ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನಾ ಪಟೋಲೆ ಫೋನ್ ಕದ್ದಾಲಿಕೆ: ಉನ್ನತಮಟ್ಟದ ತನಿಖೆಗೆ 'ಮಹಾ' ಸರ್ಕಾರ ನಿರ್ಧಾರ

Last Updated 6 ಜುಲೈ 2021, 11:59 IST
ಅಕ್ಷರ ಗಾತ್ರ

ಮುಂಬೈ: ಹಿಂದಿನ ಬಿಜೆಪಿ ಸರ್ಕಾರದ ಆಡಳಿತದ ವೇಳೆ ಮಹಾರಾಷ್ಟ್ರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಶಾಸಕ ನಾನಾ ಪಟೋಲೆ ಅವರ ಫೋನ್ ಕದ್ದಾಲಿಕೆ ನಡೆದಿದೆ ಎನ್ನುವ ಆರೋಪಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರು ಮಂಗಳವಾರ ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ಪಟೋಲೆ ಅವರು, ‘2016–17ರ ಅವಧಿಯಲ್ಲಿ ದೇವೇಂದ್ರ ಫಡಣವೀಸ್ ನೇತೃತ್ವದ ಸರ್ಕಾರದಲ್ಲಿ ನನ್ನ ಫೋನ್ ಸೇರಿದಂತೆ ಎನ್‌ಸಿಪಿ, ಬಿಜೆಪಿ, ಶಿವಸೇನಾ ಹಾಗೂ ಕೆಲ ಐಎಎಸ್, ಐಪಿಎಸ್ ಅಧಿಕಾರಿಗಳ ಫೋನ್‌ಗಳನ್ನು ಕೂಡಾ ಟ್ಯಾಪ್ ಮಾಡಲಾಗಿದೆ’ ಎಂದು ಆರೋಪಿಸಿದ್ದರು.

ಈ ಬಗ್ಗೆ ಸರ್ಕಾರವು ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದರು.

ಮಂಗಳವಾರ ವಿಧಾನಸಭೆಯಲ್ಲಿ ಮಾತನಾಡಿದ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್ ಅವರು, ‘ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸುವ ಅಗತ್ಯವಿದೆ. ಹಾಗಾಗಿ, ಉನ್ನತಮಟ್ಟದ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ. ಮುಂದಿನ ಶಾಸಕಾಂಗ ಅಧಿವೇಶನದಲ್ಲಿ ಈ ಬಗ್ಗೆ ವರದಿಯನ್ನು ಸದನದಲ್ಲಿ ಮಂಡಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ.

‘ಯಾರ ಸೂಚನೆಯ ಮೇರೆಗೆ ಫೋನ್ ಟ್ಯಾಪಿಂಗ್ ನಡೆದಿತ್ತು ಎಂದು ತಿಳಿಸಬೇಕು’ ಎಂದು ಕೋರಿದ ಪಟೋಲೆ ಅವರು, ‘ನನ್ನ ಫೋನ್ ನಂಬರ್ ಅನ್ನು ಮಾದಕ ವಸ್ತು ವ್ಯಾಪಾರದಲ್ಲಿ ತೊಡಗಿದ್ದ ಅಮ್ಮದ್ ಖಾನ್ ಎಂಬಾತನಿಗೆ ಸೇರಿದ್ದು ಎಂಬುದನ್ನು ಬಿಂಬಿಸಲು ಯತ್ನಿಸಲಾಗಿತ್ತು. ಇದು ವ್ಯಕ್ತಿಯ ಸ್ವಾತಂತ್ರ್ಯದ ಮೇಲಿನ ಆಕ್ರಮಣ. ನನ್ನ ಫೋನ್ ನಂಬರ್ ಅನ್ನು ಮುಸ್ಲಿಂ ಮತ್ತು ಡ್ರಗ್ ಪೆಡ್ಲರ್ ಒಬ್ಬನಿಗೆ ಏಕೆ ಲಿಂಕ್ ಮಾಡಲಾಯಿತು ಎಂಬುದನ್ನು ತಿಳಿಯಬೇಕಿದೆ’ ಎಂದು ಒತ್ತಾಯಿಸಿದರು.

‘ಆ ಸಮಯದಲ್ಲಿ ನಾನು ಸಂಸದಾಗಿದ್ದೆ ಎಂಬುದು ಅಧಿಕಾರಿಗಳಿಗೆ ತಿಳಿದಿರಲಿಲ್ಲವೇ’ ಎಂದೂ ಅವರು ಪ್ರಶ್ನಿಸಿದರು. ಸಂಸದರಾಗಿದ್ದ ಅವಧಿಯಲ್ಲೇ 2017ರ ಡಿಸೆಂಬರ್‌ನಲ್ಲಿ ಪಟೋಲೆ ಬಿಜೆಪಿಯನ್ನು ತೊರೆದಿದ್ದರು. ನಂತರ ಅವರು ಕಾಂಗ್ರೆಸ್‌ ಪಕ್ಷಕ್ಕೆ ಹಿಂತಿರುಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT