ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರದಕ್ಷಿಣೆ ಪ್ರಕರಣ: 21 ಉಗುರುಳ್ಳ ಆಮೆ, ಕಪ್ಪು ಲ್ಯಾಬ್ರಡಾರ್‌ ನಾಯಿ ಕೇಳಿದ್ದ ವರ!

ಅಕ್ಷರ ಗಾತ್ರ

ಔರಂಗಬಾದ್‌: ವಿವಾಹ ನಿಶ್ಚಯದ ಬಳಿಕ ವಧುವಿನ ಮನೆಯವರ ಬಳಿ ವರದಕ್ಷಿಣೆಯಾಗಿ ವಿಚಿತ್ರ ಬೇಡಿಕೆ ಸಲ್ಲಿಸುವ ಮೂಲಕ ಮಹಾರಾಷ್ಟ್ರದ ಯುವಕನೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ.

21 ಉಗುರುಳ್ಳ ಆಮೆ, ಕಪ್ಪು ಲ್ಯಾಬ್ರಡಾರ್‌ ನಾಯಿಯನ್ನು ವರದಕ್ಷಿಣೆಯಾಗಿ ನೀಡುವಂತೆ ಬೇಡಿಕೆಯಿಟ್ಟಿದ್ದ. ವರ ಮತ್ತು ಔರಂಗಾಬಾದ್‌ನಲ್ಲಿರುವ ಆತನ ಕುಟುಂಬದ ಐವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು 'ಟೈಮ್ಸ್‌ ಆಫ್‌ ಇಂಡಿಯಾ' ವರದಿ ಮಾಡಿದೆ.

ನಾಸಿಕ್‌ನಲ್ಲಿ ಭಾರತೀಯ ಸೇನೆಯ ಜವಾನನಾಗಿ ಕೆಲಸ ನಿರ್ವಹಿಸುತ್ತಿರುವ ಯುವಕ ಕಳೆದ ಫೆಬ್ರವರಿ ತಿಂಗಳಲ್ಲಿ ವಿವಾಹ ನಿಶ್ಚಯ ಮಾಡಿಕೊಂಡಿದ್ದ. ಬಳಿಕ ವಧುವಿನ ಮನೆಯವರ ಬಳಿ ವರದಕ್ಷಿಣೆ ರೂಪದಲ್ಲಿ ಈಗಾಗಲೇ 2 ಲಕ್ಷ ರೂಪಾಯಿ ನಗದು ಮತ್ತು 10 ಗ್ರಾಂ ಚಿನ್ನವನ್ನು ಪಡೆದಿದ್ದ.

ವಧುವಿಗೆ ಕಾಯಂ ಸರ್ಕಾರಿ ಕೆಲಸ ಕೊಡಿಸುವುದಾಗಿ ಸುಮಾರು 10 ಲಕ್ಷ ರೂಪಾಯಿಯನ್ನು ಕಸಿದುಕೊಂಡಿರುವುದಾಗಿ ಹುಡುಗಿಯ ಮನೆಯವರು ಆರೋಪಿಸಿದ್ದಾರೆ. ಇಷ್ಟಕ್ಕೆ ನಿಲ್ಲಿಸಿದ್ದರೆ ಕಾನೂನು ಕುಣಿಕೆಯಿಂದ ಪಾರಾಗುತ್ತಿದ್ದನೋ ಏನೋ. 21 ಉಗುರುಳ್ಳ ಆಮೆಯನ್ನು ಕೊಡಬೇಕು ಎಂದು ವಧುವಿನ ಮನೆಯವರನ್ನು ಪೀಡಿಸಿದ್ದಾನೆ. ಜೊತೆಗೆ ಕಪ್ಪು ಲ್ಯಾಬ್ರಡಾರ್‌ ನಾಯಿ, ಬುದ್ಧನ ವಿಗ್ರಹ, ಬೆಲೆಬಾಳುವ ದೇವರ ದೀಪಗಳ ಬೇಡಿಕೆ ಇಟ್ಟಿದ್ದಾನೆ.

ಬ್ಲಾಕ್ ಮಾರ್ಕೆಟ್‌ನಲ್ಲಿ 21 ಉಗುರುಳ್ಳ ಆಮೆಗೆ 5-10 ಲಕ್ಷ ರೂಪಾಯಿ ಇದೆ ಎನ್ನಲಾಗಿದೆ. ಅಪರೂಪದ ಈ ಆಮೆಯಿಂದ ಅದೃಷ್ಟ ಕುಲಾಯಿಸುತ್ತದೆ ಎಂಬೆಲ್ಲ ಮೂಢನಂಬಿಕೆಗಳು ಇವೆ.

ಇಂತಹ ಆಮೆಯನ್ನು ಹುಡುಕಲು ವಧುವಿನ ಮನೆಯವರೂ ಹರಸಾಹಸ ಪಟ್ಟಿದ್ದಾರೆ. ವಿಫಲರಾದಾಗ ವರನಿಗೆ ಈ ವಿಚಾರ ತಿಳಿಸಿದ್ದಾರೆ. ವರ ಮದುವೆಯನ್ನು ಮುರಿಯುವುದಾಗಿ ತಿಳಿಸಿ, ಈಗಾಗಲೇ ಕೊಟ್ಟಿದ್ದ ಹಣ ಮತ್ತು ಅಮೂಲ್ಯ ವಸ್ತುಗಳನ್ನು ಹಿಂತಿರುಗಿಸಲು ನಿರಾಕರಿಸಿದ್ದಾನೆ. ಇದರಿಂದ ಭೀತರಾದ ವಧುವಿನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ 21 ಉಗುರುಳ್ಳ ಆಮೆಗೆ ಬೇಡಿಕೆಯಿಟ್ಟ ಸಂಗತಿ ಬಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT