ಮಂಗಳವಾರ, ಏಪ್ರಿಲ್ 20, 2021
29 °C

ಮಹಾರಾಷ್ಟ್ರ: ಡೀಸೆಲ್‌ ಕಳ್ಳರ ಗ್ಯಾಂಗ್‌ ಮೇಲೆ ದಾಳಿ- 14 ಮಂದಿಯ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಔರಂಗಾಬಾದ್‌: ಮಹಾರಾಷ್ಟ್ರದ ಔರಂಗಾಬಾದ್‌ ಜಿಲ್ಲೆಯ ಕನ್ನಡ ತಾಲ್ಲೂಕಿನಲ್ಲಿ ಅಂತರರಾಜ್ಯ ಡೀಸೆಲ್‌ ಕಳ್ಳರ ಗ್ಯಾಂಗ್‌ ಮೇಲೆ ಪೊಲೀಸರು ದಾಳಿ ನಡೆಸಿದ್ದು, 14 ಮಂದಿಯನ್ನು ಬಂಧಿಸಿದ್ದಾರೆ.

‘ಪೊಲೀಸರು ಫೆ. 17 ರಂದು ಈ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ನಾಲ್ಕು ಟ್ರಕ್‌, ಡೀಸೆಲ್‌ ತುಂಬಿದ್ದ 40 ಕಂಟೇನರ್‌ ಮತ್ತು ₹98 ಲಕ್ಷ ಮೌಲ್ಯದ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

‘ಚಿತೆಗಾಂವ್‌ ಪೆಟ್ರೋಲ್‌ ಬಂಕ್‌ನಿಂದ 3,480 ಲೀಟರ್‌ ಡೀಸೆಲ್‌ ಕಳ್ಳತನವಾಗಿದೆ ಎಂದು ಚಿಕಲಠಾಣಾ ಪೊಲೀಸ್‌ ಠಾಣೆಯಲ್ಲಿ ಫೆ 16ರಂದು ‌ದೂರು ದಾಖಲಾಗಿತ್ತು. ಇದರ ಆಧಾರದ ಮೇರೆಗೆ ಈ ಕ್ರಮವನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮೊಕ್ಷದಾ ಪಾಟೀಲ್‌ ಮಾಹಿತಿ ನೀಡಿದರು.

‘ಈ ಗ್ಯಾಂಗ್‌ನ ಸದಸ್ಯರು ಗುಜರಾತ್‌ನ ತಾಪಿ ಜಿಲ್ಲೆಯಲ್ಲಿ ಟ್ರಕ್‌ಗಳ ಮೂಲಕ ಮರಳನ್ನು ತುಂಬಿಸಿಕೊಂಡು ಉಸ್ಮಾನಾಬಾದ್‌ನಲ್ಲಿ ಮಾರಾಟ ಮಾಡುತ್ತಿದ್ದರು. ಅವರು ಪೆಟ್ರೋಲ್‌ ಬಂಕ್‌ಗಳ ಬಳಿ ತಂಗುತ್ತಿದ್ದರು. ಬಳಿಕ ರಾತ್ರಿ ವೇಳೆ ಬಂಕ್‌ನಲ್ಲಿನ ಹ್ಯಾಂಡ್‌ ಪಂಪ್‌ ಮೂಲಕ ಡೀಸೆಲ್‌ ಕದಿಯುತ್ತಿದ್ದರು. ತಾವು ಉಪಯೋಗಿಸಿ, ಉಳಿದ ಡೀಸೆಲ್‌ ಅನ್ನು ಕಡಿಮೆ ಬೆಲೆಗೆ ಇತರ ಟ್ರಕ್‌ ಚಾಲಕರಿಗೆ ಮಾರುತ್ತಿದ್ದರು‘ ಎಂದು ಅವರು ಮಾಹಿತಿ ನೀಡಿದರು.

‘ಕೆಲ ಮರಳು ತುಂಬಿದ್ದ ಟ್ರಕ್‌ಗಳನ್ನು ಪರಿಶೀಲಿಸಿದಾಗ, ಅದರಲ್ಲಿ 35ರಿಂದ 40 ಲೀಟರ್‌ ಡೀಸೆಲ್‌ ತುಂಬಿರುವ 40 ಕಂಟೇನರ್‌ಗಳು ಪತ್ತೆಯಾದವು. ಇವುಗಳನ್ನು ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ ಟ್ರಕ್‌ಗಳಲ್ಲಿ ಇದ್ದ 12 ಪ್ರಯಾಣಿಕರನ್ನೂ ಬಂಧಿಸಲಾಗಿದೆ’ ಎಂದು ಅವರು ತಿಳಿಸಿದರು.

‘ಇದೇ ರೀತಿಯ ಪ್ರಕರಣಗಳು ಗುಜರಾತ್‌, ಕರ್ನಾಟಕ ಹಾಗೂ ಮಹಾರಾಷ್ಟ್ರದ ಹಲವೆಡೆ ನಡೆದಿದ್ದು ದೂರುಗಳು ದಾಖಲಾಗಿವೆ. ಈ ಕುರಿತು ವಿಚಾರಣೆ ವೇಳೆ 36 ಕಡೆಗಳಲ್ಲಿ ಈ ರೀತಿಯ ಡೀಸೆಲ್‌ ಕಳವು ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೆ, ಈ ಗ್ಯಾಂಗ್‌ ಐದು ವರ್ಷಗಳಿಂದ ಈ ಕೃತ್ಯದಲ್ಲಿ ತೊಡಗಿದೆ’ ಎಂದು ಎಸ್‌.ಪಿ ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು