಆಪ್ತರ ಮುಂಬೈ, ನಾಗ್ಪುರ ನಿವಾಸಗ ಮೇಲೆ ಕಳೆದ ತಿಂಗಳು ಜಾರಿ ನಿರ್ದೇಶನಾಲಯ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದರು. ದೇಶಮುಖ್ ಅವರ ಆಪ್ತ ಕಾರ್ಯದರ್ಶಿ ಸಂಜೀವ್ ಪಲಾಂಡೆ ಮತ್ತು ಸಹಾಯಕ ಕುಂದನ್ ಶಿಂದೆ ಅವರನ್ನು ಬಂಧಿಸಿದ್ದರು.
ಮುಂಬೈಯ ಮಾಜಿ ಪೊಲೀಸ್ ಆಯುಕ್ತ ಪರಂ ಬೀರ್ ಸಿಂಗ್ ಮಾಡಿದ್ದ ಆರೋಪದ ಆಧಾರದಲ್ಲಿ ದೇಶಮುಖ್ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.