ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ರಾಜಕೀಯ: ಬಿಜೆಪಿ–ಸೇನಾ ಮೈತ್ರಿ ಬಗ್ಗೆ ಚಿಗುರೊಡೆದ ‘ಹೇಳಿಕೆಗಳು’

ಹೆಚ್ಚುತ್ತಿದೆ ಗೂಢಾರ್ಥ
Last Updated 18 ಸೆಪ್ಟೆಂಬರ್ 2021, 4:22 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ರಾಜಕೀಯ ವಲಯದಲ್ಲಿ ಚಟುವಟಿಕೆಗಳು ಮತ್ತೆ ಗರಿಗೆದರಿವೆಯೇ?. ಹಾಗೇನೂ ಇಲ್ಲ ಎಂಬ ಉತ್ತರ ಸಿಗುತ್ತದೆ. ಆದರೆ ಕೆಲವು ದಿನಗಳಿಂದ ಶಿವಸೇನಾ ಮುಖಂಡರು ಹಾಗೂ ಬಿಜೆಪಿ ಮುಖಂಡರು ನೀಡುತ್ತಿರುವ ಹೇಳಿಕೆಗಳನ್ನು ಗಮನಿಸಿದರೆ, ಕೆಲವು ಸಂಜ್ಞೆಗಳಂತೂ ರವಾನೆಯಾಗಿವೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ರಾವ್‌ಸಾಹೇಬ್ ಪಾಟೀಲ್ ಧನ್ವೆ ಅವರು ಔರಂಗಾಬಾದ್‌ನ ಕಾರ್ಯಕ್ರಮವೊಂದರಲ್ಲಿ ಆಡಿರುವ ಮಾತುಗಳು ಸಹಜ ಕುತೂಹಲ ಹುಟ್ಟುಹಾಕಿವೆ.

ಮರಾಠಾವಾಡಾ ಮುಕ್ತಿ ಸಂಗ್ರಾಮ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಠಾಕ್ರೆ ‘ಒಂದು ವೇಳೆ ನಾವು ಒಂದಾದರೆ (ಬಿಜೆಪಿ–ಶಿವಸೇನಾ ಮೈತ್ರಿ ಆದಲ್ಲಿ), ಇಲ್ಲಿರುವ ನನ್ನ ಮಾಜಿ ಸಹೋದ್ಯೋಗಿ ಮುಂದಿನ ದಿನಗಳಲ್ಲಿ ಮತ್ತೆ ಸಹೋದ್ಯೋಗಿ ಆಗುತ್ತಾರೆ’ ಎಂದು ಮುಗುಳ್ನಗೆಯಿಂದಲೇ ಹೇಳಿದರು.

ಮಹಾರಾಷ್ಟ್ರದ ಮಹಾವಿಕಾಸ ಅಘಾಡಿ ಮೈತ್ರಿಕೂಟದ ಮುಖ್ಯಸ್ಥರೂ ಆಗಿರುವ ಠಾಕ್ರೆ ಅವರು ರಾಜ್ಯದ ಕಂದಾಯ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಬಾಳಾಸಾಹೇಬ್ ಥೋರಟ್ ಅವರ ಸಮ್ಮುಖದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ.

ಸುದ್ದಿ ವಾಹಿನಿ ಜೊತೆ ಮಾತನಾಡಿದ ಧನ್ವೆ, ಎರಡೂ ಪಕ್ಷಗಳ ಸಿದ್ಧಾಂತಗಳು ಒಂದೇ ಆಗಿದ್ದು, ಸೇನಾ ಜೊತೆ ಮೈತ್ರಿಗೆ ಬಿಜೆಪಿ ಯಾವಾಗಲೂ ಉತ್ಸುಕವಾಗಿದೆ ಎಂದಿದ್ದಾರೆ.

‘ಇನ್ನು ಹೆಚ್ಚು ದಿನ ಮಾಜಿ ಸಚಿವನಾಗಿ ನಾನು ಇರುವುದಿಲ್ಲ’ ಎಂಬುದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಅವರು ಪುಣೆಯಲ್ಲಿ ಹೇಳಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಧನ್ವೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರನ್ನು ಈ ಕುರಿತು ಕೇಳಿದಾಗ, ‘ಅವರು (ಠಾಕ್ರೆ) ಅರಿತುಕೊಂಡದ್ದು ಒಳ್ಳೆಯದು. ನಾವು ಅಧಿಕಾರದ ಮೇಲೆ ಕಣ್ಣಿಟ್ಟಿಲ್ಲ. ಪರಿಣಾಮಕಾರಿ ವಿರೋಧ ಪಕ್ಷದ ಪಾತ್ರವನ್ನು ನಿರ್ವಹಿಸುತ್ತಿದ್ದೇವೆ’ ಎಂದಿದ್ದಾರೆ.

‘ಚಂದ್ರಕಾಂತ್ ಪಾಟೀಲ್ ಅವರನ್ನು ನಾಗಾಲ್ಯಾಂಡ್ ರಾಜ್ಯಪಾಲರನ್ನಾಗಿ ನೇಮಿಸುವ ಮಾಹಿತಿ ಇದೆ. ಆದ್ದರಿಂದ ಅವರು ಮಾಜಿ ಸಚಿವ ಎಂದು ಉಲ್ಲೇಖಿಸಬೇಡಿ ಎಂದಿದ್ದಾರೆ’ ಎಂಬುದಾಗಿ ಶಿವಸೇನಾ ವಕ್ತಾರ ಸಂಜಯ್ ರಾವುತ್ ಹೇಳಿದ್ಧಾರೆ.

‘ನಾನು ಪಾಟೀಲರಿಗೆ ಶುಭ ಹಾರೈಸುತ್ತೇನೆ. ನಮ್ಮ ಸರ್ಕಾರ ಇನ್ನೂ 25 ವರ್ಷ ಆಡಳಿತ ನಡೆಸುವುದರಿಂದ ಅವರು ಇನ್ನೂ 25 ವರ್ಷಗಳ ಕಾಲ ಮಾಜಿ ಸಚಿವರಾಗಿ ಇರಬೇಕಾಗುತ್ತದೆ ಎಂಬುದಾಗಿ ನಾನು ಅವರಿಗೆ ಸಂದೇಶ ಕಳುಹಿಸಿದ್ದೇನೆ’ ಎಂದು ರಾವುತ್ ಹೇಳಿದ್ದಾರೆ.

***

ಶಿವಸೇನಾ–ಎನ್‌ಸಿಪಿ–ಕಾಂಗ್ರೆಸ್ ನಡುವಿನ ಮೈತ್ರಿ ಅಸ್ವಾಭಾವಿಕ. ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು. ಆದರೆ ನನಗೆ ಅಂತಹ ಬೆಳವಣಿಗೆಗಳು ಕಾಣಿಸಿಲ್ಲ

- ದೇವೇಂದ್ರ ಫಡಣವೀಸ್, ವಿರೋಧ ಪಕ್ಷದ ನಾಯಕ

***

ಧನ್ವೆ ಅವರು ಎಲ್ಲರಿಗೂ ಸ್ನೇಹಿತ. ಅವರು ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದಾಗ ಎಲ್ಲವೂ ಚೆನ್ನಾಗಿತ್ತು. ಧನ್ವೆ ಹೇಳಿಕೆಯಲ್ಲಿ ಭೂಕಂಪವಾಗುವಂತ ಯಾವ ವಿಷಯವೂ ಇಲ್ಲ

- ಸಂಜಯ್ ರಾವುತ್, ಶಿವಸೇನಾ ವಕ್ತಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT