ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಢೀರ್ ಜಾತ್ಯತೀತರಾದಿರೇ: ಸಿಎಂ ಉದ್ಧವ್ ಠಾಕ್ರೆಗೆ ರಾಜ್ಯಪಾಲ ಕೋಶಿಯಾರಿ ಪ್ರಶ್ನೆ

Last Updated 13 ಅಕ್ಟೋಬರ್ 2020, 9:49 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ದೇಗುಲಗಳು ಮತ್ತು ಧಾರ್ಮಿಕ ಕೇಂದ್ರಗಳ ಪುನರಾರಂಭಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಮಧ್ಯೆ ವಾಕ್ಸಮರ ಏರ್ಪಟ್ಟಿದೆ.

ದೇವಸ್ಥಾನಗಳು ಮತ್ತು ಧಾರ್ಮಿಕ ಕೇಂದ್ರಗಳ ಪುನರಾರಂಭಕ್ಕೆ ಅವಕಾಶ ಮಾಡಿಕೊಡಬೇಕೆಂದು ಅನೇಕ ಧಾರ್ಮಿಕ ಸಂಘಟನೆಗಳು ಕಳೆದ ಕೆಲವು ತಿಂಗಳುಗಳಿಂದ ಮಹಾರಾಷ್ಟ್ರ ಸರ್ಕಾರಕ್ಕೆ ಮನವಿ ಮಾಡುತ್ತಲೇ ಇವೆ. ಆದರೆ ಶಿವಸೇನಾ ನೇತೃತ್ವದ ಮೈತ್ರಿ ಸರ್ಕಾರ ಅದಕ್ಕೆ ಅವಕಾಶ ನೀಡಿಲ್ಲ.

ಈ ವಿಚಾರವಾಗಿ ಉದ್ಧವ್ ಠಾಕ್ರೆಗೆ ಪತ್ರ ಬರೆದಿರುವ ರಾಜ್ಯಪಾಲರು, ‘ನೀವು ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿದ್ದೀರಿ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅಯೋಧ್ಯೆಗೆ ಭೇಟಿ ನೀಡುವ ಮೂಲಕ ಭಗವಾನ್ ರಾಮನ ಕುರಿತಾದ ನಿಮ್ಮ ಭಕ್ತಿಯನ್ನು ಸಾರ್ವಜನಿಕವಾಗಿ ತಿಳಿಯಪಡಿಸಿದ್ದೀರಿ. ಆಷಾಢ ಏಕಾದಶಿಯಂದು ಫಂಡರಾಪುರದ ವಿಠ್ಠಲ ರುಕ್ಮಿಣಿ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದೀರಿ’ ಎಂದು ಉಲ್ಲೇಖಿಸಿದ್ದಾರೆ.

ಮುಂದುವರಿದು, ‘ಪೂಜಾ ಸ್ಥಳಗಳ ಪುನರಾರಂಭ ಮುಂದೂಡಲು ನೀವು ಯಾವುದಾದರೂ ದೈವೀಕ ಮುನ್ಸೂಚನೆಯನ್ನು ಪಡೆಯುತ್ತಿದ್ದೀರಾ ಅಥವಾ ದಿಢೀರಾಗಿ, ಹಿಂದೆ ನೀವು ದ್ವೇಷಿಸುತ್ತಿದ್ದ ಜಾತ್ಯತೀತರಾದಿರಾ ಎಂಬುದಾಗಿ ಅಚ್ಚರಿಯಾಗಿದೆ' ಎಂದು ಬರೆದಿದ್ದಾರೆ.

ತಕ್ಷಣವೇ ಇದಕ್ಕೆ ಪ್ರತಿಯಾಗಿ ಪತ್ರ ಬರೆದ ಉದ್ದವ್, ‘ನೀವು ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದೀರಿ. ಜಾತ್ಯತೀತತೆಯು ಸಂವಿಧಾನದ ಅಂಗ’ ಎಂದು ಉತ್ತರಿಸಿದ್ದಾರೆ.

ಕೊರೊನಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಣಕ್ಕಾಗಿ ಜಾರಿಗೊಳಿಸಿದ್ದ ಲಾಕ್‌ಡೌನ್ ಬಳಿಕ ದೇಗುಲಗಳ ಪುನರಾರಂಭಕ್ಕೆ ಅವಕಾಶ ನೀಡದಿರುವುದನ್ನು ವಿರೋಧಿಸಿ ಮಹಾರಾಷ್ಟ್ರದ ಹಲವೆಡೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ನಾಗ್ಪುರ, ಶಿರ್ಡಿ, ಕೊಲ್ಹಾಪುರ್ ಸೇರಿದಂತೆ ಹಲವೆಡೆ ಪ್ರತಿಭಟನೆ ನಡೆದಿದೆ. ಇದರ ಬೆನ್ನಲ್ಲೇ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವಣ ಪತ್ರ ಸಮರ ನಡೆದಿದೆ.

ಈ ಮಧ್ಯೆ, ರಾಜ್ಯಪಾಲರ ಪತ್ರಕ್ಕೆ ಮುಖ್ಯಮಂತ್ರಿಗಳು ನೀಡಿರುವ ಉತ್ತರ ಕೇವಲ ಉತ್ತರವಲ್ಲ. ಅದೊಂದು ಐತಿಹಾಸಿಕ ದಾಖಲೆ ಎಂದು ಶಿವಸೇನಾ ಮುಖ್ಯ ವಕ್ತಾರ ಸಂಜಯ್ ರಾವುತ್ ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT