ಮಂಗಳವಾರ, ಮೇ 24, 2022
31 °C

ರಾಜ್ಯಸಭೆ ವಿರೋಧ ಪಕ್ಷದ ನಾಯಕರಾಗಿ ಮಲ್ಲಿಕಾರ್ಜುನ ಖರ್ಗೆ ನೇಮಕ

ಏಜನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಲಿದ್ದಾರೆ.

ಸದ್ಯ ವಿರೋಧ ಪಕ್ಷದ ನಾಯಕ ರಾಗಿರುವ ಹಿರಿಯ ಮುಖಂಡ ಗುಲಾಂ ನಬಿ ಆಜಾದ್‌ ಅವರ ರಾಜ್ಯಸಭಾ ಸದಸ್ಯತ್ವ ಫೆ. 15ರಂದು ಮುಕ್ತಾಯಗೊಳ್ಳುವುದು. ಈ ಹಿನ್ನೆಲೆಯಲ್ಲಿ ರಾಜ್ಯಸಭೆಯಲ್ಲಿ ಪಕ್ಷವನ್ನು ಮುನ್ನಡೆಸಲು ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿರುವುದಾಗಿ ಕಾಂಗ್ರೆಸ್‌ ಹೈಕಮಾಂಡ್‌ ಶುಕ್ರವಾರ ತಿಳಿಸಿದೆ.

ವಿರೋಧ ಪಕ್ಷದ ನಾಯಕರನ್ನಾಗಿ ಖರ್ಗೆ ಅವರ ಆಯ್ಕೆ ಮಾಡಿರುವ ಕುರಿತು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರಿಗೆ ಪತ್ರ ಬರೆದಿದ್ದಾರೆ.

ಆಜಾದ್‌ ಅವರ ಅಧಿಕಾರಾವಧಿ ಮುಗಿದ ನಂತರ, ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜ್ಯಸಭೆಯಲ್ಲಿ ಉಪನಾಯಕರಾಗಿರುವ ಆನಂದ್‌ ಶರ್ಮಾ, ಹಿರಿಯ ಮುಖಂಡರಾದ ದಿಗ್ವಿಜಯ್‌ ಸಿಂಗ್‌ ಹಾಗೂ ಪಿ.ಚಿದಂಬರಂ ಅವರ ಹೆಸರುಗಳು ಕೇಳಿ ಬಂದಿದ್ದವು. ಈಗ ಖರ್ಗೆ ಅವರಿಗೆ ಈ ಪಟ್ಟ ಕಟ್ಟುವುದಾಗಿ ಪ್ರಕಟಿಸುವ ಮೂಲಕ ಕಾಂಗ್ರೆಸ್‌ ಈ ಕುರಿತ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದೆ.

ಗಾಂಧಿ ಕುಟುಂಬದ ನಿಷ್ಠರಾಗಿರುವ, 78 ವರ್ಷದ ಖರ್ಗೆ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸ್ಥಾನವನ್ನು ಪಡೆಯುತ್ತಿರುವ ರಾಜ್ಯದ ಎರಡನೇ ಮುಖಂಡರಾಗಿದ್ದಾರೆ. 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ ಖರ್ಗೆ ಅವರನ್ನು ಕಳೆದ ವರ್ಷ ಜೂನ್‌ನಲ್ಲಿ ನಡೆದ ಚುನಾವಣೆಯಲ್ಲಿ ರಾಜ್ಯಸಭೆಗೆ ಆಯ್ಕೆ ಮಾಡಲಾಯಿತು.

ಆಗಿನ ಜನತಾ ಪಾರ್ಟಿ ಸಂಸ್ಥಾಪಕರಲ್ಲೊಬ್ಬರಾದ, ಮೈಸೂರಿನ ಎಂ.ಎಸ್‌.ಗುರುಪಾದಸ್ವಾಮಿ ಅವರು ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು.

1971ರ ಮಾರ್ಚ್‌ನಿಂದ 1972ರ ಏಪ್ರಿಲ್‌ ವರೆಗೆ, 1991ರ ಜೂನ್‌ನಿಂದ ಜುಲೈ ವರೆಗೆ ಗುರುಪಾದಸ್ವಾಮಿ ಅವರು ಈ ಹುದ್ದೆಯಲ್ಲಿದ್ದರು.

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಹುದ್ದೆಯನ್ನು 1969ರಲ್ಲಿ ಸೃಷ್ಟಿಸಲಾಯಿತು. ಕಾಂಗ್ರೆಸ್ (ಒ) ಪಕ್ಷದ ನಾಯಕ ಶ್ಯಾಮನಂದನ್‌ ಮಿಶ್ರಾ ಅವರು ವಿರೋಧ ಪಕ್ಷದ ಮೊದಲ ನಾಯಕರಾಗಿ ಕಾರ್ಯ ನಿರ್ವಹಿಸಿದ್ದರು.

ಇದನ್ನೂ ಓದಿ...

ಚೀನಿಯರ ಮುಂದೆ ನಿಲ್ಲಲಾಗದ ಪ್ರಧಾನಮಂತ್ರಿ ಒಬ್ಬ ಹೇಡಿ: ರಾಹುಲ್ ಗಾಂಧಿ ವಾಗ್ದಾಳಿ

ಭಾರತ ಭೂಲೋಕದ ಸ್ವರ್ಗ, ಭಾರತೀಯ ಮುಸ್ಲಿಮನಾಗಿರಲು ಹೆಮ್ಮೆಯಿದೆ: ಗುಲಾಂ ನಬಿ ಆಜಾದ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು