ಸೋಮವಾರ, 4 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ನನ್ನ ಅಪಹರಣವಾಗಿತ್ತು...'–ಸೂರತ್‌ನಿಂದ ತಪ್ಪಿಸಿಕೊಂಡು ಬಂದ ಶಿವಸೇನೆ ಶಾಸಕ

ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟದ ಶಿವಸೇನೆಯ ಶಾಸಕರು ಮಹಾ ವಿಕಾಸ್ ಅಘಾಡಿ ಸರ್ಕಾರದ ವಿರುದ್ಧ ಬಂಡೆದ್ದು, ರಾಜಕೀಯ ಸಂಚಲನ ಸೃಷ್ಟಿಸಿರುವ ಬೆನ್ನಲ್ಲೇ ಅದೇ ಪಕ್ಷದ ಶಾಸಕರೊಬ್ಬರು ಮತ್ತೊಂದು ತಿರುವು ಕೊಟ್ಟಿದ್ದಾರೆ. 'ಅಪಹರಣ' ಮಾಡಿ ಗುಜರಾತ್‌ನ ಸೂರತ್‌ಗೆ ಕರೆದೊಯ್ಯಲಾಗಿತ್ತು ಎಂದು ಶಿವಸೇನೆ ಶಾಸಕ ನಿತಿನ್‌ ದೇಶ್‌ಮುಖ್‌ ಬಹಿರಂಗಪಡಿಸಿದ್ದಾರೆ.

ಶಿವಸೇನೆಯ ಬಂಡಾಯ ನಾಯಕ ಏಕನಾಥ್‌ ಶಿಂಧೆ ಅವರೊಂದಿಗೆ ನಿತಿನ್‌ ದೇಶ್‌ಮುಖ್‌ ದನಿಗೂಡಿಸಿರುವುದಾಗಿ ತಿಳಿಯಲಾಗಿತ್ತು. ಆದರೆ, ತಾನು ಸೂರತ್‌ನಿಂದ ತಪ್ಪಿಸಿಕೊಂಡು ಬಂದಿರುವುದಾಗಿ ಹೇಳುತ್ತಿರುವ ಅವರು, ನನ್ನ ಬೆಂಬಲ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಎಂದಿದ್ದಾರೆ.

ಸೂರತ್‌ನಿಂದ ನಾಗ್ಪುರಕ್ಕೆ ಬಂದಿರುವ ನಿತಿನ್‌ ಅವರು ಮಾಧ್ಯಮದವರೊಂದಿಗೆ ಮಾತನಾಡಿ, 'ನಾನು ಅಲ್ಲಿಂದ ತಪ್ಪಿಸಿಕೊಂಡೆ. ಸುಮಾರು 100ರಿಂದ 150 ಪೊಲೀಸರು ಬಂದು ನನ್ನನ್ನು ಆಸ್ಪತ್ರೆಗೆ ದಾಖಲಿಸಿದರು. ನನಗೆ ಹೃದಯಾಘಾತ ಆಗಿರುವ ರೀತಿ ಬಿಂಬಿಸಲಾಯಿತು ಹಾಗೂ ಕೆಲವು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲು ಪ್ರಯತ್ನಿಸಲಾಯಿತು...' ಎಂದಿದ್ದಾರೆ.

ನಿತಿನ್‌ ದೇಶ್‌ಮುಖ್‌ ಅವರ ಪತ್ನಿ ನಿನ್ನೆ ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ನಿತಿನ್‌ ಅವರು ನಾಪತ್ತೆಯಾಗಿರುವುದಾಗಿ ದೂರು ಸಲ್ಲಿಸಿದ್ದರು. ಅವರಿಗೆ ಪ್ರಾಣಾಪಾಯ ಇರುವ ಶಂಕೆ ವ್ಯಕ್ತಪಡಿಸಿದ್ದರು.

ಕೊನೆಯದಾಗಿ ಜೂನ್‌ 20ರಂದು ಸಂಜೆ 7 ಗಂಟೆಗೆ ಪತಿ ನಿತಿನ್‌ ದೇಶ್‌ಮುಖ್‌ ಅವರೊಂದಿಗೆ ಮಾತನಾಡಿದ್ದು, ಅನಂತರ ಅವರ ಫೋನ್‌ ಸ್ವಿಚ್ಡ್‌ ಆಫ್‌ ಆಗಿರುವುದಾಗಿ ಪ್ರಾಂಜಲಿ ಅವರು ಅಕೋಲಾ ಪೊಲೀಸ್‌ ಠಾಣೆಗೆ ದೂರು ಸಲ್ಲಿಸಿದ್ದರು. ನಿತಿನ್‌ ಅವರು ಮಹಾರಾಷ್ಟ್ರದ ಬಾಲಾಪುರ್‌ ಕ್ಷೇತ್ರದ ಶಾಸಕರಾಗಿದ್ದಾರೆ.

ಸೂರತ್‌ನಲ್ಲಿದ್ದ ಏಕನಾಥ್‌ ಶಿಂಧೆ ಮತ್ತು ಬೆಂಬಲಿಗರು ಇಂದು ಗುವಾಹಟಿ ತಲುಪಿದ್ದಾರೆ. ಸುಮಾರು 40 ಶಾಸಕರ ಬೆಂಬಲ ಇರುವುದಾಗಿ ಶಿಂಧೆ ಹೇಳಿಕೊಂಡಿದ್ದಾರೆ. ಗುವಾಹಟಿಯಲ್ಲಿ ಶಾಸಕರು ಬೀಡುಬಿಟ್ಟಿರುವ ಬಗ್ಗೆ ಪ್ರತಿಕ್ರಿಯಿಸಿರುವ ಶಿವಸೇನೆ ಸಂಸದ ಸಂಜಯ್‌ ರಾವುತ್‌, 'ಭೇಟಿ ನೀಡಲು ಕಾಜಿರಂಗ ಉತ್ತಮ ಸ್ಥಳವಾಗಿದೆ. ಆ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ. ಪರಿಸರವನ್ನು ಸವಿಯಲು ಬಯಸುವವರು ಅಲ್ಲಿಗೆ ಹೋಗಬಹುದು' ಎಂದಿದ್ದಾರೆ.

ಮಹಾರಾಷ್ಟ್ರದಲ್ಲಿ ಈ ರಾಜಕೀಯ ಬೆಳವಣಿಗೆಗಳ ನಡುವೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಮತ್ತು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರಿಗೆ ಕೊರೊನಾ ವೈರಸ್‌ ಸೋಂಕು ತಗುಲಿರುವುದು ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT